ಶಾಲೆಗೆ ತೆರಳುತ್ತಿದ್ದಾಗ ಓಮ್ನಿ ವಾಹನವೊಂದು ತನ್ನ ಬಳಿ ನಿಧಾನವಾಗಿ ಬಂದಿದ್ದರಿಂದ ಆತಂಕಗೊಂಡ ವಿದ್ಯಾರ್ಥಿನಿಯೊಬ್ಬಳು ಹೆದರಿ ಅಪಹರಣಕ್ಕೆ ಯತ್ನಿಸಿದರೆಂದು ಹೇಳಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಗುರುವಾರ ನಡೆದಿದೆ.
ಆಲೂರು ತಾಲೂಕಿನ ಹಂಚೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ತನ್ನ ಊರಿನಿಂದ ಬೆಳಿಗ್ಗೆ ಶಾಲೆಗೆ ಬರುತ್ತಿದ್ದಾಗ ಲಗೇಜ್ ತುಂಬಿದ ಓಮ್ನಿಯೊಂದು ಹಿಂದಿನಿಂದ ಬಂದಿದೆ. ಹದಗೆಟ್ಟ ರಸ್ತೆ ಅದಾಗಿರುವುದರಿಂದ ವಿದ್ಯಾರ್ಥಿನಿ ಸಮೀಪ ಬಂದಾಗ ಚಾಲಕ ನಿಧಾನಕ್ಕೆ ಚಲಿಸಿದ್ದಾನೆ. ತನ್ನ ಅಪಹರಣಕ್ಕಾಗಿಯೇ ಬಂದರೆಂದು ಆತಂಕಗೊಂಡ ವಿದ್ಯಾರ್ಥಿನಿ ಬ್ಯಾಗ್ ಅನ್ನು ಪಕ್ಕದ ತೋಟಕ್ಕೆ ಎಸೆದು ಓಡಿ ಹೋಗಿದ್ದಾಳೆ.

ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಚಾಲಕನೋರ್ವ ವಿದ್ಯಾರ್ಥಿನಿ ಹೆದರಿರುವುದನ್ನು ಗಮನಿಸಿ, ಆಕೆಯನ್ನು ಕೂರಿಸಿಕೊಂಡು ಶಾಲೆಗೆ ಕರೆ ತಂದಿದ್ದಾರೆ. ಭಾರೀ ಆತಂಕದಲ್ಲಿದ್ದ ಬಾಲಕಿ, “ತನ್ನನ್ನು ಅಪಹರಣಕ್ಕೆ ಯತ್ನಿಸಿದರು. ವಾಹನದಲ್ಲಿ ನಮ್ಮದೇ ಶಾಲೆಯ ಸಮವಸ್ತ್ರ ಧರಿಸಿದ ಇಬ್ಬರು ಹುಡುಗಿಯರಿದ್ದರು. ಒಬ್ಬ ವ್ಯಕ್ತಿ ನನ್ನನ್ನು ಹಿಡಿಯಲು ವಾಹನದಿಂದ ಇಳಿದುಬಂದ. ಅವರಿಂದ ತಪ್ಪಿಸಿಕೊಂಡು ಬಂದೆ” ಎಂದು ಶಿಕ್ಷಕರಿಗೆ ಅಳುತ್ತಲೇ ವರದಿ ಒಪ್ಪಿಸಿದ್ದಾಳೆ.
ವಿದ್ಯಾರ್ಥಿನಿಯ ಅಳಲನ್ನು ಆಲಿಸಿದ ಸ್ಥಳೀಯರು ಬಾಲಕಿಯ ಹೇಳಿಕೆಯನ್ನು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಮುಖ್ಯ ಶಿಕ್ಷಕ ನಾಗರಾಜು ಸಹ ವಿದ್ಯಾರ್ಥಿನಿಯ ಹೇಳಿಕೆಯನ್ನೇ ನಂಬಿ ವಿಡಿಯೋ ಹೇಳಿಕೆ ಕೂಡ ನೀಡಿದ್ದರು.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ್ದ ಆಲೂರು ಪಿಎಸ್‌ಐ ಮೋಹನ್‌ರೆಡ್ಡಿ, ಬಿಇಒ ಕೃಷ್ಣಗೌಡ ವಿದ್ಯಾರ್ಥಿ ಹೇಳಿಕೆ ಆಧರಿಸಿ ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಓಮ್ನಿ ವಾಹನವೊಂದು ಚಲಿಸಿರುವುದು ತಿಳಿದಿದೆ. ಅದರ ನಂಬರ್‌ನ ಜಾಡು ಹಿಡಿದು ಪರಿಶೀಲನೆ ನಡೆಸಿದಾಗ ತಾಲೂಕಿನ ಪಾಳ್ಯ ಹೋಬಳಿ ಕುಂಬಾರಹಳ್ಳಿ ಗ್ರಾಮದ ರವಿ ಎಂಬಾತ ಲಗೇಜ್‌ನೊಂದಿಗೆ ರಸ್ತೆಯಲ್ಲಿ ತೆರಳಿರುವುದು ತಿಳಿದುಬಂದಿದೆ. ಚಾಲಕನನ್ನು ವಿಚಾರಿಸಿದಾಗ, “ನಾನು ಯಾರನ್ನೂ ಅಪಹರಣಕ್ಕೆ ಯತ್ನಿಸಿಲ್ಲ. ರಸ್ತೆ ಸರಿ ಇಲ್ಲದ್ದರಿಂದ ನಿಧಾನಕ್ಕೆ ಚಲಿಸುತ್ತಿದ್ದೆ” ಎಂದು ತಿಳಿಸಿದ್ದಾನೆ. ಬಳಿಕ ಈ ವಿಚಾರವನ್ನು ಪೊಲೀಸರು, ಬಾಲಕಿ ಪೋಷಕರನ್ನು ಕರೆಸಿ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ‘ಶೋಲೆ’ @ 50: ಇವತ್ತಿಗೂ ಅದೇ ತಾಜಾತನ, ಅದೇ ಆಕರ್ಷಣೆ, ಅದೇ ಕುತೂಹಲ
ಬಾಲಕಿ ಸಣ್ಣಪುಟ್ಟ ವಿಚಾರಗಳಿಗೆ ಹೆದರುವುದು, ಮನೆಯಲ್ಲಿ ಯಾರಾದರೂ ಜೋರಾಗಿ ಮಾತನಾಡಿದರೆ ಕಿರುಚುವುದು ಮಾಡುತ್ತಾಳೆ. ವಾಹನ ನಿಧಾನಕ್ಕೆ ಚಲಿಸಿದ್ದರಿಂದ ಭ್ರಮೆಯಲ್ಲಿ ಅಪಹರಣವೆಂದು ಬಿಂಬಿಸಿದ್ದಾಳೆ. ಹಲವು ವರ್ಷಗಳಿಂದ ಆಕೆಗೆ ಚಿಕಿತ್ಸೆ ನಡೆಯುತ್ತಿದ್ದು ಆ ವಿಚಾರ ಶಿಕ್ಷಕರಿಗೆ ತಿಳಿದಿರಲಿಲ್ಲ. ಪೋಷಕರೇ ಅದನ್ನು ದೃಢಪಡಿಸಿದ್ದರಿಂದ ಎಲ್ಲರೂ ನಿರಾಳರಾದರು.
ಸ್ವಲ್ಪ ಸಮಯದ ಬಳಿಕ ಪೊಲೀಸರು ಆಕೆಯನ್ನು ಮತ್ತೆ ಪ್ರಶ್ನಿಸಿದಾಗ, “ರಾತ್ರಿ ಕನಸಿನಲ್ಲಿ ಅಪಹರಣವಾಗಿತ್ತು ಅದನ್ನೇ ನಿಜವೆಂದು ತಿಳಿದಿದ್ದೆ” ಎಂಬ ಹೇಳಿಕೆ ನೀಡಿದ್ದಾಳೆ. ಈ ಸಂಬಂಧ ಆಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.