ಕೋಟ್ಯಂತರ ರೂ. ಮೌಲ್ಯದ ಮರಗಳನ್ನು ಮಾರಣಹೋಮ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ನಂದಗೋಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸ್ಥಳಕ್ಕೆ ಬೇಲೂರು ತಹಶೀಲ್ದಾರ್ ಮಮತಾ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮರಗಳನ್ನು ಕತ್ತರಿಸಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ.
ಗ್ರಾಮಕ್ಕೆ ರೆವೆನ್ಯೂ ಇನ್‌ಸ್ಪೆಕ್ಟರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿದ್ದಾಗ ಮರ ಕಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅವರು ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದು, ತಹಶೀಲ್ದಾರ್ ಮಮತಾ ಸ್ಥಳಕ್ಎಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾಮದ ಸರ್ವೆ ನಂ.16ರ ಸರ್ಕಾರಿ ಭೂಮಿಯಲ್ಲಿ ಬೆಳೆದಿದ್ದ ಸುಮಾರು 300ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಲಾಗಿದೆ. ಅವುಗಳಲ್ಲಿ ಬೆಲೆ ಬಾಳುವ ಸಾಗವಾನಿ, ಹೊನ್ನೆ, ಬೀಟೆ ಮರಗಳೂ ಕೂಡ ಸೇರಿವೆ ಎಂದು ತಿಳಿದುಬಂದಿದೆ.
ಸರ್ಕಾರಿ ಭೂಮಿಯಲ್ಲಿದ್ದ ಬೆಲೆ ಬಾಳುವ ಮರಗಳನ್ನು ಕಡಿದು ಹಾಕಿದ್ದರೂ, ಅರಣ್ಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಲಾಗಿದೆ.
“ಮರಗಳ್ಳರು ದಿನನಿತ್ಯ ಮರಗಳನ್ನು ಕಡಿದು, ಹೊತ್ತೊಯ್ದಿದ್ದಾರೆ. ಆದರೂ, ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಕೆಲವ ಪ್ರಭಾವಿಗಳು ಕೂಡ ಮರಗಳ್ಳತನ ಮಾಡಿದ್ದು, ಅವರೊಂದಿಗೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ತಹಶೀಲ್ದಾರ್ ಅವರನ್ನು ಒತ್ತಾಯಿಸಿದ್ದಾರೆ.