ಮಲೆನಾಡು, ಅರೆ ಮಲೆನಾಡು, ಶಿಲ್ಪಕಲೆಗಳ ನಾಡೂ ಆಗಿರುವ ಹಾಸನ ಜಿಲ್ಲೆ, ಇತ್ತೀಚೆಗೆ ಹಲವಾರು ರೀತಿಯ ದೌರ್ಜನ್ಯ, ದಬ್ಬಾಳಿಕೆ, ನಾಪತ್ತೆ, ಜೀತ ಪದ್ದತಿಗಳಂತ ಪ್ರಕರಣಗಳಿಂದ ಸುದ್ದಿಯಾಗುತ್ತಿದೆ. ಕೆಲವು ತಿಂಗಳ ಹಿಂದೆಯಷ್ಟೇ ಹಾಸನ ಹೊರವಲಯದಲ್ಲಿದ್ದ ಕಂಪನಿಯೊಂದರಲ್ಲಿ ದೂರದ ಊರುಗಳಿಂದ ಕಾರ್ಮಿಕರನ್ನು ಕರೆತಂದು ಜೀತದಾಳುಗಳಂತೆ ದುಡಿಸಿಕೊಳ್ಳಲಾಗುತ್ತಿದೆ ಎಂದು ವರದಿಯಾಗಿತ್ತು. ಅಲ್ಲಿದ್ದ ಕಾರ್ಮಿಕರನ್ನು ರಕ್ಷಿಸಲಾಗಿತ್ತು.
ಇದೀಗ, ಅಂತಹದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ 169 ಮಂದಿ ನಾಪತ್ತೆಯಾಗಿದ್ದ ಪ್ರಕರಣದ ಬೆನ್ನತ್ತಿರುವ ಪೊಲೀಸರು, 51 ಮಂದಿಯನ್ನು ರಕ್ಷಿಸಿದ್ದಾರೆ.
ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ 12 ವರ್ಷಗಳಲ್ಲಿ (2011ರಿಂದ 2023) 169 ಮಂದಿ ಕಾಣೆಯಾಗಿದ್ದರು. ಜಿಲ್ಲಾ ವರಿಷ್ಠಾಧಿಕಾರಿ ಹರಿರಾಂ ಶಂಕರ್ ನೇತೃತ್ವದಲ್ಲಿ ಕೆಲವು ಪ್ರಕರಣಗಳನ್ನು ಭೇದಿಸಲಾಗಿದ್ದು, 21 ಮಂದಿ ಮಕ್ಕಳು, 30 ಮಂದಿ ಮಹಿಳೆಯರು ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಅವರಲ್ಲಿ ಕೆಲವರು ಉತ್ತಮ ಜೀವನ ರೂಪಿಸಿಕೊಂಡಿದ್ದಾರೆ. ಅವರನ್ನು ಬಿಟ್ಟು, ಅಭದ್ರ ಸ್ಥಿತಿಯಲ್ಲಿದ್ದ ಸಂತ್ರಸ್ತರನ್ನು ಪೊಲೀಸರು ರಕ್ಷಿಸಿದ್ದಾರೆ. ಅಲ್ಲದೆ, ಓರ್ವ ಮಹಿಳೆ ಕೊಲೆಯಾಗಿರಬಹುದು ಎಂದು ಶಂಕಿಸಲಾಗಿದೆ. ರಕ್ಷಿಸಲಾದ ಮಹಿಳೆಯರಲ್ಲಿ ಕೆಲವರು ಅತ್ಯಾಚಾರಕ್ಕೆ ಒಳಗಾಗಿದ್ದಾರೆ. ಒಬ್ಬರಲ್ಲಿ ಎಚ್‌ಐವಿ ಸೋಂಕು ದೃಢಪಟ್ಟಿದೆ. ಅವರ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದಿವೆ ಎಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ಸಾಹಿತಿ ಹಾಗೂ ಮಹಿಳಾ ಜಾಗೃತ ದಳದ ರೂಪಾ ಹಾಸನ ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಹಾಸನ ಜಿಲ್ಲೆಯಲ್ಲಿ ಕಳೆದುಹೋಗಿರುವ ಮೊಬೈಲಲ್‌ಗಳ ಪತ್ತೆಗೆ ಇತ್ತೀಚೆಗೆ ಮೊಬೈಲ್ ಆ್ಯಪ್ ಬಿಡುಗಡೆಯಾಗಿತ್ತು. ಆ ವೇಳೆ, ನಾಪತ್ತೆಯಾಗಿರುವ ಮಕ್ಕಳು, ಮಹಿಳೆಯರ ಹುಡುಕಾಟಕ್ಕೂ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೆವು. ಪೊಲೀಸರು ತಂಡ ರಚಿಸಿಕೊಂಡು ಪತ್ತೆ ಕಾರ್ಯ ಆರಂಭಿಸಿದ್ದರು. ಒಂದು ತಿಂಗಳ ಕಾರ್ಯಾಚರಣೆಯಲ್ಲಿ 51 ಮಂದಿ ಪತ್ತೆಯಾಗಿದ್ದಾರೆ. ಪೊಲೀಸರ ಕಾರ್ಯಾಚರಣೆ ಶ್ಲಾಘನೀಯ. ಕಾರ್ಯಾಚರಣೆಯನ್ನು ಮುಂದುವರೆಸುವುದಾಗಿ ಪೊಲೀಸರು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.

“ಪತ್ತೆಯಾಗಿರುವವರ ಕುರಿತು ಕೂಲಂಕಷ ತನಿಖೆ ನಡೆಸಬೇಕಾಗಿದೆ. ಸಂತ್ರಸ್ತರಿಗೆ ಆಪ್ತ ಸಮಾಲೋಚನೆ, ಪರಿಹಾರಕ್ಕೆ ಒದಗಿಸಲು ಗಮನ ಹರಿಸಬೇಕು. ಸಂತ್ರಸ್ತ ಮಕ್ಕಳಿಗೆ ಮಕ್ಕಳ ಕಲ್ಯಾಣ ನಿಧಿಯಿಂದ ಶಿಕ್ಷಣದ ವ್ಯವಸ್ಥೆಯಾಗಬೇಕು. ಅದಕ್ಕಾಗಿ, ಮಹಿಳಾ ಜಾಗೃತ ದಳ ನಾನಾ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಮಹಿಳಾ ಜಾಗೃತ ದಳದ ಸದಸ್ಯೆ ಮಮತಾ ಶಿವು ಅವರು ಮಾತನಾಡಿ, “ಕಾಣೆಯಾಗಿದ್ದವರು ಪತ್ತೆಯಾಗಿದ್ದಾರೆ. ಆದರೆ, ಆದರೆ, ಸಂತ್ರಸ್ತ ಮಕ್ಕಳು ಮತ್ತು ಮಹಿಳೆಯರ ಕುರಿತು ನಿಖರ ಮಾಹಿತಿಗಳಿಲ್ಲ. ಸಂತ್ರಸ್ತರು ಎಲ್ಲಿದ್ದರು. ಏನು ಮಾಡುತ್ತಿದ್ದರು. ಅವರನ್ನು ಕರೆದೊಯ್ದಿದ್ದರೇ ಅಥವಾ ಅಪಹರಿಸಲಾಗಿತ್ತೆ. ಅಪಹರಿಸಿದ್ದವರು ಯಾರು ಎಂಬ ಇನ್ನೂ ಹಲವಾರು ಮಾಹಿತಿಗಳು ಬಹಿರಂಗವಾಗಬೇಕು. ನಾಪತ್ತೆ ಪ್ರಕರಣದ ಹಿಂದಿರುವವರಿಗೆ ಶಿಕ್ಷೆಯಾಗಬೇಕು” ಎಂದು ಹೇಳಿದ್ದಾರೆ.
“ನಿಖರ ಮಾಹಿತಿಗಳು ಹೊರಬಿದ್ದಲ್ಲಿ, ಇನ್ನೂ ಹೆಚ್ಚಿನ ಸಂತ್ರಸ್ತರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಪೊಲೀಸರು ಆ ಪ್ರಯತ್ನದಲ್ಲಿದ್ದಾರೆ” ಎಂದು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಈ ದಿನ.ಕಾಮ್ ಸಂಪರ್ಕಕ್ಕೆ ಲಭ್ಯವಾಗಿಲ್ಲ.