ಹಾಸನ ಜಿಲ್ಲೆಯ ಶ್ರವಣಬೆಳಗೊಳ ಮತ್ತು ಗದಗ ಜಿಲ್ಲೆಯ ಲಕ್ಕುಂಡಿಯ ಸ್ಮಾರಕಗಳನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾತ್ಕಾಲಿಕ ಪಟ್ಟಿಗೆ ಸೇರಿಸಲು ರಾಜ್ಯ ಪುರಾತತ್ವ ವಸ್ತುಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಪ್ರಸ್ತಾವನೆ ಸಿದ್ದಪಿಡಿಸುತ್ತಿದೆ. ಅದಕ್ಕಾಗಿ, ದಸ್ತಾವೇಜನ್ನು ತಯಾರಿಸಲು, ಸ್ಥಳದ ಅಧ್ಯಯನ ನಡೆಸಲು ಹಾಗೂ ವರದಿಯನ್ನು ಸಿದ್ದಪಡಿಸಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಸಲ್ಲಿಸಲು ಸಿದ್ದತೆ ನಡೆಯುತ್ತಿದೆ ಎಂದು ರಾಜ್ಯ ಪುರಾತತ್ವ ಇಲಾಖೆಯ ಕಮಿಷನರ್ ಎ. ದೇವರಾಜ್ ಮಾಹಿತಿ ನೀಡಿದ್ದಾರೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಯಾವುದೇ ಸ್ಮಾರಕವನ್ನು ಸೇರಿಬೇಕೆಂದರೆ, ಅದಕ್ಕೂ ಮುಂಚೆ ಆ ಸ್ಮಾರಕಗಳನ್ನು ತಾತ್ಕಾಲಿಕ ಪಟ್ಟಿಗೆ ಸೇರಿಸಲು ನಾಮನಿರ್ದೇಶನ ಮಾಡಬೇಕು. ಹಾಗಾಗಿ, ಶ್ರವಣಬೆಳಗೊಳ ಮತ್ತು ಲಕ್ಕುಂಡಿ ಸ್ಮಾರಕಗಳನ್ನು ಶಿಫಾರಸ್ಸು ಮಾಡಲು ಸಿದ್ದತೆ ನಡೆಯುತ್ತಿದೆ ಎಂದು ದೇವರಾಜ್ ಹೇಳಿರುವುದಾಗಿ ‘ದಿ ಹಿಂದು’ ವರದಿ ಮಾಡಿದೆ.
“ಯುನೆಸ್ಕೋ ತಾತ್ಕಾಲಿಕ ಪಟ್ಟಿಗೆ ಸೇರಿಸುವುದು ಮೊದಲ ಹಂತವಾಗಿದೆ. ಯಾವುದೇ ಸ್ಮಾರಕವನ್ನು ಅಂತಿಮ ಶಾಸನಕ್ಕಾಗಿ ಪರಿಗಣಿಸುವ ಮೊದಲು ಕನಿಷ್ಠ ಒಂದು ವರ್ಷದ ಕಾಯುವ ಅವಧಿ ಇರುತ್ತದೆ. ಈಗ ಮೊದಲ ಹೆಜ್ಜೆ ಇಡಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ತಾತ್ಕಾಲಿಕ ಪಟ್ಟಿಯಲ್ಲಿ ಒಂದು ವರ್ಷದ ಅವಧಿಯನ್ನು ಪೂರ್ಣಗೊಳಿಸಿದರೂ, ಅಂತಿಮ ಶಾಸನಕ್ಕೆ ನಾಮನಿರ್ದೇಶನಗೊಳ್ಳುವುದು ವಿಳಂಬವಾಗಬಹುದು. ಏಕೆಂದರೆ, ಒಂದು ರಾಷ್ಟ್ರವು ಒಂದು ವರ್ಷದಲ್ಲಿ ಒಂದು ಸ್ಮಾರಕವನ್ನು ಮಾತ್ರ ಅಂತಿಮ ಶಾಸನಕ್ಕೆ ನಾಮನಿರ್ದೇಶನ ಮಾಡಬಹುದು ಎಂಬ ನಿಯಮವಿದೆ” ಎಂದು ಅವರು ವಿವರಿಸಿದ್ದಾರೆ.
ಈ ಹಿಂದೆ, 2014ರಲ್ಲಿ ಬೇಲೂರು ಮತ್ತು ಹಳೇಬೀಡು ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ನಾಮನಿರ್ದೇಶನ ಗೊಂಡಿದ್ದವು. ಈ ವರ್ಷ ಸೆಪ್ಟಂಬರ್‌ನಲ್ಲಿ ಅವುಗಳನ್ನು ಯುನೆಸ್ಕೋ ವಿಶ್ವ ಪರಂಪರೆ ತಾಣಗಳ ಖಾಯಂ ಪಟ್ಟಿಗೆ ಸೇರಿಸಲಾಗಿದೆ.
ಈ ಸುದ್ದಿ ಓದಿದ್ದೀರಾ?: ಯಾದಗಿರಿ | ಪಾಳು ಬಿದ್ದಿರುವ ಸುರಪುರ ಸಂಸ್ಥಾನದ ವನದುರ್ಗ ಕೋಟೆ
ಜೈನರ ಪುಣ್ಯ ಕ್ಷೇತ್ರ ಎಂದು ಹೇಳಲಾಗಿರುವ ಶ್ರವಣಬೆಳಗೊಳ, ಗಂಗರ ಕಾಲದ ಇತಿಹಾಸ ಹೊಂದಿದೆ. ಗಂಗರ ಅವಧಿಯಲ್ಲಿ ಕ್ರಿ.ಶ 981ರಲ್ಲಿ ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಮೂರ್ತಿಯನ್ನು ಚಾವುಂಡರಾಯ ಕೆತ್ತಿಸಿದ್ದರು. ಮೌರ್ಯ ಚಕ್ರವರ್ತಿ ಚಂದ್ರಗುಪ್ತ ಮೌರ್ಯ ಕೂಡ ಶ್ರವಣಬೆಳಗೊಳದಲ್ಲಿ ಸಲ್ಲೇಖನ ವ್ರತ ಸ್ವೀಕರಿಸಿದ್ದರು. ಇಲ್ಲಿ 800ಕ್ಕೂ ಹೆಚ್ಚು ಶಾಸನಗಳಿವೆ.
ಲಕ್ಕುಂಡಿಯಲ್ಲಿ ಸೋಮೇಶ್ವರ, ಕುಂಬರೇಶ್ವರ, ಮಾಣಿಕೇಶ್ವರ, ನಾಗನಾಥ, ನಾಗೇಶ್ವರ, ಕಾಶಿವಿಶ್ವೇಶ್ವರ, ಶಂಕರಲಿಂಗ, ಲಕ್ಷ್ಮೀನಾರಾಯಣ, ಗಣಪತಿ, ಚಂದ್ರಮೌಳೇಶ್ವರ, ಜೈನ ಬಸದಿ, ಬ್ರಹ್ಮ ಜಿನಾಲಯ ಮುಂತಾದ ಹಲವಾರು ಪುರಾತನ ದೇವಾಲಯಗಳಿವೆ.