ಹಾಸನದ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯೊಬ್ಬರದ್ದು ಎನ್ನಲಾದ ಸೆಕ್ಸ್ ವಿಡಿಯೋಗಳು ವಾಟ್ಸ್‌ಆಪ್‌ಗಳಲ್ಲಿ ಹರಿದಾಡುತ್ತಿದ್ದು ಜಿಲ್ಲೆಯಲ್ಲಿ ಗುಸುಗುಸು ಚರ್ಚೆಗೆ ಕಾರಣವಾಗಿದೆ.
ಯುವ ನಾಯಕರೊಬ್ಬರು ಹಲವು ಮಹಿಳೆಯರೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿ, ತಾವೇ ಅದನ್ನು ರೆಕಾರ್ಡ್ ಮಾಡಿಕೊಂಡಿದ್ದರು ಎನ್ನಲಾಗಿದೆ. ಎರಡು ಸಾವಿರಕ್ಕೂ ಹೆಚ್ಚು ವಿಡಿಯೊಗಳು ಲಭಿಸಿದ್ದು ಯಾರೋ ಅವುಗಳನ್ನು ಪೆನ್‌ಡ್ರೈವ್‌ಗಳಲ್ಲಿ ತುಂಬಿ ಹಾಸನದ ಹಲವು ಕಡೆ ಎಸೆದಿದ್ದಾರೆ. ಅವು ಜನರ ಕೈಗೆ ಸಿಕ್ಕಿ ವಾಟ್ಸಾಪ್‌ಗಳಲ್ಲಿ ಹರಿದಾಡುತ್ತಿವೆ.
ಸೋಮವಾರ ಸಂಜೆ ಈ ವಿಡಿಯೊಗಳು ಬಯಲಿಗೆ ಬಂದಿವೆ. ಹಲವು ಹೆಣ್ಣುಮಕ್ಕಳನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡಿರುವ ದೃಶ್ಯಗಳಿರುವ ವಿಡಿಯೋಗಳು ವಾಟ್ಸಾಪ್‌ಗಳಲ್ಲಿ ಓಡಾಡುತ್ತಿದ್ದು ಕೆಲವರು ಮಹಿಳೆಯರ ಮುಖವನ್ನು ಬ್ಲರ್ ಮಾಡದೇ ಸ್ಕ್ರೀನ್ ಶಾಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಯುವ ರಾಜಕೀಯ ನಾಯಕನೊಬ್ಬನು ಅನೇಕ ಮಹಿಳೆಯರೊಂದಿಗೆ ಪಾಲ್ಗೊಂಡಿರುವ ಕಾಮಕೇಳಿಯ ದೃಶ್ಯಗಳ ಪೆನ್ ಡ್ರೈವ್‌ಗಳು ಸಿಕ್ಕಿರುವ ಬಗ್ಗೆ ಸೋಮವಾರ ಕನ್ನಡ ಪ್ಲಾನೆಟ್ ಮೊದಲ ವರದಿ ಪ್ರಕಟಿಸಿತ್ತು. ಹಾಸನದ ಸಂಜೆ ದಿನಪತ್ರಿಕೆ ‘ಸತ್ಯದ ಹೊನಲು’ ಈ ಕುರಿತು ಇನ್ನಷ್ಟು ಮಾಹಿತಿಗಳನ್ನು ಪ್ರಕಟಿಸಿದೆ. ಜಿಲ್ಲಾಮಟ್ಟದ ಹಲವು ಪತ್ರಿಕೆಗಳು ಈ ಬಗ್ಗೆ ವರದಿ ಮಾಡಿವೆ.
ಹಾಸನದ ನಾಯಕರೊಬ್ಬರ ಅಶ್ಲೀಲ ವಿಡಿಯೋಗಳು ತಮ್ಮ ಬಳಿ ಇರುವುದಾಗಿ ವರ್ಷದ ಹಿಂದೆಯೇ ಬಿಜೆಪಿಯ ನಾಯಕರೊಬ್ಬರು ಪ್ರೆಸ್‌ಮೀಟ್ ಮಾಡಿ ಹೇಳಿದ್ದರು. ಅದು ಬಹಿರಂಗಗೊಂಡಲ್ಲಿ ಹಾಸನ ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಕುಟುಂಬವೊಂದು ತಲೆತಗ್ಗಿಸುವಂಥ ಸನ್ನಿವೇಶ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. ತಮ್ಮದೇ ಮೊಬೈಲ್‌ನಲ್ಲಿ ಸೇವ್ ಆಗಿದ್ದ ವಿಡಿಯೊ ಲೀಕ್ ಆಗಿರುವ ಬಗ್ಗೆ ಗೊತ್ತಾಗಿ, ಆ ನಾಯಕ ಕೋರ್ಟ್‌ನಿಂದ ಸ್ಟೇ ಕೂಡ ತಂದಿದ್ದರು.
ವಿಡಿಯೋದಲ್ಲಿ ಭಾಗಿಯಾಗಿರುವ ಯುವನಾಯಕ ಬೇರೆ ಬೇರೆ ಕಾರಣಗಳಿಗೆ ತನ್ನ ಬಳಿ ಬಂದ ಹೆಣ್ಣಮಕ್ಕಳನ್ನು ಆಮಿಷ ಒಡ್ಡಿ, ಬೆದರಿಸಿ ಲೈಂಗಿಕ ತೃಷೆ ತೀರಿಸಿಕೊಂಡಿರುವುದಲ್ಲದೆ, ಎಲ್ಲರ ಜೊತೆಗಿನ ಕಾಮದಾಟವನ್ನು ತಾನೇ ರೆಕಾರ್ಡ್ ಮಾಡಿ ಇಟ್ಟುಕೊಂಡಿದ್ದಾನೆ. ಇದು ಇಡೀ ರಾಜ್ಯವೇ ಕಂಡುಕೇಳರಿಯದ ಲೈಂಗಿಕ ಹಗರಣ ಎಂಬ ಮಾತುಗಳು ಹಾಸನದಲ್ಲಿ ಕೇಳಿಬರುತ್ತಿವೆ. ವಿಡಿಯೋ ತುಣುಕುಗಳು ಸಾರ್ವಜನಿಕಗೊಂಡು ಮೂರು ದಿನಗಳಾದರೂ ಈ ಬಗ್ಗೆ ಆ ನಾಯಕನಾಗಲಿ, ಅವರ ಕುಟುಂಬವಾಗಲಿ, ಪಕ್ಷದವರಾಗಲಿ, ಮೈತ್ರಿ ಮಾಡಿಕೊಂಡಿರುವ ಪಕ್ಷದವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ.
ಒಂದು ಸುದ್ದಿಯಲ್ಲಿ ತಮ್ಮ ಹೆಸರು ಬಳಸದಿರುವಂತೆ ಸಂಸದ ಪ್ರಜ್ವಲ್ ರೇವಣ್ಣ ಈ ಹಿಂದೆಯೇ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.
