ಡಾ.ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಅಂಗವಾಗಿ ಅಂಬೇಡ್ಕರರ ‘ಜಾತಿ ವಿನಾಶ’ ಕೃತಿಯ ಸಾಮೂಹಿಕ ಓದು ಮತ್ತು ಸಮಕಾಲೀನ ವಿಶ್ಲೇಷಣೆಯನ್ನು ಹಾಸನದ ಆರ್.ಸಿ ರಸ್ತೆಯಲ್ಲಿರುವ ‘ಶ್ರಮ’ ಕಚೇರಿಯಲ್ಲಿ ಏಪ್ರಿಲ್ 14, ಮಂಗಳವಾರ ಡಿಎಚ್ಎಸ್, ಎಸ್ಎಫ್ಐ, ಡಿವೈಎಫ್ಐ, ಬಿಜಿವಿಎಸ್, ಸಿಐಟಿಯು, ಜೆಎಂಎಸ್, ಕೆ.ಪಿಆರ್.ಎಸ್ ಸಂಘಟನೆಗಳಿಂದ ಆಯೋಜಿಸಲಾಯಿತು.

ಲೇಖಕರಾದ ಕೆ.ಎಸ್ ರವಿಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಭಾರತದಲ್ಲಿರುವ ಅನಾಗರೀಕ ಜಾತಿ ವ್ಯವಸ್ಥೆ ಬೆರೆ ಯಾವ ದೇಶದಲ್ಲೂ ಇಲ್ಲ. ಮಾನವ ಸಮಾಜದಲ್ಲಿ ದ್ವೇಶ, ಅಸೂಯೆ, ಶೋಷಣೆ ಮತ್ತು ಅಸಮಾನತೆಯನ್ನು ಸೃಷ್ಟಿಸಿರುವ ಜಾತಿ ಪದ್ಧತಿ ಅತ್ಯಂತ ಅವೈಜ್ಞಾನಿಕವಾಗಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವತಃ ಇದರಿಂದ ಶೋಷಣೆ ಅವಮಾನ ಅನುಭವಿಸಿ ಜಾತಿ ಅಸ್ಪೃಶ್ಯತೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸಿದರು. ಅವರು ಬುದ್ಧ, ಜ್ಯೋತಿ ಬಾ ಫುಲೆ ಮತ್ತು ಸಂತ ಕಬೀರರ ವಿಚಾರಗಳಿಂದ ಹೆಚ್ಚು ಪ್ರಭಾವಿತರಾಗಿ ಜಾತಿ ವಿನಾಶ ಗೊಳಿಸುವುದೇ ಅವರ ಅಂತಿಮ ಗುರಿಯಾಗಿತ್ತು” ಎಂದರು.
ಪ್ರಾಸ್ತಾವಿಕವಾಗಿ ಕೆ.ಪಿ.ಆರ್.ಎಸ್ ಜಿಲ್ಲಾ ಕಾರ್ಯದರ್ಶಿ ಎಚ್. ಆರ್ ನವೀನ್ ಕುಮಾರ್ ಮಾತನಾಡಿ,”ಅಸ್ಪೃಶ್ಯತೆ, ಜಾತಿ ತಾರತಮ್ಯಗಳ ವಿರುದ್ಧ ನಿರಂತರ ಕಾರ್ಯಕ್ರಮ ನಡೆಸಲಾಗುವುದೆಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷರಾದ ಧರ್ಮೇಶ್ ಮಾತನಾಡಿ, “ಅಂಬೇಡ್ಕರ್ ರವರು ಜಾತಿ ವಿನಾಶ ಕೃತಿಯನ್ನು ರಚಿಸಿ 90 ವರ್ಷಗಳಾಗಿವೆ. ದೇಶಕ್ಕೆ ಉತ್ತಮ ಸಂವಿಧಾನವನ್ನು ರಚಿಸಿಸಿಕೊಟ್ಟಿದ್ದಾರೆ. ಇಂದು ಜಾತೀಯತೆ ಆಳವಾಗಿ ಬೇರೂರುತ್ತಾ, ಅಸ್ಪೃಶ್ಯತೆ ಬೇರೆಬೇರೆ ಆಯಾಮಗಳಲ್ಲಿ ಸಮಾಜವನ್ನು ಆವರಿಸಿದೆ. ಸಮಾಜವನ್ನು ವಿಭಜಿಸುವ ಅಮಾನವೀಯ ಮನುಸ್ಮೃತಿ ಆಡಳಿತ ಚಾಲ್ತಿಯಲ್ಲಿದ್ದು, ಸಂವಿಧಾನವನ್ನೇ ಅಪಮೌಲ್ಯ ಗೊಳಿಸಲಾಗುತ್ತಿದೆ. ಇಂತಹ ಸಂಧರ್ಭದಲ್ಲಿ ಅಂಬೇಡ್ಕರ್ ರವರ ‘ಜಾತಿ ವಿನಾಶ’ ಕೃತಿಯು ಜಾತಿ ವ್ಯವಸ್ಥೆಯನ್ನು ಪೋಷಿಸುತ್ತಿರುವ ಪುರೋಹಿತಶಾಹಿ, ಬಂಡವಾಳಶಾಹಿ ಮನುವಾದಿಗಳ ವಿರುದ್ಧದ ಪ್ರಮುಖ ಅಸ್ತ್ರವನ್ನಾಗಿಸಿಕೊಂಡು ಪ್ರಬಲವಾದ ಜಾತಿವಿನಾಶದ ಚಳುವಳಿಯನ್ನು ಕಟ್ಟಬೇಕಾಗಿದೆ. ಮುಂದಿನ ವರ್ಷ ವರ್ಷಕ್ಕೆ ಅಂಬೇಡ್ಕರವರು ನಡೆಸಿದ ಮಹಾಡ ನ್ ಚೌಡಾರ್ ಕೆರೆ ಸತ್ಯಾಗ್ರಕ್ಕೆ ಮತ್ತು ಮನುಸ್ಮೃತಿ ದಹಿಸುವ ಹೋರಾಟಕ್ಕೆ ನೂರು ವರ್ಷಗಳಾಗುತ್ತಿದ್ದು ಇದರ ಹಿನ್ನೆಲೆಯಲ್ಲಿ ಈ ಎರಡು ಮಹತ್ವದ ಹೋರಟಗಳ ಶತಮಾನೋತ್ಸವ ಕಾರ್ಯಕ್ರಮವನ್ನು ಇಡೀ ವರ್ಷ ನಡೆಸಬೇಕೆಂದು ಹೇಳಿದರು.
ದಲಿತ ಮುಖಂಡರಾದ ಕೃಷ್ಣದಾಸ್ ಮತ್ತು ಮಾದಿಗ ದಂಡೋರ ಮುಖಂಡ ಟಿ.ಆರ್ ವಿಜಯ್ ಕುಮಾರ್ ರವರುಗಳು ಮಾತನಾಡಿ,”ಅಂಬೇಡ್ಕರ್ ಅವರ ಜಾತಿ ವಿನಾಶ ಕೃತಿಯ ಓದು ಹಾಗು ಸಮಕಾಲೀನ ವಿಶ್ಲೇಷಣೆ ಕಾರ್ಯಕ್ರಮವು ಉತ್ತಮ ಅರ್ಥಪೂರ್ಣ ಕಾರ್ಯಕ್ರಮ ಇದನ್ನು ಇನ್ನೂ ಹೆಚ್ಚು ಇಂದಿನ ತಲೆಮಾರಿನ ಯುವಜನರ ನಡುವೆ ವಿಸ್ತರಿಸಬೇಕೆಂದು ಅಭಿಪ್ರಾಯ ಪಟ್ಟರು. ಡಿಎಚ್ಎಸ್ ಜಿಲ್ಲಾ ಸಂಚಾಲಕ ಎಂ.ಜಿ ಪೃಥ್ವಿ ಕಾರ್ಯಕ್ರವನ್ನು ನಿರ್ವಹಿಸಿದರು.
ಇದನ್ನೂ ಓದಿದ್ದೀರಾ?ಚನ್ನರಾಯಪಟ್ಟಣ | ರೈತ ಮುಖಂಡ ವಾಸುದೇವ ಕಲ್ಕೆರೆ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ KPRS ಆಗ್ರಹ
ಕಾರ್ಯಕ್ರಮದಲ್ಲಿ ಅಂಬೇಡ್ಕರ್ ರವರ ಜಾತಿ ವಿನಾಶ ಕೃತಿಯನ್ನು ಸಾಮೂಹಿಕವಾಗಿ ಸಂಜೆವರೆಗೆ ಸಂಪೂರ್ಣವಾಗಿ ಓದಿ, ಸಮಕಾಲೀನ ಸಂಧರ್ಭಕ್ಕೆ ವಿಶ್ಲೇಷಣೆ ಮಾಡಲಾಯಿತು. ಸಾಹಿತಿ ಹರೀಶ್ ಕಟ್ಟೆಬೆಳಗುಲಿ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ ಪುಷ್ಪ, ಉಪನ್ಯನಕರು ಮತ್ತು ಚಿಂತಕರುಗಳಾದ ರೋಹಿತ್ ಅಗಸರಹಳ್ಳಿ, ಅಹಮದ್ ಹಗರೆ., ಡಿವೈಎಫ್ಐ ಮುಖಂಡರಾದ ಶಶಿ ತಟ್ಟೆಕೆರೆ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ರಮೇಶ್, ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ, ಜಗದೀಶ್ ಬಾಬು, ಮುನಿಸ್ವಾಮಿ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




