ಈ ದಿನ ಸಂಪಾದಕೀಯ | ರಾಜಕೀಯ ಸಂಸ್ಕೃತಿಯನ್ನು ಅಧೋಗತಿಗೆ ತಳ್ಳುತ್ತಿರುವ ಬಿಜೆಪಿ ಅಂತಃಕಲಹ

Date:

ರಾಜಕಾರಣಿಗಳೆಂದರೆ ಸಮಾಜದಲ್ಲಿ ಮೊದಲೇ ಒಂದು ರೀತಿಯ ಅಸಹನೆ ಇದೆ. ರಾಜಕಾರಣದ ಬಗ್ಗೆ ವಿದ್ಯಾವಂತ ಸಮುದಾಯದಲ್ಲಿ ಜಿಗುಪ್ಸೆ ಇದ್ದು, ಅದು ಮತದಾನದ ಮೇಲೂ ಪರಿಣಾಮ ಬೀರುತ್ತಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿ ಮುಖಂಡರು ಹೀಗೆ ಒಳಜಗಳ, ನಿಂದನೆಗಳಲ್ಲಿ ತೊಡಗಿರುವುದು ರಾಜಕೀಯ ಪರಂಪರೆಗೆ ಒಳ್ಳೆಯದಲ್ಲ. ರಾಜ್ಯದ ರಾಜಕೀಯ ಸಂಸ್ಕೃತಿಯನ್ನು ಇದು ಅಧೋಗತಿಗೆ ತಳ್ಳುತ್ತಿದೆ.

ಕರ್ನಾಟಕದ ರಾಜಕಾರಣದಲ್ಲಿ ಅನಪೇಕ್ಷಿತ ಬೆಳವಣಿಗೆಗಳು ಹೆಚ್ಚುತ್ತಿವೆ. ಅದರಲ್ಲೂ ಬಿಜೆಪಿ ಪಕ್ಷದಲ್ಲಿ ಅಂತಃಕಲಹ ದಿನ ಕಳೆದಂತೆ ತೀವ್ರಗೊಳ್ಳುತ್ತಲೇ ಇದೆ. ಅತ್ಯಂತ ಶಿಸ್ತಿನ ಪಕ್ಷ ಎಂದು ತಮ್ಮನ್ನು ತಾವು ಕರೆದುಕೊಳ್ಳುವ ಕಮಲ ಪಕ್ಷದ ಮುಖಂಡರ ಕಾರ್ಯವೈಖರಿ, ಅವರು ಬಳಸುತ್ತಿರುವ ಭಾಷೆ ಕರ್ನಾಟಕದ ರಾಜಕಾರಣವನ್ನು ಅಧೋಗತಿಗೆ ತಳ್ಳುತ್ತಿವೆ.

ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಅಂಕುಶ ಹಾಕುವವರೇ ಬಿಜೆಪಿಯಲ್ಲಿಲ್ಲ ಎನ್ನುವಂಥ ವಾತಾವರಣ ನಿರ್ಮಾಣವಾಗಿದೆ. ಅವರು ಮುಸ್ಲಿಮರನ್ನು ವಿರೋಧಿಸಿ ಬಾಯಿಗೆ ಬಂದಂತೆ ಹೇಳಿಕೆ ಕೊಡುವುದು ಒತ್ತಟ್ಟಿಗಿರಲಿ, ಯಡಿಯೂರಪ್ಪ ಸೇರಿದಂತೆ ತಮಗಾಗದ ಸ್ವಪಕ್ಷದ ನಾಯಕರ ವಿರುದ್ಧವೂ ನಿರಂತರವಾಗಿ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಅವರ ಮಾತಿನ ದಾಳಿ ತಡೆಯಿಲ್ಲದಂತೆ, ಏಕಪ್ರಕಾರವಾಗಿ ಮುನ್ನಡೆಯುತ್ತಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

‘ನನ್ನ ವಿರುದ್ಧ ಮಾತನಾಡಲು ವಿಜಯೇಂದ್ರ ಕೆಲವು ಬೀದಿನಾಯಿಗಳನ್ನು ಛೂ ಬಿಟ್ಟಿದ್ದಾನೆ’ ಎಂದು ಯತ್ನಾಳ್ ಮೊನ್ನೆ ಹೇಳಿಕೆ ನೀಡಿದ್ದರು. ಇನ್ನೊಮ್ಮೆ, ’ಕೆಲವು ಹಂದಿ, ಬೀದಿನಾಯಿಗಳು ಬೊಗಳುತ್ತಿರುತ್ತವೆ. ಅವುಗಳಿಗೆ ನಾನು ಉತ್ತರ ಕೊಡವುದಕ್ಕಾಗುವುದಿಲ್ಲ’ ಎಂದು ಮುರುಗೇಶ್ ನಿರಾಣಿಯನ್ನು ಪರೋಕ್ಷವಾಗಿ ತಿವಿದಿದ್ದರು. ಜೊತೆಗೆ ನಾನೇ ವಿಪಕ್ಷ ನಾಯಕ, ನಾನೇ ಪಕ್ಷದ ರಾಜ್ಯಾಧ್ಯಕ್ಷ ಎನ್ನುವ ಮೂಲಕ ತಾನು ಪಕ್ಷದ ಪದಾಧಿಕಾರಿಗಳಿಗೆ ಯಾವ ಕಿಮ್ಮತ್ತನ್ನೂ ಕೊಡುವುದಿಲ್ಲವೆಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಇದು ಆ ಪಕ್ಷದ ದುರ್ಬಲ ನಾಯಕತ್ವದ ಸಂಕೇತ.

ಯತ್ನಾಳ್ ನಂತರ ರೇಣುಕಾಚಾರ್ಯರ ಸರದಿ; ಯಡಿಯೂರಪ್ಪ ಅವರ ಪರವಾಗಿ ಅಖಾಡಕ್ಕಿಳಿದಿರುವ ಬಿಜೆಪಿಯ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ‘ಯತ್ನಾಳ ಒಬ್ಬ ಹುಚ್ಚುನಾಯಿ’ ಎಂದು ಮರುದಾಳಿ ಆರಂಭಿಸಿದ್ದಾರೆ. ಇವರ ಭಾಷೆಯನ್ನು ನೋಡುತ್ತಿದ್ದರೆ, ಇನ್ನೂ ಯಾರ್‍ಯಾರು ಅಖಾಡಕ್ಕಿಳಿದು ಯಾವ ಯಾವ ಬೈಗುಳ ಬಳಸುವರೋ ಎಂದು ಆತಂಕ ಪಡುವಂತಾಗಿದೆ. ಇದು ಹೀಗೇ ಮುಂದುವರೆದು ಇನ್ನೂ ಯಾವ ಸ್ಥಿತಿ ಮುಟ್ಟುತ್ತದೆ ಎನ್ನುವುದನ್ನು ಹೇಳಲಿಕ್ಕಾಗದು. ಹಂದಿ, ನಾಯಿಗಳಿಗೆ ಬಿಜೆಪಿ ನಾಯಕರ ಬೈಗುಳಗಳು ಅರ್ಥವಾಗುವಂತಿದ್ದರೆ ಅವೂ ಕೂಡ ನಾಚಿಕೆ ಪಟ್ಟುಕೊಳ್ಳುತ್ತಿದ್ದವೇನೋ.

ಸರ್ಕಾರದಲ್ಲಾಗಲಿ, ಪಕ್ಷದಲ್ಲಾಗಲಿ ಭಿನ್ನಮತ ಸಹಜ. ಅದು ಪ್ರಜಾಪ್ರಭುತ್ವದ ಸೌಂದರ್ಯವೂ ಹೌದು. ಆದರೆ, ಅದನ್ನು ವ್ಯಕ್ತಪಡಿಸುವುದಕ್ಕೆ ನಿರ್ದಿಷ್ಟವಾದ ವೇದಿಕೆಗಳಿರುತ್ತವೆ. ಅದನ್ನು ಮಂಡಿಸುವುದಕ್ಕೆ ಒಂದು ಸೌಜನ್ಯಯುತವಾದ ಭಾಷೆಯಿರುತ್ತದೆ. ಬಿಜೆಪಿ ನಾಯಕರು ನಾಲ್ಕು ಗೋಡೆಗಳ ಒಳಗೆ ತಮ್ಮ ಭಿನ್ನಮತವನ್ನು ಹಂಚಿಕೊಂಡಿದ್ದರೆ, ಕೊನೆಗೆ ಬೈದಾಡಿಕೊಂಡಿದ್ದರೂ, ಅದು ಇಷ್ಟರ ಮಟ್ಟಿಗೆ ಆ ಪಕ್ಷಕ್ಕೆ ಕೆಟ್ಟ ಹೆಸರು ತರುತ್ತಿರಲಿಲ್ಲ. ಆದರೆ, ಆಜನ್ಮ ವೈರಿಗಳೂ ನಾಚುವಂತೆ ಅವರು ಬಹಿರಂಗ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಕಿತ್ತಾಡುತ್ತಿದ್ದಾರೆ. ಇದು ಬಿಜೆಪಿಯ ನೈತಿಕ ಅಧಃಪತನವಷ್ಟೇ ಅಲ್ಲ, ರಾಜಕಾರಣದ ಮೌಲ್ಯಗಳ ಕುಸಿತವನ್ನೂ ಸಂಕೇತಿಸುತ್ತಿದೆ.

ರಾಜ್ಯ ರಾಜಕಾರಣದಲ್ಲಿ ಈಗಲೂ ಪ್ರಮುಖ ಪಾತ್ರ ವಹಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರಾಗಲಿ, ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಾಗಲಿ ಯಾವತ್ತೂ ಮುತ್ಸದ್ದಿತನದ ಗೆರೆ ದಾಟಿದವರೇ ಅಲ್ಲ. ಎದುರಾಳಿ ಎಷ್ಟೇ ಕೆಣಕಿದರೂ ಅವರ ಭಾಷೆ ಹಳಿ ತಪ್ಪುವುದಿಲ್ಲ; ಮಾತು ಹದ ಮೀರುವುದಿಲ್ಲ. ಬಿಜೆಪಿಯಲ್ಲೂ ಸತ್‌ಪರಂಪರೆಗೆ ಹೆಸರಾದ ರಾಜಕಾರಣಿಗಳಿದ್ದರು. ಬಿ ಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ, ಯಡಿಯೂರಪ್ಪ, ವಿ ಎಸ್ ಆಚಾರ್ಯ, ಡಿ ಎಚ್ ಶಂಕರಮೂರ್ತಿ, ಅನಂತಕುಮಾರ್, ಬಾಬಾಗೌಡ ಪಾಟೀಲ್ ಇವರೆಲ್ಲ ಎಂದೂ ಸಾರ್ವಜನಿಕವಾಗಿ ಬಯ್ಗುಳವನ್ನು ಬಳಸಿದವರಲ್ಲ. ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಿ ಈಚಿನ ವಿಧಾನಸಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದ ಜಗದೀಶ್ ಶೆಟ್ಟರ್ ಕೂಡ ಸಂಯಮದ ಮಾತು ಮತ್ತು ನಡವಳಿಕೆಗೆ ಹೆಸರಾಗಿದ್ದವರು. ಆದರೆ, ಸದ್ಯದ ಕೆಲವು ಬಿಜೆಪಿ ನಾಯಕರು ಅವರ ಪಕ್ಷಕ್ಕಷ್ಟೇ ಅಲ್ಲದೆ ಇಡೀ ನಾಡಿನ ರಾಜಕಾರಣಕ್ಕೆ ಕಳಂಕ ತರುವಂತೆ ನಡೆದುಕೊಳ್ಳುತ್ತಿದ್ದಾರೆ.

ರಾಜಕಾರಣಿಗಳೆಂದರೆ ಸಮಾಜದಲ್ಲಿ ಮೊದಲೇ ಒಂದು ರೀತಿಯ ಅಸಹನೆ ಇದೆ. ಭ್ರಷ್ಟರು, ಎಲ್ಲದರಲ್ಲೂ ಹಣ ಕೊಳ್ಳೆ ಹೊಡೆಯುವವರು, ಕೆಟ್ಟ ಮೂಲಸೌಕರ್ಯಕ್ಕೆ ಕಾರಣಕರ್ತರು… ಹೀಗೆ ಜನರಲ್ಲಿ ಕೋಪ ಇದೆ. ಹೀಗಾಗಿಯೇ ರಾಜಕಾರಣದ ಬಗ್ಗೆ ವಿದ್ಯಾವಂತ ಸಮುದಾಯದಲ್ಲಿ ಜಿಗುಪ್ಸೆ ಇದ್ದು, ಅದು ಮತದಾನದ ಮೇಲೂ ಪರಿಣಾಮ ಬೀರುತ್ತಿದೆ. ಇಂಥ ಸ್ಥಿತಿಯಲ್ಲಿ ಬಿಜೆಪಿ ಮುಖಂಡರು ಹೀಗೆ ಒಳಜಗಳ, ಅವಾಚ್ಯ ನಿಂದನೆಗಳಲ್ಲಿ ತೊಡಗಿರುವುದು ರಾಜಕೀಯ ಪರಂಪರೆಗೆ ಒಳ್ಳೆಯದಲ್ಲ. ರಾಜ್ಯದ ರಾಜಕೀಯ ಸಂಸ್ಕೃತಿಯನ್ನು ಅದು ಅಧೋಗತಿಗೆ ತಳ್ಳುತ್ತಿದೆ.

ಅಧಿಕಾರವಿಲ್ಲದ ಹತಾಶೆ ಬಿಜೆಪಿ ನಾಯಕರ ಈ ರೀತಿಯ ವರ್ತನೆಗೆ ಕಾರಣವೇ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಈ ಒಳಜಗಳದಿಂದ ಬಿಜೆಪಿ ಒಂದು ಸಮರ್ಥ ವಿರೋಧ ಪಕ್ಷವಾಗುವುದರಲ್ಲಿಯೂ ಸೋತಿದೆ. ತಮ್ಮದೇ ಪಕ್ಷದ ಕೇಂದ್ರ ಸರ್ಕಾರದ ಜೊತೆ ಮಾತನಾಡಿ ರಾಜ್ಯಕ್ಕೆ ಬರಬೇಕಾದ ತೆರಿಗೆಯ ಪಾಲು ಕೊಡಿಸುವುದು, ಬರ ಪರಿಹಾರ ಕೊಡಿಸುವುದು ಇತ್ಯಾದಿ ಜನೋಪಯೋಗಿ ಕೆಲಸ ಮಾಡಿದರೆ, ಅದರಿಂದ ಆ ಪಕ್ಷಕ್ಕೂ ಹೆಸರು ಬರುತ್ತದೆ. ರಾಜ್ಯದ ಜನರಿಗೂ ಒಳಿತಾಗುತ್ತದೆ. ಈಗಲಾದರೂ ಪಕ್ಷದ ಹೈಕಮಾಂಡ್ ‘ಶಿಸ್ತಿನ ಪಕ್ಷ’ದಲ್ಲಿ ಕನಿಷ್ಠ ಶಿಸ್ತನ್ನಾದರೂ ತರಲು ಮುಂದಾಗಬೇಕಿದೆ. ತಡವಾಗಿಯಾದರೂ, ರಚನಾತ್ಮಕ ವಿರೋಧ ಪಕ್ಷವಾಗುವತ್ತ ಬಿಜೆಪಿ ಚಿಂತಿಸಿ, ಕಾರ್ಯೋನ್ಮುಖವಾಗಬೇಕಿದೆ.

ಈ ದಿನ ಸಂಪಾದಕೀಯ
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ರೈತರ ವಿರುದ್ಧ ʼರಾಷ್ಟ್ರೀಯ ಭದ್ರತಾ ಕಾಯ್ದೆʼ ಅಸ್ತ್ರ ಪ್ರಯೋಗ; ಪ್ರಜಾಪ್ರಭುತ್ವದ ಅಣಕ

ಈಗಾಗಲೇ ಮೋದಿಯವರ ಮಾತು ನಂಬಿ ಅದಾನಿ ಕಂಪನಿ ದೇಶದೆಲ್ಲೆಡೆ ಗೋದಾಮುಗಳನ್ನು ನಿರ್ಮಾಣ...

ಈ ದಿನ ಸಂಪಾದಕೀಯ | ಬಾಂಡ್ ಎಂಬ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಜನ ಪ್ರಶ್ನಿಸಬಾರದೇ?

ಬಿಜೆಪಿಯ ಹತ್ತು ವರ್ಷಗಳ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಣದುಬ್ಬರದಿಂದ...

ಈ ದಿನ ಸಂಪಾದಕೀಯ | ಮುಸ್ಲಿಮರ ತುಷ್ಟೀಕರಣ, ಬಿಜೆಪಿ ಮತ್ತು ಗೋದಿ ಮೀಡಿಯಾ

ಬಿಜೆಪಿ, ಜೆಡಿಎಸ್ ಅಥವಾ ಕಾಂಗ್ರೆಸ್- ಯಾವ ಪಕ್ಷವಾದರೂ, ಅಧಿಕಾರಕ್ಕೆ ಬಂದಾಗ ಎಲ್ಲರನ್ನೂ...

ಈ ದಿನ ಸಂಪಾದಕೀಯ | ಆರಕ್ಷಕ ಇಲಾಖೆ ಯಾತಕ್ಕಾಗಿ, ಪೊಲೀಸರು ಇರುವುದು ಯಾರ ರಕ್ಷಣೆಗಾಗಿ?

ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ಬೇರೂರಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಸರಕಾರ...