ದೇಶದ ಆರ್ಥಿಕತೆ ದುಡಿಯುವ ಜನರಿಗಲ್ಲ ಎಂಬ ಸ್ಥಿತಿ ನಿರ್ಮಿಸಿರುವ ಬಂಡವಾಳಶಾಹಿಗಳಿಗೆ ಪರ್ಯಾಯ ಶಕ್ತಿಯಾಗಿ ದುಡಿಯುವ ಜನತೆ ಎದ್ದು ನಿಲ್ಲಲಿದೆ ಎಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಪ್ರತಿಪಾದಿಸಿದರು.
ಹಾನಸ ನಗರದ ಕಸಾಪ ಭವನದಲ್ಲಿ ಶನಿವಾರ ನಡೆದ ಸಿಐಟಿಯು 7ನೇ ಹಾಸನ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳಿಂದ ಜನರು ಬೀದಿಗೆ ಬರುವಂತಾಗಿದೆ. ಇನ್ನೊಂದೆಡೆ ಅಂತಾರಾಷ್ಡ್ರೀಯ ಮಟ್ಟದಲ್ಲಿ ದೊಡ್ಡ ಬದಲಾವಣೆಗಳಾಗುತ್ತಿವೆ. ರಷ್ಯಾದಿಂದ ಬರುವ ವಸ್ತುಗಳಿಂದ ಭಾರತಕ್ಕೆ ಲಾಭವಿದೆ. ನಮ್ಮ ದೇಶದಲ್ಲಿನ ಆಯಿಲ್ ಕಂಪನಿಗಳಿಗೆ 80% ರಷ್ಟು ಲಾಭವಿದೆ ಮತ್ತು ಕೇಂದ್ರ ಸರ್ಕಾರಕ್ಕೆ ಎರಡು ಲಕ್ಷ ಕೋಟಿ ತೆರಿಗೆಯಿಂದ ಲಾಭ ಬಂದಿದೆ. ಆದರೆ ಈ ಲಾಭದ ಶೇ. 1 ಭಾಗವೂ ಜನರಿಗೆ ಸಿಗುತ್ತಿಲ್ಲ ಎಂದು ದೂರಿದರು.
ದೇಶದ ಅಭಿವೃದ್ದಿಯಾಗಬೇಕು, ದೇಶವನ್ನು ಉಳಿಸಬೇಕು ಎಂದರೆ ಕಾರ್ಮಿಕರು ಹೆಚ್ಚು ದುಡಿಯಬೇಕು ಎಂದು ಈ ದೇಶದ ಬಂಡವಾಳಶಾಹಿಗಳು ಹೇಳುತ್ತಿದ್ದಾರೆ. ಇವತ್ತಿನ ಬೆಲೆ ಏರಿಕೆಗೆ ಮೂಲ ಕಾರಣ ಇದೇ ಬಂಡವಾಳಶಾಹಿಗಳು, ದೊಡ್ಡ ವ್ಯಾಪಾರಿಗಳು ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಭಾರತ ಕೃಷಿ ಪ್ರಧಾನ ರಾಷ್ಟ್ರ. ಆದರೆ ನಾವು ಗಮನಿಸಬೇಕಾದ್ದು ಏನೆಂದರೆ ಮೋದಿ ಅಮೇರಿಕಾದ ಜೊತೆಗಿನ ಸಂಬಂಧ ಹೇಗಿದೆ ಎಂದರೆ ಭಾರತದ ವ್ಯಾಪಾರಕ್ಕೆ ಯಾವುದೇ ತೆರಿಗೆ ಕಟ್ಟುವುದಿಲ್ಲ ಎಂಬ ಮೊಂಡುತನ. ಇದರಿಂದ ಭಾರತಕ್ಕೆ ದೊಡ್ಡ ನಷ್ಟ ಉಂಟಾಗಲಿದೆ ಎಂದರು.
ನಮ್ಮ ದೇಶದಲ್ಲಿ ಹುಟ್ಟಿದ ಎಂಟು ತಿಂಗಳುಗಳೊಳಗಿನ ಕರುವನ್ನು ವಿದೇಶಕ್ಕೆ ರಫ್ತು ಮಾಡುವುದರಲ್ಲಿ ಭಾರತ ಒಂದನೇ ಸ್ಥಾನದಲ್ಲಿದೆ. ರಫ್ತು ಮಾಡುತ್ತಿರುವವರೆಲ್ಲರೂ ಅದೇ ಹಿಂದೂ ಸಮಾಜದ ಬಂಡವಾಳಿಗರು. ಕರ್ನಾಟಕ ಸರ್ಕಾರ ಒಂದೆ ಕಂಪನಿಗೆ 16 ಸಾವಿರ ಕೋಟಿ ಹಣ ಖರ್ಚು ಮಾಡಿದೆ. ಆದರೆ ಇಲ್ಲಿ ಬಡವರಿಗೆ 2 ಸಾವಿರ ಕೊಟ್ಟರೆ ಅಥವಾ ಬಸ್ ಫ್ರೀ ಮಾಡಿದರೆ ಸರ್ಕಾರವನ್ನು ಜನರನ್ನು ಮಾಧ್ಯಮಗಳು ತರಾಟೆಗೆ ತೆಗೆದುಕೊಂಡು ಜಾಡಿಸುತ್ತಾರೆ. ಇಲ್ಲಿ ಕೆಲವೇ ಮಂದಿ ಶ್ರೀಮಂತರಾದರೆ ಸಮಸ್ಯೆ ಇಲ್ಲದಂತೆ ವರ್ತಿಸುತ್ತಾರೆ ಎಂದರು.

ದುಡಿಮೆಗೆ ತಕ್ಕ ಕೂಲಿ ಕೇಳುವುದು ಮೂಲಭೂತ ಹಕ್ಕಲ್ಲ, ಕೂಲಿ ಜಾಸ್ತಿ ಕೇಳುವ ಹಾಗಿಲ್ಲ, ಕೂಲಿ ನಮ್ಮ ಹಕ್ಕು ಎಂಬುದನ್ನು ಕಾರ್ಮಿಕರು ಹೇಳುವ ಹಾಗಿಲ್ಲ. ಇಂತಹ ಪರಿಸ್ಥಿತಿಯನ್ನು ನಾವು ಎದುರಿಸುತ್ತಿದ್ದೇವೆ. ಇಂತಹ ಸಮಸ್ಯೆಗಳನ್ನು ಎದುರಿಸಬೇಕಾದರೆ ನಾವು ದುಡಿಯುವ ಜನರು ಒಟ್ಟಾಗಿ ಹೋರಾಟ ಮಾಡುವುದೇ ಪರಿಹಾರವಾಗಿದೆ ಎಂದರು.
ಸಮ್ಮೇಳನಕ್ಕೆ ಶುಭ ಕೋರಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಹೆಚ್ ಆರ್ ನವೀನ್ ಕುಮಾರ್ , ಕಾಯಕವೇ ಕೈಲಾಸ ಎನ್ನುವಂತೆ ನಮ್ಮ ಕಾರ್ಮಿಕರು ಮಾಡುತ್ತಲೇ ಇದ್ದಾರೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ದೇಶದ ದುಡಿಯುವ ಜನರನ್ನು ಮತ್ತೆದೆ ಹಳೆಕಾಲದ ಶೋಷಣೆಗೆ ಕರೆದೊಯ್ಯುತ್ತಿದೆ. ಕೆಲಸ ಮಾಡಬೇಕು ಆದರೆ ಬೇರೆ ಏನೂ ನಿರೀಕ್ಷಿಸಬಾರದು ಎಂದು ಭಗವದ್ಗೀತೆ ಹೇಳುತ್ತದೆ. ದುಡಿಯುವ ಜನರಿಗೆ ದುಡಿಮೆಯ ನಂತರ ಕೂಲಿ ಸಿಗದಿದ್ದರೆ ಅವರಿಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ನಾವು ಎಲ್ಲವನ್ನು ಪ್ರಶ್ನೆ ಮಾಡಿ ಹೋರಾಟ ಮಾಡಿ ಪಡೆದುಕೊಳ್ಳಬೇಕಿದೆ ಎಂದು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ? ವಿಜಯಪುರ | ಕುರಿಗಾಹಿಗಳ ರಕ್ಷಣೆಗೆ ಆಗ್ರಹ: ಆ.19ರಂದು ‘ಕುರಿಗಾರರ ನಡಿಗೆ ವಿಧಾನಸೌಧದ ಕಡೆಗೆ’ ಹೋರಾಟ
ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡುತ್ತಾ, ಹಾಸನ ಸಮ್ಮೇಳನ ಎರಡು ದಿನಗಳು ನಡೆಯಬೇಕಿತ್ತು ಆದರೆ ರಾಜ್ಯ ಸಮ್ಮೇಳನ ನಮ್ಮ ಜಿಲ್ಲೆಯಲ್ಲಿ ನಡೆಯುವುದರಿಂದ ನಾವು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದೇವೆ. ಇಂದು ಕಾರ್ಮಿಕರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿಗಳಿಗೆ ಬಲಿಯಾಗುತ್ತಿದ್ದಾರೆ. ದೇಶ ತತ್ತರಿಸುತ್ತಿದೆ ಇನ್ನೊಂದೆಡೆ ಪ್ಯಾಲೆಸ್ತೇನಿನಲ್ಲಿ ಮಕ್ಕಳು ಮಹಿಳೆಯರು ಇಸ್ರೇಲ್ ದಾಳಿಗೆ ಬಲಿಯಾಗುತ್ತಲೇ ಇದ್ದಾರೆ. ದೇಶ ದೇಶಗಳ ನಡುವೆ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಜಗತ್ತಿನ ಸರ್ವನಾಶಕ್ಕೆ ಅಮೇರಿಕಾ ಮುದಾಗುತ್ತಿರುವುದು ದೊಡ್ಡ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದರು.
ಬಂಡವಾಳಶಾಹಿಗಳ ಮುಖವಾಡವೂ ಕಳಚುತ್ತದೆ. ಯುದ್ದ, ಭಯೋತ್ಪಾಧನೆ, ಬಂಡವಾಳಶಾಹಿ ನೀತಿಗಳಿಂದ ಎಲ್ಲ ದೇಶಗಳು ನಲುಗುತ್ತಿದೆ. ಆದರೆ ಇದಕ್ಕೆ ಪರಿಹಾರವೆಂದರೆ ಸಮಾಜವಾದ ವ್ಯವಸ್ಥೆ ಮಾತ್ರ ಸಮಾಜವಾದಿ ರಾಷ್ಟ್ರಗಳಿಂದ ಮಾತ್ರ ದೇಶದ ಮತ್ತು ಜನರ ಅಭಿವೃದ್ದಿ ಎನ್ನುವುದು ನಾವು ಮರೆಯಬಾರದು. ಈ ದೇಶದ ರಾಜಕೀಯ, ಆರ್ಥಿಕ ಬದಲಾವಣೆಯಾದರೆ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ. ಸಿಐಟಿಯು ಹಾಸನ ಜಿಲ್ಲೆಯಲ್ಲಿ ದಶಕಗಳ ಹೋರಾಟ ಮಾಡುತ್ತಲಿದೆ. ಮುಂದಿನ ದಿನಗಳಲ್ಲಿ ದುಡಿಯುವ ಜನರ ಪರವಾಗಿ ಹೋರಾಟ ಮುಂದುವರೆಯುತ್ತದೆ ಎಂದರು.
ಮೊದಲಿಗೆ ಹಿರಿಯ ಕಾರ್ಮಿಕ ಮುಖಂಡ ಪಿ ಸತ್ಯನಾರಾಯಣ ಸಮ್ಮೇಳನದ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ.ಪುಷ್ಪ, ಕೆಎಸ್‌ಆರ್‌ಟಿಸಿ ನೌಕರರ ಸಂಘದ ಮುಂಜುನಾಥ್, ಡಿಎಚ್ಎಸ್ ಜಿಲ್ಲಾ ಸಂಚಾಲಕ ಪೃಥ್ವಿ ಎಂ.ಜಿ, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಕಾರ್ಯದರ್ಶಿ ರಮೇಶ್ ಹಾಸನ್ ಇನ್ನಿತರು ಉಪಸ್ಥಿತರಿದ್ದರು.
