ದಾವಣಗೆರೆ ಜಿಲ್ಲೆಯ ಹರಿಹರದ ನೀಲಕಂಠೇಶ್ವರ ನಗರಲ್ಲೊಂದು ಶಾಲೆ ಇದೆ. ಇಲ್ಲಿ ಮಳೆ ಬಂದರೆ ಸಾಕು, ಪೋಷಕರು ಬಿಡಿ, ಮಕ್ಕಳೇ ಶಾಲೆಯ ಆವರಣಕ್ಕೆ ಕಾಲಿಡಲು ಹಿಂದೇಟು ಹಾಕುವ ಸ್ಥಿತಿ ಮಳೆಗಾಲದಲ್ಲಿ ನಿರ್ಮಾಣವಾಗುತ್ತದೆ.
ಶಾಲೆಯ ಆವರಣದ ತುಂಬಾ ನೀರು, ಸೋರುತ್ತಿರುವ ಗೋಡೆಗಳು, ಮೂಲೆಯಲ್ಲಿ ಕೊಳಚೆ. ಬೆಂಕಿ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ದುಸ್ಥಿತಿ ಇದು.
ಈ ಶಾಲೆಗೆ ಈ ದಿನ.ಕಾಮ್ ತಂಡ ಭೇಟಿ ನೀಡಿದಾಗ, ಶಾಲೆಯ ಆವರಣದಲ್ಲಿ ಮಕ್ಕಳು ಅದೇ ಮಳೆಯ ಕೊಳಚೆ ನೀರಿನಲ್ಲಿ ಆಟವಾಡುವ, ನಡೆದಾಡುವ ಸ್ಥಿತಿ ಕಂಡು ಬಂತು.
ತಾಲೂಕು ಕೇಂದ್ರದ ಹರಿಹರ ನಗರದಲ್ಲೇ ಸರ್ಕಾರಿ ಶಾಲೆಯ ಸ್ಥಿತಿ ಹೀಗಿರಬೇಕಾದರೆ ಇನ್ನೂ ತಾಲೂಕಿನ ಅತ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ಯಾವ ಸ್ಥಿತಿಯಲ್ಲಿವೆ ಎಂಬುದನ್ನು ಆಲೋಚಿಸಬೇಕಾದ ಪರಿಸ್ಥಿತಿ ಇದೆ. ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಇಲಾಖೆ ಯಾವ ರೀತಿ ಮಕ್ಕಳ ಶೈಕ್ಷಣಿಕ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಸೌಲಭ್ಯಗಳನ್ನು ದೊರಕಿಸುತ್ತಿದೆ ಎನ್ನುವುದಕ್ಕೆ ಈ ಶಾಲೆಯು ಒಂದು ನಿದರ್ಶನವಾಗಿದೆ.
ಮೂಲಭೂತ ಸೌಕರ್ಯಗಳ ಕೊರತೆಯ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಪೋಷಕರು ಸೇರಿಸಲು ಹಿಂದೇಟು ಹಾಕುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೂ ಈ ಶಾಲೆಯಲ್ಲಿ ಈಗ ಸುಮಾರು 105 ಮಕ್ಕಳ ಹಾಜರಾತಿ ಇದ್ದು, ಅವರಿಗೆ ಉತ್ತಮ ಸೌಲಭ್ಯ ನೀಡದಿದ್ದರೆ ಹಾಜರಾತಿ ಮತ್ತಷ್ಟೂ ಕಡಿಮೆಯಾಗುವ ಆತಂಕ ಮೂಡಿಸಿದೆ. ಬಡ ಕುಟುಂಬದ, ಹಿಂದುಳಿದ ಮತ್ತು ಮಧ್ಯಮ ವರ್ಗದವರ ಮತ್ತು ಕೊಳಚೆ ಪ್ರದೇಶದ ಮಕ್ಕಳೇ ಬಹುತೇಕ ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ.
“ಉತ್ತಮ ಹಾಜರಾತಿ ಇರುವ ಇಂತಹ ಶಾಲೆಗಳಿಗೂ ಮೂಲಸೌಕರ್ಯಗಳನ್ನು ಕೊಡದಿದ್ದರೆ, ಸುಸ್ಥಿತಿಯಲ್ಲಿ ಶಾಲಾ ಕಟ್ಟಡಗಳನ್ನು ಆವರಣಗಳನ್ನು ಇಡದಿದ್ದರೆ ಯಾವ ಪೋಷಕರು ತಾನೇ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಇಚ್ಛೆಪಡುತ್ತಾರೆ” ಎಂಬುದೇ ಇಲ್ಲಿನ ನಾಗರಿಕರ ಪ್ರಶ್ನೆಯಾಗಿದೆ.
ಈ ಬಗ್ಗೆ ಈ ದಿನ.ಕಾಮ್‌ನೊಂದಿಗೆ ಅಂಜುಮನ್ ಸಮಿತಿಯ ಸದಸ್ಯ ಸೈಯದ್ ರೆಹಮಾನ್ ಮಾತನಾಡಿ, “ಈ ಶಾಲೆಯ ಸ್ಥಿತಿಯನ್ನು ನಾವು ಬಹಳ ದಿನಗಳಿಂದ ಗಮನಿಸುತ್ತದ್ದೇವೆ. ಮಕ್ಕಳು ಕೆಸರು ನೀರಿನಲ್ಲೇ ಶಾಲೆಗೆ ಹೋಗಿ ಬರುತ್ತಿದ್ದು, ನಗರಸಭೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಾಗಲಿ ಈ ಬಗ್ಗೆ ಗಮನಹರಿಸಿಲ್ಲ. ಸರ್ಕಾರಿ ಶಾಲೆಗಳೆಂದರೆ ಕೀಳಾಗಿ ಕಾಣುತ್ತಿದ್ದಾರೆ. ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ಸರ್ಕಾರಿ ಅಧಿಕಾರಿಗಳಿಗೆ ಬೇಕಾಗಿಲ್ಲ ಎಂದು ಆರೋಪಿಸಿದರು.
ಇದೇ ಶಾಲೆಯಲ್ಲಿ ಓದಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಕ್ರೀಡಾಪಟುವೊಬ್ಬರು ಮಾತನಾಡಿ, “ಶಾಲೆಗೆ ಪ್ರತಿವರ್ಷಕ್ಕೆ ನಿರ್ವಹಣೆಗೆ ದುಡ್ಡು ಬರುವ ಬಗ್ಗೆ ಮಾಹಿತಿ ಇದೆ. ಎಸ್‌ಡಿಎಂಸಿ, ಶಿಕ್ಷಕರು ಏನು ಮಾಡುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾಗಿತ್ತು. ಬಿ ಇ ಓ ಅವರು ಕೂಡ ಇಲ್ಲಿಗೆ ಭೇಟಿ ನೀಡಿಲ್ಲ. ಒಟ್ಟಾರೆ ಮಕ್ಕಳು ಇಲ್ಲಿ ಜಾರಿ ಬಿದ್ದು ಅಥವಾ ಬೇರೆ ರೀತಿಯ ಯಾವುದೇ ರೀತಿಯ ಅನಾಹುತ ಮತ್ತು ಕಾಯಿಲೆಗಳಿಗೆ ತುತ್ತಾದರೆ ಜವಾಬ್ದಾರಿ ಯಾರು? ಇದನ್ನು ಈ ಕೂಡಲೇ ಸಂಬಂಧಪಟ್ಟವರು ಗಮನಹರಿಸಿ, ಪರಿಹಾರ ಮಾಡಬೇಕಾಗಿದೆ” ಎಂದರು.
ಶಾಲಾಭಿವೃದ್ಧಿ ಸಮಿಯಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಅವರನ್ನು ಈ ದಿನ.ಕಾಂ ಮಾತನಾಡಿಸಿದಾಗ, “ನಮ್ಮ ಶಾಲೆಯಲ್ಲಿ ನೂರಾರು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಸರ್ಕಾರಿ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ಶಿಕ್ಷಣ ಇಲಾಖೆ ಯಾವುದೇ ಅಧಿಕಾರಿಗಳು ಇಲ್ಲಿಗೆ ಬರುವುದಿಲ್ಲ” ಎಂದು ದೂರಿದರು.
ಈ ಬಗ್ಗೆ ಹರಿಹರದ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಅವರನ್ನು ಮಾತನಾಡಿಸಿದಾಗ, “ಈ ಬಗ್ಗೆ ನಗರಸಭೆಗೆ ನಾವು ಅಲ್ಲಿನ ನೀರನ್ನು ಸರಾಗವಾಗಿ ಹೋಗಲು ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡಿದ್ದೇವೆ. ಶಾಲಾವರಣದಲ್ಲಿ ಮಣ್ಣನ್ನು ಹಾಕಿಸಿ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿ, ಕಾಮಗಾರಿ ಪ್ರಕ್ರಿಯೆ ಶುರು ಮಾಡಿದ್ದಾರೆ. ಹಾಗೂ ಶಾಲಾ ಕೊಠಡಿಗಳ ದುರಸ್ತಿ ಮತ್ತು ವ್ಯವಸ್ಥೆಯ ಬಗ್ಗೆ ಶಿಕ್ಷಣ ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಅವರಲ್ಲಿ ಮನವಿ ಮಾಡಿ ಅವರಿಗೆ ವರದಿ ನೀಡಲಾಗಿದೆ. ಸ್ಥಳೀಯ ಶಾಸಕರ ಅನುದಾನದ ಅಡಿಯಲ್ಲಿಯೂ ಕೂಡ ಕಾಮಗಾರಿ ಕೈಗೊಳ್ಳಲು ಮನವಿ ನೀಡಲಾಗಿದೆ” ಎಂದು ಉತ್ತರಿಸಿದರು.
ಇದನ್ನು ಓದಿದ್ದೀರಾ? ತುಮಕೂರು | ಕಾಲೇಜಿನಲ್ಲಿ ಸಂವಿಧಾನ ಬದಲಾವಣೆ ಕುರಿತ ಚರ್ಚಾ ಸ್ಪರ್ಧೆ ವಿವಾದ: ದಸಂಸ ಆಕ್ರೋಶ
ಒಟ್ಟಾರೆ ಸರ್ಕಾರಿ ಶಾಲೆಗಳನ್ನು ಮುಚ್ಚಲು ಕಾರಣ ಹುಡುಕುತ್ತಿರುವ ಸಂದರ್ಭಗಳಿರುವಾಗ ಹಾಜರಾತಿ ಉತ್ತಮ ಇರುವ ಈ ಶಾಲೆ ಸುತ್ತಮುತ್ತಲ ಸ್ಲಂ ಜನರ, ಬಡ, ಹಿಂದುಳಿದ ವರ್ಗಗಳ, ಕಾರ್ಮಿಕರ ಮಕ್ಕಳಿಗೆ ಜ್ಞಾನಕ್ಕೆ ಆಸರೆಯಾಗಿದೆ. ಶಾಲೆಗೆ ಉತ್ತಮ ಸೌಲಭ್ಯ ಒದಗಿಸಿ ಜ್ಞಾನದ ಬೆಳಕನ್ನು ನೀಡುವ ಹೊಣೆ ಅಧಿಕಾರಿಗಳು ನಿಭಾಯಿಸಲಿ ಎನ್ನುವ ಕಳಕಳಿ ಈ ದಿನ.ಕಾಮ್ ಮತ್ತು ಸಾರ್ವಜನಿಕರದ್ದಾಗಿದೆ.

ವಿನಾಯಕ್ ಚಿಕ್ಕಂದವಾಡಿ
ದಾವಣಗೆರೆ, ಚಿತ್ರದುರ್ಗ ಜಿಲ್ಲಾ ಸಂಯೋಜಕರು