ಸಕಲೇಶಪುರ ತಾಲೂಕಿನ ಸರ್ವೆಯರ್ ಹಾಗೂ ಸೂಪರ್‌ವೈಸರ್ ಸೇರಿ ಅಕ್ರಮವಾಗಿ ಕಿರುಹುಣಸೆ ಗ್ರಾಮದ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಮಾಡಿದ್ದ ಪೋಡಿ ದುರಸ್ತಿಯನ್ನು ಮೈಸೂರು ವಿಭಾಗದ ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರ ನ್ಯಾಯಾಲಯ ರದ್ದುಗೊಳಿಸಿ ಆದೇಶ ನೀಡಿದೆ.
ಗ್ರಾಮದ ಸರ್ವೆ ನಂಬರ್ 72ರಲ್ಲಿ ಒಟ್ಟು 10 ಎಕರೆ 24 ಗುಂಟೆ ಜಮೀನಿದ್ದು, ಇದು ಮೂಲತಃ ಸರ್ಕಾರಿ ಜಮೀನು. 50 ವರ್ಷಗಳಿಂದ ಸರ್ಕಾರಿ ನೆಡುತೋಪು ಕಾಡು ಬೆಳೆಸಿ ಅರಣ್ಯ ಇಲಾಖೆಯ ಸ್ವಾಧೀನದಲ್ಲಿದೆ. ಈಗ ಸ್ಥಳಕ್ಕೆ ಹೋದರೂ ಅಲ್ಲಿ ಕಾಡು ಹಾಗೂ ಅರಣ್ಯ ಇಲಾಖೆಯ ನೆಡುತೋಪು ಇದೆ. ಇಂತಹ ಜಾಗವನ್ನು ಸ್ವಾಧೀನದಲ್ಲಿಯೇ ಇಲ್ಲದ ಖಾಸಗಿ ವ್ಯಕ್ತಿಗಳಿಗೆ ಸೂಪರ್‌ವೈಸರ್ ಗಿರೀಶ್ ಹಾಗೂ ಸರ್ವೆಯರ್ ರಂಜನ್ ಪೋಡಿ ದುರಸ್ತಿ ಮಾಡಿದ್ದರು. ಕಾನೂನು ಬಾಹಿರವಾಗಿ ಪೋಡಿ ದುರಸ್ತು ಮಾಡಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವಿಶೇಷ ವರದಿ ಪ್ರಕಟವಾಗಿತ್ತು.
ವರದಿ ಪ್ರಕಟವಾದ ಮರುದಿನವೇ ಹಿಂದಿನ ಅರಣ್ಯ ಸಚಿವ ಈಶ್ವರ್ ಖಂಡ್ರೆ, ತನಿಖೆ ನಡೆಸಿ ಕೂಡಲೇ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶ ಹೊರಡಿಸಿದ್ದರು. ತಹಶೀಲ್ದಾರ್ ಕೆ.ಎಸ್.ಸುಪ್ರೀತಾ, ಎಸಿಎಫ್ ಮಧುಸೂದನ್, ಎಡಿಎಲ್‌ಆರ್ ಕೀರ್ತಿ ಸಿಂಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅರಣ್ಯ ಇಲಾಖೆಯು ಅಕೇಶಿಯಾ ಹಾಗೂ ಕಾಡು ಜಾತಿ ಮರಗಳನ್ನು ಬೆಳೆಸಿದ್ದು, ಇದು ದಟ್ಟಾರಣ್ಯ ಹಾಗೂ ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ. ಮಂಜೂರಿದಾರರು ಸ್ಥಳದಲ್ಲಿ ಯಾವುದೇ ಸ್ವಾಧೀನಾನುಭವ ಹೊಂದಿಲ್ಲದಿರುವುದು ಜಂಟಿ ಸ್ಥಳ ತನಿಖಾ ವರದಿಯಲ್ಲಿ ಸ್ಪಷ್ಟಪಡಿಸಿದ್ದರು.
ಆಗಲೇ ಸರ್ವೆಯರ್ ರಂಜನ್ ಅವರನ್ನು ಅಮಾನತುಗೊಳಿಸಿದ್ದರು. ಡಿಡಿಎಲ್‌ಆರ್ ಸೂಪರ್‌ವೈಸರ್ ಗಿರೀಶ್ ಅವರನ್ನು ಅರಕಲಗೂಡು ತಾಲ್ಲೂಕಿಗೆ ವರ್ಗಾವಣೆ ಮಾಡಿದ್ದರು. ಕೆಲವರ ಒತ್ತಡದಿಂದ ಡಿಡಿಎಲ್‌ಆರ್ ವರ್ಗಾವಣೆ ಆದೇಶ ರದ್ದುಗೊಳಿಸಿದ್ದರು. ಇತ್ತೀಚೆಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಡಿಡಿಎಲ್‌ಆರ್ ಹೇಮಲತಾ ಅವರಿಗೆ ನಿರ್ದೇಶನ ನೀಡಿದ್ದರಿಂದ ಗಿರೀಶ್ ಅವರನ್ನೂ ಅಮಾನತ್ತುಗೊಳಿಸಲಾಗಿದೆ. ಮಂಜೂರಾತಿ ರದ್ದು ಆದೇಶ: ಅಕ್ರಮ ಪೋಡಿಯನ್ನು ರದ್ದುಗೊಳಿಸುವಂತೆ ವಲಯ ಅರಣ್ಯ ಅಧಿಕಾರಿ ಎಚ್.ಆರ್. ಹೇಮಂತ್‌ಕುಮಾರ್, ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಹುಲುಮನಿ ತಿಮ್ಮಣ್ಣ, ಸರ್ವೆ ನಂಬರ್ 72ರಲ್ಲಿ ಮಂಜೂರಾತಿ ಆದೇಶ, ಸಾಗುವಳಿ ಚೀಟಿ ಹಾಗೂ ಮ್ಯುಟೇಷನ್‌ಗಳನ್ನು ರದ್ದುಪಡಿಸಿ, ಈ ಜಮೀನನ್ನು ‘ಸರ್ಕಾರ’ ಹಾಗೂ ಅರಣ್ಯ ಇಲಾಖೆಗೆ ಒಳಪಟ್ಟಿದೆ ಎಂದು ನಮೂದಿಸಲು ಆದೇಶಿಸಿದ್ದರು. ಹಿಸ್ಸಾ ಪೋಡಿ ರದ್ದುಗೊಳಿಸಿ ಆದೇಶ: ವಾಸ್ತವ ಸ್ಥಿತಿಗೆ ವಿರುದ್ಧವಾಗಿ ಮತ್ತು ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿದ್ದ ಸ.ನಂ. 72/1 ಹಾಗೂ 72/2 ರ ಹಿಸ್ಸಾ ಪೋಡಿ ದಾಖಲೆಗಳನ್ನು ಸಂಪೂರ್ಣವಾಗಿ ರದ್ದುಪಡಿಸಿ ಪ್ರಾದೇಶಿಕ ಭೂದಾಖಲೆಗಳ ಜಂಟಿ ನಿರ್ದೇಶಕ ಇ.ಪ್ರಕಾಶ್ ಆದೇಶಿಸಿದ್ದಾರೆ. ರದ್ದುಪಡಿಸಲಾದ ವಿಸ್ತೀರ್ಣವನ್ನು ಮೊದಲಿನಂತೆ ಸರ್ವೆ ನಂಬರ್ 72ರ ಹೆಸರಿನಲ್ಲಿಯೇ ನಿರ್ವಹಣೆ ಮಾಡುವಂತೆ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಲಾಗಿದೆ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಸಾಲಭಾದೆಯಿಂದ ರೈತ ಸಾವು
ಇಬ್ಬರನ್ನು ಅಮಾನತು ಮಾಡಿ ತಿಂಗಳ ನಂತರ ಅವರು ಬೇರೆ ಕಡೆ ಕೆಲಸ ಮಾಡುತ್ತಾರೆ. ತಪ್ಪಿರಸ್ಥರೆಲ್ಲರ ವಿರುದ್ಧ ಕಠಿಣ ಕಾನೂನು ಕ್ರಮ ಆಗಲೇಬೇಕು ಎಂದು ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಆರ್. ಮಂಜುನಾಥ್ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರೂ ತಪ್ಪಿತಸ್ಥರು ಎಂಬುದು ಉಪ ವಿಭಾಗಾಧಿಕಾರಿಗಳ ಮಂಜೂರಾತಿ ಆದೇಶ ರದ್ದು ಹಾಗೂ ಭೂದಾಖಲೆಗಳ ಜಂಟಿ ನಿರ್ದೇಶಕರಿಂದ ಪೋಡಿ ದುರಸ್ತು ರದ್ದುಗೊಳಿಸಿರುವ ಆದೇಶದಿಂದ ಸ್ಪಷ್ಟವಾಗಿದೆ. ಆದರೆ ತಪ್ಪಿತಸ್ಥರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವುದಾಗಲಿ, ಅವರ ವಿರುದ್ಧ ತನಿಖೆ ನಡೆಸುವ ವಿಷಯ ಮೇಲಧಿಕಾರಿಗಳ ಆದೇಶ ಪತ್ರದಲ್ಲಿ ಏಕೆ ಪ್ರಸ್ತಾಪಿಸಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.





