- ʼಮತದ ಡಬ್ಬಿಗಳನ್ನು ಬಿಚ್ಚಿ ನೋಡಿದ ಬಳಿಕವೇ ವಾಸ್ತವ ಗೊತ್ತಾಗಲಿದೆʼ
- ʼಬಿಜೆಪಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಅವರ ಭ್ರಮೆʼ
ಬಿಜೆಪಿ ರ‍್ಯಾಲಿ ವೇಳೆ 50 ಸಾವಿರಕ್ಕೂ ಹೆಚ್ಚು ಮಂದಿ ಜನಸಾಗರ ಹರಿದು ಬಂದಿದ್ದಾಗಿ ತೋರ್ಪಡಿಸಿಕೊಂಡಿದ್ದಾರೆ. ʼಅವರೆಲ್ಲರು ಬಂದ ಜನರಲ್ಲ, ತಂದ ಜನʼ ಎಂದು ಹಾಸನ ವಿಧಾನಸಬಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ವ್ಯಂಗ್ಯವಾಡಿದ್ದಾರೆ.
ಹಾಸನ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಪ್ರೀತಂ ಗೌಡ ಅವರು ನಾಮಪತ್ರ ಸಲ್ಲಿಕೆ ವೇಳೆ ಬೇರೆ ಬೇರೆ ಕ್ಷೇತ್ರದ ಜನರನ್ನು ಕರೆತಂದಿದ್ದಾರೆ. ಈ ಬಾರಿ ಸೋಲುತ್ತೇವೆಂದು ಖಾತ್ರಿಗೊಂಡ ಅವರು ಇತರೆ ಕ್ಷೇತ್ರಗಳ ಜನರನ್ನು ಕರೆತಂದು ನಗೆಪಾಟಲಿಗೀಡಾಗಿದ್ದಾರೆ” ಎಂದು ಟೀಕಿಸಿದರು.
ಹಾಸನ ಕ್ಷೇತ್ರದಲ್ಲಿ ಬಿಜೆಪಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲುವು ಸಾಧಿಸುವುದು ಅವರ ಭ್ರಮೆಯಾಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೆಲವು ಸಣ್ಣ ವ್ಯತ್ಯಾಸಗಳು ಇದ್ದುದರಿಂದ ಪ್ರೀತಂ ಗೌಡ ಪುಕ್ಕಟೆಯಾಗಿ ಮತ ಪಡೆದುಕೊಂಡರು. ಈ ಬಾರಿ ತುಂಬಾ ಕಷ್ಟವಿದೆ. ಜನರು ನಿರ್ಣಾಯಕರು. ಮತದ ಡಬ್ಬಿಗಳನ್ನು ಬಿಚ್ಚಿ ನೋಡಿದ ಬಳಿಕವೇ ವಾಸ್ತವ ಗೊತ್ತಾಗಲಿದೆ.ಕ್ಷೇತ್ರದ ತ್ರಿಕೋನ ಸ್ಪರ್ಧೆಯಲ್ಲಿ ಈ ಬಾರಿ ಎರಡರಿಂದ ಮೂರು ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ನಿರೀಕ್ಷೆಯಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶೆಟ್ಟರ್ ರಾಜೀನಾಮೆ ಹಿಂದೆ ಆ ‘ಡಿಎನ್‌ಎ’ ಕೈವಾಡ ಇರಬಹುದು: ಎಚ್ ಡಿ ಕುಮಾರಸ್ವಾಮಿ
ಒಂದು ಲಕ್ಷ ಮತಗಳಲ್ಲಿ ಗೆಲುವು ಸಾಧಿಸುತ್ತೇನೆ ಎಂಬ ಪ್ರೀತಂ ಹೇಳಿಕೆಗೆ ಪ್ರತಿಕ್ರಿಯಿಸಿದ ಬನವಾಸೆ ರಂಗಸ್ವಾಮಿ, ಜೆಡಿಎಸ್ ಮತ್ತು ಕಾಂಗ್ರೆಸ್‌ನ ಕೆಲವು ಸಣ್ಣ ವ್ಯತ್ಯಾಸಗಳಿಂದ ಪುಕ್ಕಟೆಯಾಗಿ ಜಯಗಳಿಸಿದ ಪ್ರೀತಂ ಗೌಡ ಹುಲುಸಾದ ಹುಲ್ಲುಗಾವಲಿನಲ್ಲಿ ಮೇಯ್ದು, ಮದ ಬಂದ ಕುದುರೆಯಂತೆ ಆಡುತ್ತಿದ್ದಾರೆ. ಆದರೆ, ಮತದಾರರು ಲಗಾಮು ಹಾಕುತ್ತಾರೆ” ಎಂದು ಹೇಳಿದರು.
ಬನವಾಸೆ ರಂಗಸ್ವಾಮಿ ಅವರು ಏಪ್ರಿಲ್ 19 ಅಥವಾ 20ರಂದು ನಾಮಪತ್ರ ಸಲ್ಲಿಸುವುದಾಗಿ ಸೂಚನೆ ನೀಡಿದ್ದಾರೆ.