ಮಂಡ್ಯ ಜಿಲ್ಲೆಯ ಹಲ್ಲೇಗೆರೆ ಸಂತೇಮಾಳ ಸ್ಥಳ ಮತ್ತು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಒತ್ತುವರಿ ತೆರವುಗೊಳಿಸಬೇಕು ಎಂದು ಆಗ್ರಹಿಸಿ ಹಲ್ಲೆಗೆರೆ ಮತ್ತು ಚಂದಗಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಮತ್ತು ಸದಸ್ಯರು ರಸ್ತೆ ತಡೆ ಮಾಡಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣ, “ಶಿರಾ ಮತ್ತು ಮಂಡ್ಯ ರಾಜ್ಯ ಹೆದ್ದಾರಿಗೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದಲೂ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ರಸ್ತೆ ದುರಸ್ತಿ ಕಾರ್ಯ ಮಾತ್ರ ಪರಿಪೂರ್ಣವಾಗಿಲ್ಲ. ನಮ್ಮ ಗ್ರಾಮದ ಸಂತೆಮಾಳವನ್ನು ಕಡೆಗಣಿಸಿ ಅದರ ಸ್ಥಳವನ್ನು ಒತ್ತುವರಿ ಮಾಡಿಕೊಂಡಿದ್ದಾರೆ” ಎಂದು ಆರೋಪಿಸಿದರು.

ಉತ್ತಮ ರಸ್ತೆ ನಿರ್ಮಿಸುವ ಮೂಲಕ ರಾಜ್ಯ ಹೆದ್ದಾರಿಯಲ್ಲಿ ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು. ಈಗ ನಕಲಿ ಆರ್‌ಟಿಸಿ ಸೃಷ್ಟಿಸಿಕೊಂಡಿರುವ ಕೆಲವು ಸಂತೆಮಾಳದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಹಲ್ಲೇಗೆರೆ ಹರೀಶ್ ಮಾತನಾಡಿ, ರಸ್ತೆ ಅಭಿವೃದ್ಧಿಯಾಗಿದೆ ಎಂದು ನಮ್ಮ ಭಾಗದ ರಸ್ತೆಯ ಹಣವನ್ನು ಗುತ್ತಿಗೆದಾರ ತೆಗೆದುಕೊಂಡಿದ್ದಾನೆ. ಒಂದು ಭಾಗದ ರಸ್ತೆ ಕಡೆಯವರು ಒತ್ತುವರಿಯಾಗಿದೆ ಎಂದರೆ ಮತ್ತೊಂದು ಬದಿಯ ಜನರು ಒತ್ತುವರಿಯಾಗಿಲ್ಲ ಎನ್ನುತ್ತಾರೆ. ಇದನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿದೆ. ನಿಜವಾಗಲೂ ರಸ್ತೆ ಒತ್ತುವರಿಯಾಗಿದ್ದರೆ ಅವರಿಗೆ ಪರಿಹಾರ ನೀಡಬೇಕು. ಜೊತೆಗೆ ಒತ್ತುವರಿ ಮಾಡಿಕೊಂಡಿರುವ ಕಡೆ ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮುಖಂಡ ಚಲ್ಲನಾಯಕನಹಳ್ಳಿ ಸುರೇಶ್ ಮಾತನಾಡಿ, ಕರ್ನಾಟಕ ರಾಜ್ಯ ರಸ್ತೆಯು 2002ರಲ್ಲಿ ಡಿಪಿಆರ್ ಆಗಿದೆ. ಅದರ ಪ್ರತಿ ಕೂಡ ಇದೆ ಎಲ್ಲಿ ಒತ್ತುವರಿಯಾಗಿದೆ ಎಂಬುದನ್ನು ತಿಳಿದು ಬಿಡಿಸಬೇಕು. ಈ ಹಿಂದೆ ಭೂ ಸ್ವಾಧೀನ ಆಗಿರುವುದನ್ನು ಬಿಟ್ಟು ಬೇರೆ ಜಾಗವನ್ನು ತೆಗೆದುಕೊಂಡಿದ್ದಾರೆ. ಅದನ್ನು ಬಿಟ್ಟು ಮೂಲ ಭೂಸ್ವಾಧೀನವಾಗಿರುವ ಕಡೆ ರಸ್ತೆ ನಿರ್ಮಾಣ ಮಾಡಿ ರೈತರಿಗೆ ಪರಿಹಾರ ನೀಡಲಿ ಎಂದು ಒತ್ತಾಯಿಸಿದರು.
ಕಳೆದ ವಾರದ ಹಿಂದೆ ಬಂದ ಎಸಿ ಮತ್ತು ತಹಶೀಲ್ದಾರ್, ಜಿಲ್ಲಾ ಪಂಚಾಯಿಯಿ ಸಿಇಒ ಅವರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಮೂಲ ರಸ್ತೆ ಎಲ್ಲಿ ಹೋಗಬೇಕು ಎನ್ನುವುದನ್ನು ತಿಳಿಸಿದ್ದಾರೆ. 2010ರಲ್ಲಿಯೂ ಈ ಹಿಂದೆ ಆದಂತಹ ಡಿಪಿಆರ್ ಅನ್ನು ಮುಂದುವರಿಸುತ್ತಾರೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಗೆ ಹೇಳಿದರೆ, ನಮ್ಮ ಜನರ ಮೇಲೆಯೇ ಆರೋಪ ಮಾಡುತ್ತಾರೆ. ಅವರಿಗೆ ಒಂದು ಮತಕ್ಕೂ ನಾವು ಬೇಕಿತ್ತು. ಈಗ ಬೇಡ, ಅದೇ ಶಾಸಕ ರವಿಕುಮಾರ್ ಗಣಿಗ ಅವರು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಧರಣಿಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಮಾ, ಉಪಾಧ್ಯಕ್ಷೆ ಭಾಗ್ಯಮ್ಮ, ಮುಖಂಡರಾದ ನಿಂಗರಾಜು, ಸಿ.ಕೆ.ಪಾಪಯ್ಯ, ಕರೀಗೌಡ, ಚಲ್ಲನಾಯಕನಹಳ್ಳಿ ಶಂಕರ್, ರಾಜಣ್ಣ, ದಯಾನಂದ, ರಾಮಲಿಂಗಯ್ಯ, ಮಣಿ, ಶಶಿ, ವಿಜಯೇಂದ್ರ ಭಾಗವಹಿಸಿದ್ದರು.
