ಜೈಲಿನಲ್ಲಿದ್ದ ಕೈದಿಗಳ ಬಳಿ ಮಾದಕ ವಸ್ತುಗಳನ್ನು ಪತ್ತೆಹಚ್ಚಿದ್ದ ಪೊಲೀಸರು ಇದೀಗ ಜೈಲಿನೊಳಗೆ ಮಾದಕ ವಸ್ತು ಹೋಗುವುದನ್ನೇ ತಡೆಯಲು ಮುಂದಾಗಿದ್ದು, ಹಣ್ಣುಗಳೊಳಗೆ ಗಾಂಜಾ ಇಟ್ಟು ಜೈಲಿನ ಕಾಂಪೌಂಡ್ ಒಳಗೆ ಎಸೆಯಲು ಯತ್ನಿಸಿದ ಇಬ್ಬರು ವ್ಯಕ್ತಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಸೇಬು ಹಾಗೂ ಮೋಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪಿನ ಪ್ಯಾಕೆಟ್ಗಳನ್ನಿಟ್ಟು ಅವುಗಳಿಗೆ ಸ್ಟಿಕ್ಕರ್ನ್ನು ಅಂಟಿಸಿ, ಜೈಲಿನ ಕಾಂಪೌಂಟ್ ಒಳಗಡೆಗೆ ಎಸೆಯಲು ಹೋಗುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಅಂಬೇಡ್ಕರ್ ನಗರದ ತರಕಾರಿ ವ್ಯಾಪಾರಿ ತಬ್ರೇಜ್ (28), ಪೆನ್ಷನ್ ಮೊಹಲ್ಲಾದ ಗುಜರಿ ಅಂಗಡಿ ವ್ಯಾಪಾರಿ ವಾಸಿಂ (21) ಬಂಧಿತ ಆರೋಪಿಗಳು.
ಈ ಸುದ್ದಿ ಓದಿದ್ದೀರಾ? ಸೌಜನ್ಯ ಪ್ರಕರಣ | ಮರು ತನಿಖೆಗೆ ಆಗ್ರಹಿಸಿ ಬಿಜೆಪಿ ನಿಯೋಗದಿಂದ ರಾಜ್ಯಪಾಲ, ಮುಖ್ಯಮಂತ್ರಿಗೆ ಮನವಿ
ಭಾನುವಾರ ಮಧ್ಯಾಹ್ನದ ವೇಳೆಯಲ್ಲಿ ಸೇಬು ಹಾಗು ಮೂಸಂಬಿ ಹಣ್ಣನ್ನು ಕೊರೆದು ಅದರೊಳಗೆ ಗಾಂಜಾಸೊಪ್ಪನ್ನು ಇಟ್ಟು, ಜೈಲಿನ ಹಿಂದಿಯಿಂದ ಕಾಂಪೌಂಡ್ ಒಳಗೆ ಎಸೆಯಲು ಇಬ್ಬರು ಆರೋಪಿಗಳು ಹೊಂಚು ಹಾಕುತ್ತ ಜೈಲು ಸಮೀಪದ ನಗರದ ಹಳೇಬಸವಣ್ಣ ವೃತ್ತದ ಬಳಿ ಓಡಾಡುತ್ತಿದ್ದರು. ಈ ವೇಳೆ ನಗರ ಠಾಣೆ ಪಿಎಎಸ್ಐ ರೇವಣ್ಣ ಹಾಗೂ ಸಿಬ್ಬಂದಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ವಿಚಾರಿಸಿ ಅವರ ಬಳಿಯಿದ್ದ ಬ್ಯಾಗ್ ಪರಿಶೀಲಿಸಿದಾಗ ಗಾಂಜಾ ತುಂಬಿದ್ದ 3 ಸೇಬು ಮತ್ತು 2 ಮೋಸುಂಬಿ ಹಣ್ಣು ಪತ್ತೆಯಾಗಿವೆ. ಈ ಬಗ್ಗೆ ವಿಚಾರಣೆ ನಡೆಸಿದಾಗ ಜೈಲ್ನೊಳಗೆ ಎಸೆಯಲು ಯತ್ನಿಸುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಗಾಂಜಾ ವಶಪಡಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.