ರಾಷ್ಟ್ರೀಯ ಹೆದ್ದಾರಿ 75 ಬೆಂಗಳೂರು-ಮಂಗಳೂರು ಶಿರಾಡಿಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ಸಕಲೇಶಪುರ ತಾಲೂಕಿನ ದೊಡ್ಡತಪ್ಲೆ ಬಳಿ ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಗುಡ್ಡ ಕುಸಿತದ ರಭಸಕ್ಕೆ ಎರಡು ಕಂಟೇನರ್ ಹಾಗೂ ಒಂದು ಟ್ಯಾಂಕರ್ ಪಲ್ಟಿಯಾಗಿದ್ದು, ವಾಹನಗಳೊಟ್ಟಿಗೆ ಚಾಲಕರೂ ಕೂಡಾ ಗುಡ್ಡ ಕುಸಿತದ ರಭಸಕ್ಕೆ ಮಣ್ಣಿನಡಿ ಸಿಲುಕಿದ್ದರು.
ಪೊಲೀಸರು ಹಾಗೂ ಗುತ್ತಿಗೆ ಪಡೆದ ಕಂಪನಿ ಸಿಬ್ಬಂದಿಗಳು ಮೂವರು ಚಾಲಕರನ್ನು ರಕ್ಷಿಸಿದ್ದಾರೆ. ಜತೆಗೆ ಕಂಟೇನರ್ ಪಲ್ಟಿಯಾದ ಸ್ಥಳಕ್ಕೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದು, “ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಗೊಂಡಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಮತ್ತೆ ಸಂಚಾರ ಬಂದ್ ಆಗಿದೆ” ಎಂದು ಮಾಹಿತಿ ನೀಡಿದ್ದಾರೆ.
“ಮಳೆ ಮುಂದುವರೆದಿದ್ದು, ಮತ್ತೆ ಗುಡ್ಡ ಕುಸಿಯುವ ಸಾಧ್ಯತೆ ಇದೆ. ರೈಲ್ವೆ ಹಳಿ ಮೇಲೆ ಹಾದು ಹೋಗಿರುವ ರಸ್ತೆಯ ತುದಿಯಲ್ಲಿರುವ ಕಂಟೇನರ್ ರೈಲ್ವೆ ಹಳಿ ಮೇಲೆ ಬೀಳುವ ಆತಂಕವಾಗಿದೆ. ರೈಲ್ವೆ ಹಳಿ ಮೇಲೂ ಗುಡ್ಡ ಕುಸಿದಿದ್ದು,
ಈಗಾಗಲೇ ಬಂದ್ ಆಗಿರುವ ಸಕಲೇಶಪುರ-ಮಂಗಳೂರು ರೈಲ್ವೆ ಮಾರ್ಗದಲಿ ತ್ವರಿತಗತಿಯ ದುರಸ್ತಿ ಕಾರ್ಯ ನಡೆಯುತ್ತಿದೆ” ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ನಾಪೋಕ್ಲು ಭಾಗದಲ್ಲಿ ವಿದ್ಯುತ್ ಕಣ್ಣ ಮುಚ್ಚಾಲೆ; ಗ್ರಾಮಸ್ಥರ ಆಕ್ರೋಶ
ಇದೀಗ ದೊಡ್ಡತಪ್ಲೆ ಬಳಿ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದಿರುವುದರಿಂದ ದುರಸ್ತಿ ಕಾರ್ಯಕ್ಕೆ ಸಂಕಷ್ಟ ಎದುರಾಗಿದೆ. ಕಡಗರವಳ್ಳಿ-ಯಡಕುಮಾರಿ ಬಳಿ ನಡೆಯುತ್ತಿದ್ದ ರೈಲ್ವೆ ಹಳಿ ದುರಸ್ತಿ ಕಾರ್ಯಕ್ಕೆ ಕಾರ್ಮಿಕರು, ತಿಂಡಿ, ಊಟ ಹಾಗೂ ಇತರೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲುಗಳ ಸಂಪರ್ಕ ಕಡಿತಗೊಂಡಿದೆ.