ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕು ಕಾರ್ಯದರ್ಶಿ ಹಾಗೂ ಕಲ್ಕೆರೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕಾಂ. ವಾಸುದೇವ ಕಲ್ಕೆರೆ ಮೇಲೆ ಹಲ್ಲೆ-ದೌರ್ಜನ್ಯ ನಡೆಸಿರುವ ಆರೋಪಿಗಳನ್ನು ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೇ ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ.

ಕಲ್ಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟೆಮನೆ ವೃತ್ತದಲ್ಲಿ ಗ್ರಂಥಾಲಯವಿತ್ತು. ಈ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸಾರ್ವಜನಿಕರ ಉಪಯೋಗಕ್ಕಾಗಿ ಇದನ್ನು ದುರಸ್ತಿಗೊಳಿಸಿ, ಕಟ್ಟಡವನ್ನು ಉನ್ನತೀಕರಿಸಿ ಡಿಜಿಟಲ್ ಗ್ರಂಥಾಲಯ ಸ್ಥಾಪನೆಗೆ ಅನುಗುಣವಾಗಿ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅನುದಾನದಲ್ಲಿ ಅಭಿವೃದ್ಧಿಗೊಳಿಸಲು ವಾಸುದೇವ ಪ್ರಮುಖ ಪಾತ್ರ ವಹಿಸಿದ್ದರು.
ಆದರೆ ಅಶೋಕ ನೇತೃತ್ವದಲ್ಲಿ ಪಂಚಾಯತಿ ಆಸ್ತಿ ಕಬಳಿಸುವ ದುರುದ್ದೇಶ ಇದ್ದ, ಇದೇ ಸರ್ವೆ ನಂಬರ್ ಗೆ ಹೊಂದಿಕೊಂಡು ಇರುವ ಬಹು ಕೋಟಿ ಬೆಲೆ ಬಾಳುವ ಸುಮಾರು 11 ಎಕರೆ ಸರ್ಕಾರಿ ಭೂಮಿ ಕಬಳಿಸುವ ದುರುದ್ದೇಶದಿಂದ ಆಶೋಕ ನೇತೃತ್ವದ ಸುಮಾರು ಎಂಟು ಜನರಷ್ಟು ಇದ್ದ ಆರೋಪಿಗಳು ದಿ.08-04-26ರಂದು ಸಂಜೆ 6-30ರ ಸಮಯದಲ್ಲಿ ಗ್ರಂಥಾಲಯ ದುರಸ್ತಿ ಕಾರ್ಯ ಮೇಲ್ವಿಚಾರಣೆ ನಡೆಸುತ್ತಿದ್ದ ವಾಸುದೇವ ಮೇಲೆ ಹಲ್ಲೆ ನಡೆಸಿ ಗ್ರಂಥಾಲಯ ದುರಸ್ತಿ ಕಾರ್ಯ ನಿಲ್ಲಿಸುವಂತೆ ಜೀವ ಬೆದರಿಕೆ ಹಾಕಿದ್ದಾರೆ. ಸ್ಥಳೀಯ ಜನರ ಸಕಾಲಿಕ ಮಧ್ಯಪ್ರವೇಶದಿಂದ ವಾಸುದೇವರವರ ಪ್ರಾಣ ಉಳಿದಿದೆ.
ಇದನ್ನೂ ಓದಿದ್ದೀರಾ?ಹಾಸನ | ಚಂದ್ರಪ್ರಸಾದ್ ತ್ಯಾಗಿ 75ನೇ ಜನ್ಮದಿನಾಚರಣೆ
ಆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆ ನುಗ್ಗೇಹಳ್ಳಿ ಪಿಎಸ್ ಐ ರವರಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡದೇ ಹಾಗೂ ದೂರು ದಾಖಲಿಸಿಕೊಳ್ಳಲು ಅನಗತ್ಯ ವಿಳಂಬ ಮಾಡುವ ಮೂಲಕ ದೌರ್ಜನ್ಯ ನಡೆಸಿದ ಆರೋಪಿಗಳ ರಕ್ಷಣೆಗೆ ಪ್ರಯತ್ನಿಸಿದ್ದಾರೆ. ಇಂತಹ ಗಂಭೀರ ಸ್ವರೂಪದ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆದಾಗಲೂ ದೂರು ತೆಗೆದುಕೊಳ್ಳಲು ನಿರಾಕರಿಸಿದ ಕುರಿತು ಇಲಾಖೆ ವಿಚಾರಣೆ ನಡೆಸಬೇಕು, ಕೂಡಲೇ ಎಲ್ಲಾ ಆರೋಪಿಗಳನ್ನು ತಕ್ಷಣವೇ ಬಂಧಿಸಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಬೇಕು ಎಂದು ಗೃಹ ಸಚಿವರನ್ನು ಹಾಗೂ ರಾಜ್ಯ ಸರ್ಕಾರವನ್ನು ಕರ್ನಾಟಕ ಪ್ರಾಂತ ರೈತ ಸಂಘ (KPRS) ಹಾಸನ ಜಿಲ್ಲಾ ಸಮಿತಿ ಆಗ್ರಹಿಸುತ್ತದೆ ಎಂದು ಕೆಪಿಆರ್ ಎಸ್ ನ ಜಿಲ್ಲಾಧ್ಯಕ್ಷರು ಹೆಚ್.ಎಸ್. ಮಂಜುನಾಥ್, ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ತಿಳಿಸಿದರು.




