ಪ್ರಕರಣವೊಂದರಲ್ಲಿ ವಿವರಣೆ ನೀಡಲು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದ್ದರೂ, ಕೋರ್ಟ್‌ಗೆ ಹಾಜರಾಗದ ತಹಶೀಲ್ದಾರ್‌ರನ್ನು ಬಂಧಿಸಿ, ಹಾಜರುಪಡಿಸುವಂತೆ ಹಾಸನ ಹಿರಿಯ ಸಿವಿಲ್ ನ್ಯಾಯಾಲಯ ಆದೇಶಿಸಿದೆ.
ಗುರುವಾರ ಕೋರ್ಟ್‌ಗೆ ಹಾಜರಾಗುವಂತೆ ನ್ಯಾಯಾಲಯ ಸಮನ್ಸ್ ನೀಡಿತ್ತು. ಆದರೂ, ಹಾಸನ ತಹಶೀಲ್ದಾರ್ ಶ್ವೇತಾ ಅವರು ಹಾಜರಾಗಿರಲಿಲ್ಲ. ಹೀಗಾಗಿ, ಅವರನ್ನು ಬಂಧಿಸಿ, ಕೋರ್ಟ್‌ಗೆ ಹಾಜರುಪಡಿಸಬೇಕೆಂದು ಆದೇಶಿಸಲಾಗಿದೆ.
ಕೋರ್ಟ್ ಆದೇಶದಂತೆ ತಹಶೀಲ್ದಾರ್ ಶ್ವೇತಾ ಅವರನ್ನು ಬಂಧಿಸಲು ಕೋರ್ಟ್ ವಕೀಲರ ತಂಡ ತಹಶೀಲ್ದಾರ್ ಕಚೇರಿಗೆ ತೆರಳಿತ್ತು. ಆದರೆ, ಅವರು ಸಿಗದ ಕಾರಣ, ಹಿಂದಿರುಗಿದೆ.
ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕೋರ್ಟ್ ವಕೀಲ ಎಸ್.ಎನ್. ಮೂರ್ತಿ, “ಹಾಸನ ಬಳಿಕ ಭುವನಹಳ್ಳಿ ಗ್ರಾಮದ ಹೇಮಾ ರಂಗಸ್ವಾಮಿ ಎಂಬವರು 2008ರಲ್ಲಿ ಭೂವಿವಾದಕ್ಕೆ ಸಂಬಂಧಿಸಿದಂತೆ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಜಮೀನಿನ ಸರ್ವೇ ನಡೆಸಿ, ಹದ್ದುಬಸ್ತು ದರಸ್ತಿ ಮಾಡಿಸಿಕೊಡುವಂತೆ ಭೂಮಾಪನ ಇಲಾಖೆ ಮತ್ತು ತಹಶೀಲ್ದಾರ್‌ಗೆ 2014ರಲ್ಲಿ ಕೋರ್ಟ್ ಆದೇಶಿಸಿತ್ತು. ಆದರೆ, ಈವರೆಗೆ ಆದೇಶ ಜಾರಿಗೆ ಬಂದಿಲ್ಲ” ಎಂದು ಹೇಳಿದ್ದಾರೆ.
“ಕೋರ್ಟ್ ಆದೇಶವನ್ನು ಜಾರಿಗೊಳಿಸದ ಬಗ್ಗೆ ವರದಿ ಮಾಡುವಂತೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಎರಡು-ಮೂರು ಬಾರಿ ನೋಟಿಸ್ ಜಾರಿ ಮಾಡಿದರೂ, ತಹಶೀಲ್ದಾರ್ ನ್ಯಾಯಾಲಯಕ್ಕೆ ಹಾಜರಾಗಿಲ್ಲ” ಎಂದು ವಿವರಿಸಿದ್ದಾರೆ.