ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ ಸೇವಾ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರೇತರ ಸಂಘ ಸಂಸ್ಥೆ ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (ಹೆಚ್‌ಆರ್‌ಎಸ್)ಯ ಸ್ವಯಂ ಸೇವಕರ ರಾಜ್ಯಮಟ್ಟದ ಸಮಾವೇಶವು ಹಾಸನದ ಆಲೂರಿನಲ್ಲಿರುವ ಮನ್ಸೂರಾ ಸಂಸ್ಥೆಯಲ್ಲಿ ಇಂದು (ಫೆ.2) ಸಮಾರೋಪಗೊಂಡಿತು.

ಹೆಚ್‌ಆರ್‌ಎಸ್ ತುರ್ತು ಸಂದರ್ಭದಲ್ಲಿ ಅನಾಹುತಗಳು ಉಂಟಾದಾಗ ಕೂಡಲೆ ಧಾವಿಸಿ ರಕ್ಷಿಸುವ ಕಾರ್ಯದಲ್ಲಿ ನುರಿತ ತರಬೇತಿದಾರರನ್ನು ಹೊಂದಿರುವ ಸೇವಾ ಸಂಸ್ಥೆಯಾಗಿದೆ. ಈಗಾಗಲೇ ರಾಜ್ಯಮಟ್ಟದಲ್ಲಿ ಅನೇಕ ಕಡೆಗಳಲ್ಲಿ ಕಾರ್ಯವನ್ನು ಮಾಡಿದೆ.
ಇಂದು ನಡೆದ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೆಹೆದಿ ಕಲೀಮ್ ಮಾತನಾಡಿ, ಸಮಾಜ ಸೇವಾ ಸಂಸ್ಥೆಗಳು ಕೂಡ ಸರ್ಕಾರದ ಭಾಗ. ಸಮಾಜದಲ್ಲಿ ನಿಸ್ವಾರ್ಥವಾಗಿ ಕೆಲಸ ಮಾಡುವಾಗ ಸ್ವಯಂ ಸೇವಕರ ಪಾತ್ರ ಕೂಡ ಮುಖ್ಯವಾದದ್ದು. ಅವರ ಕೈಂಕರ್ಯಗಳು ಸಮಾಜದ ಮುಖ್ಯವಾಹಿನಿಗೆ ತಲುಪಬೇಕಾದರೆ ಪ್ರಚಾರ ಕೂಡ ಮುಖ್ಯ. ಆ ಪ್ರಚಾರದ ಭಾಗವೇ ಇನ್ನಷ್ಟು ಕೆಲಸ ಮಾಡಲು ಅವಕಾಶ ನೀಡುತ್ತದೆ ಎಂದು ಅಭಿಪ್ರಾಯಿಸಿದರು.

ಸೋಲಿಡಾರಿಟಿ ಯೂತ್ ಮೂಮೆಂಟ್ ಕರ್ನಾಟಕ ರಾಜ್ಯಾಧ್ಯಕ್ಷ ಲಬೀದ್ ಶಾಫಿ ಮಾತನಾಡುತ್ತಾ, ‘ರಿಲೀಫ್ ಕೆಲಸ ಕಾರ್ಯಗಳ ಸಂದರ್ಭಗಳಲ್ಲಿ ಸ್ವಯಂ ಸೇವಕರು ಇತರರ ಪ್ರಾಣ ಉಳಿಸುವುದರ ಜೊತೆಗೆ ತಾವು ಕೂಡ ಅಪಾಯಗಳ ಬಗ್ಗೆ ಜಾಗರೂಕತೆಯಿಂದ ಇರಬೇಕು’ ಎಂದು ಸಲಹೆ ನೀಡಿದರು.

ಸಂಘಟನೆಯ ಆಂತರಿಕ ಭದ್ರತೆ, ಶಿಸ್ತು, ಸಹನೆ, ದೃಢತೆಯೊಂದಿಗೆ ಕಾರ್ಯಾಚರಿಸಬೇಕು ಎಂದು ಇತರ ಭಾಷಣಗಾರರು ಮಾರ್ಗದರ್ಶನ ನೀಡಿದರು.
ಸಮಾವೇಶದಲ್ಲಿ ‘ತುರ್ತು ಸಂದರ್ಭಗಳಲ್ಲಿ ಎದುರಾಗುವ ಸಮಸ್ಯೆಗಳ’ ಬಗ್ಗೆ ಸಂವಾದ ಕಾರ್ಯಕ್ರಮ ನಡೆಸಲಾಯಿತು. ಈ ಸಂವಾದದಲ್ಲಿ ಸಾಮಾಜಿಕ ಕಾರ್ಯಕರ್ತರಾದ ತನ್ವೀರ್ ಮರ್ಸಿ ಮಿಷನ್, ಕೇರಳದ ಪೀಪಲ್ಸ್ ಫೌಂಡೇಶನ್‌ನ ನಿರ್ದೇಶಕರಾದ ಶಮೀಲ್ ಸಜ್ಜಾದ್, ಬೆಂಗಳೂರಿನ ಪ್ರಾಜೆಕ್ಟ್ ಸ್ಮೈಲ್‌ನ ಟ್ರಸ್ಟಿಯಾದ ಮೊಹಮ್ಮದ್ ಉಮರ್ ಭಾಗವಹಿಸಿದ್ದರು. ಸಂವಾದವನ್ನು ಸೋಲಿಡಾರಿಟಿ ಯೂತ್ ಮೂಮೆಂಟ್‌ನ ಮುಖಂಡ ಡಾ.ನಸೀಮ್ ಅಹ್ಮದ್ ನಿರ್ವಹಿಸಿದರು.
ಸಮಾವೇಶದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಬೃಂದಾ ಅಡಿಗೆ ಹಾಗೂ ಅಯ್ಯೂಬ್ ಅಹ್ಮದ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ.ಮುಹಮ್ಮದ್ ಸಾದ್ ಬೆಳ್ಗಾಮಿ, ಹೆಚ್.ಅರ್.ಎಸ್ ನಿರ್ದೇಶಕರಾದ ಕೆ.ಎಂ.ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮರಕಡ, ಮುಖಂಡರಾದ ಅಥರುಲ್ಲಾ ಶರೀಫ್, ನಿವೃತ್ತ ಐಪಿಎಸ್ ಅಧಿಕಾರಿ ಮಕ್ಬೂಲ್ ಅಹ್ಮದ್ ಅನಾರ್ ವಾಲ, ಮೊಹಮ್ಮದ್ ಅಜ್ಮಲ್ ಶಕೀಬ್ ಉಪಸ್ಥಿತರಿದ್ದರು.

ಈ ಸುದ್ದಿ ಓದಿದ್ದೀರಾ?: ಹಾಸನ | ಹೊನ್ನಾವರ ಗ್ರಾಮ ಪಂಚಾಯಿತಿ ಅಧ್ಯಕ್ಷರ ಚುನಾವಣೆ; ಪಿ ಕೆ ಸುರೇಶ್ ಅವಿರೋಧ ಆಯ್ಕೆ
ಮುಹಮ್ಮದ್ ಖಾಸಿಮ್ ಮಂಗಳೂರು ಹಾಗೂ ಸಲೀಂ ಬೋಳಂಗಡಿ ಕಾರ್ಯಕ್ರಮ ನಿರೂಪಿಸಿದರು. ಹೆಚ್ ಆರ್ ಎಸ್ ಕ್ಯಾಪ್ಟನ್ ಅಮೀರ್ ಸಿದ್ದೀಕಿಯವರ ನೇತೃತ್ವದಲ್ಲಿ ನುರಿತ ತರಬೇತುದಾರರ ಉಪಸ್ಥಿತಿಯಲ್ಲಿ ಮೋಕ್ ಎಕ್ಸೆಸೈಸ್ ಡೆಮೋ ಮಾಡಿ ತೋರಿಸಲಾಯಿತು.



