ಕಳೆದ ತಿಂಗಳಿನಿಂದಾಚೆ ಹಾಸನ ಜಿಲ್ಲೆಯಲ್ಲಿ ಸಂಭವಿಸಿದ ಹಠಾತ್ ಸಾವುಗಳು ಎಲ್ಲರನ್ನೂ ಆತಂಕ ಸೃಷ್ಟಿ ಮಾಡುತ್ತಿರುವ ಬೆನ್ನಲ್ಲೆ ಹಾಸನದ ಪ್ರಗತಿಪರ, ಜೀವಪರರೆಲ್ಲರು ಒಟ್ಟಗೂಡಿ ಇತ್ತೀಚಿಗೆ ಹಿಮ್ಸ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಒತ್ತಾಯಿಸಿ ದುಂಡು ಮೇಜಿನ ಸಭೆಯನ್ನು ಏರ್ಪಡಿಸಲಾಗಿತ್ತು. ಸಭೆಯಲ್ಲಿ ಹಿಮ್ಸ್ ನ ಆಡಳಿತಾಧಿಕಾರಿಗಳು ಹಾಗೂ ಸಾಮಾಜಿಕ ಹೋರಾಟಗಾರರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಧರ್ಮೇಶ್, ಹೃದಯಾಘಾತ ಪ್ರಕರಣಗಳ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದರು. ಜಿಲ್ಲೆಯ ಹೃಧಯಾಘಾತದ ಸಾವುಗಳು ದೇಶದಾದ್ಯಂತ ಸುದ್ದಿಯಾದವು. ಅದರಲ್ಲೂ ಎಳೆಯರ ಮತ್ತು ಯುವಜನರ ಹಠಾತ್ ಸಾವು ತೀವ್ರ ಆತಂಕವನ್ನು ಸೃಷ್ಟಿಮಾಡಿದೆ. ಸರ್ಕಾರ ಈಗಾಗಲೇ ಈ ಹಠಾತ್ ಸಾವುಗಳ ಕುರಿತು ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸಿ ವರದಿ ತರಿಸಿಕೊಂಡಿದೆ. ಹಾಗೂ ಅಗತ್ಯ ಮುನ್ನೆಚ್ಚರಿಕೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದೆ ಎಂದರು.
ತಜ್ಞರ ಸಮಿತಿಯ ವರದಿಯು ಹಠಾತ್ ಸಾವುಗಳಿಗೆ ಜೀವನ ಶೈಲಿ, ಆಹಾರ ಪದ್ದತಿ, ಪರಿಸರ ಮಾಲಿನ್ಯ ಮತ್ತು ಕೋವಿಡೋತ್ತರ ಪರಿಸ್ಥಿತಿಯ ಕಾರಣಗಳತ್ತ ಬೊಟ್ಟು ಮಾಡಿದೆ. ಉತ್ತಮ ಗುಣಮಟ್ಟದ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ನೈರ್ಮಲ್ಯ ಇವು ಯಾವುದೇ ಸಮಾಜದ ಮನುಷ್ಯರ ಮೂಲಭೂತ ಅವಶ್ಯಕತೆಗಳು. ಈ ಅಗತ್ಯಗಳು ಸಮರ್ಪಕವಾಗಿ ದೊರೆತಾಗ ಮಾತ್ರ ಮನುಷ್ಯರು ಮತ್ತು ಸಮಾಜ ಆರೋಗ್ಯ ಮತ್ತು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಈ ಸ್ಪರ್ಧಾತ್ಮಕ ಸಮಾಜದಲ್ಲಿ ಜನರು ಅನುಭವಿಸುತ್ತಿರುವ ಆರ್ಥಿಕ, ಸಾಮಾಜಿಕ ತಾರತಮ್ಯಗಳು ಮತ್ತು ಕೌಟುಂಬಿಕ ಒತ್ತಡಗಳು, ಆಹಾರ ಪದ್ದತಿ, ಜೀವನ ಶೈಲಿ, ಪರಿಸರ ಮಾಲಿನ್ಯ, ಕೋವಿಡೋತ್ತರ ಪರಿಸ್ಥಿತಿ ಮತ್ತಿತರೆ ಕಾರಣಗಳಿಂದಾಗಿ ಜನರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಬಹಳ ತೀವ್ರವಾದ ಮತ್ತು ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ. ಈ ಎಲ್ಲಾ ಪರಿಣಾಮಗಳಿಗೆ ಕೇವಲ ಜನರ ವಯಕ್ತಿಕ ಮಟ್ಟದ ಕಾರಣಗಳು ಮಾತ್ರವೇ ಆಗಿರದೆ ಪ್ರಮುಖವಾಗಿ ಅವುಗಳು ಸಾಮಾಜಿಕ ಆರ್ಥಿಕ ಕಾರಣಗಳಾಗಿವೆ. ಈ ಸಾಮಾಜಿಕ ಆರ್ಥಿಕ ಕಾರಣಗಳಿಗೆ ಮೊದಲು ಪರಿಹಾರ ದೊರಕಿಸಿಕೊಡುವ ಕೆಲಸ ಯಾವುದೇ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳ ಮತ್ತು ಆಡಳಿತ ವ್ಯವಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ತಿಳಿಸಿದರು.

ಜನಾರೋಗ್ಯದ ಪರಿಸ್ಥಿತಿ ಎಷ್ಟು ತೀವ್ರವಾಗಿ ಉಲ್ಬಣಗೊಂಡಿದೆ ಎಂದರೆ ಜನರಲ್ಲಿ ಅದರಲ್ಲೂ ಎಳೆಯ ವಯಸ್ಸಿನವರನ್ನೂ ಒಳಗೊಂಡಂತೆ ರಕ್ತದೊತ್ತಡ, ಮದುಮೇಹ, ಥೈರಾಯ್ಡ್, ಸ್ಥೂಲಕಾಯತೆ ಮುಂತಾದ ದೈಹಿಕ ವ್ಯತ್ಯಾಸಗಳು ತೀವ್ರವಾಗಿ ಮತ್ತು ಆತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿವೆ. ಇದರಿಂದಾಗಿ ಹೃದ್ರೋಗ, ಪಾರ್ಶ್ವವಾಯು, ಕಿಡ್ನಿ ಸಮಸ್ಯೆ, ಮೆದುಳು ಮತ್ತು ನರರೋಗ, ಕ್ಯಾನ್ಸರ್ ಮತ್ತಿತರೆ ಮಾರಣಾಂತಿಕ ಖಾಯಿಲೆಗಳು ಎಲ್ಲಾ ವಯೋಮಾನದ ಜನರಲ್ಲಿ ಹೆಚ್ಚಾಗುತ್ತಿವೆ. ಹಾಗೂ ಸೂಕ್ತ ಸಮಯದಲ್ಲಿ ಸೂಕ್ತ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ದೊರೆಯದೆ ಮರಣಗಳು ಹೆಚ್ಚಾಗುತ್ತಿವೆ. ಮತ್ತು ಅತ್ಯಂತ ದುಬಾರಿಯಾದ ತಪಾಸಣೆ ಮತ್ತು ಚಿಕೆತ್ಸೆಗೆ ಒಳಗಾದವರು ಅತ್ಯಂತ ಆರ್ಥಿಕ ಸುಸ್ಥಿತಿಗೆ ತಳ್ಳಲ್ಪಟ್ಟಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ದುಂಡು ಮೇಜಿನ ಸಭೆಯ ತೀರ್ಮಾನದ ಭಾಗವಾಗಿ ಈ ಶನಿವಾರದಂದು ಹಾಸನ ಜಿಲ್ಲಾಧಿಕಾರಿಗಳ ಮುಖಾಂತರ ಎಲ್ಲಾ ಜನಪರ ಚಳುವಳಿಗಳ ನೇತೃತ್ವದಲ್ಲಿ ಮೇಲ್ಕಂಡ ಬೇಡಿಕೆಗಳ ಆಧಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸುವುದು, ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಮಾನ್ಯ ಶಾಸಕರ ನೇತೃತ್ವದಲ್ಲಿ ಮಾನ್ಯ ಮುಖ್ಯಮಂತ್ರಿಗಳು, ಮಾನ್ಯ ಆರೋಗ್ಯ ಸಚಿವರು ಹಾಗೂ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಹಾಸನ ಜಿಲ್ಲೆಯ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಸುಧಾರಣೆ ಮತ್ತು ಬಲಪಡಿಸುವಿಕೆಗೆ ಹಾಗೂ ಹಿಮ್ಸ್‌ನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭವನ್ನು ಶಿಘ್ರವೇ ಮಾಡುವಂತೆ ಒತ್ತಾಯಿಸುವುದು ಎಂದು ತೀರ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಧರ್ಮಸ್ಥಳ ಪ್ರಕರಣ | ಸರ್ಕಾರ ಕೂಡಲೇ ಎಸ್ಐಟಿ ರಚಿಸಲು ವೆಲ್ಫೇರ್ ಪಾರ್ಟಿ ಆಗ್ರಹ
ಸಭೆಯಲ್ಲಿ ಹಿಮ್ಸ್ ನ ಆಡಳಿತಾಧಿಕಾರಿಗಳು, ಸಿಐಟಿಯುವಿನ ಧರ್ಮೇಶ್, ಸಾಹಿತಿ ರೂಪ ಹಾಸನ, ನವೀನ್ ಕುಮಾರ್, ಹಿರಿಯ ಪತ್ರಕರ್ತರಾದ ಆರ್.ಪಿ ವೆಂಕಟೇಶ್ ಮೂರ್ತಿ, ಅಬ್ದುಲ್ ಬಶೀರ್, ಡಾ. ಸಾವಿತ್ರಿ, ಡಾ. ರಂಗಲಕ್ಷ್ಮೀ, ಹೆಚ್.ಕೆ ಸಂದೇಶ್, ದಂಡೋರ ವಿಜಯ್ ಕುಮಾರ್ ಇನ್ನಿತರು ಉಪಸ್ಥಿತರಿದ್ದರು.
