ಭಾರತದಲ್ಲಿ ಇತ್ತೀಚಿನ ಪ್ರತಿಭಟನೆಗಳ ಸಂದರ್ಭದಲ್ಲಿ ಅಧಿಕಾರಿಗಳು ನಡೆದುಕೊಂಡ ರೀತಿಯ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕು. ಪ್ರತಿಭಟನಾಕಾರರ ವಿರುದ್ಧ ಅತಿಯಾದ ಬಲಪ್ರಯೋಗ ನಿಲ್ಲಿಸಬೇಕು, ಸಭೆ-ಸಮಾವೇಶಗಳ ಮೇಲಿನ ವ್ಯಾಪಕ ನಿರ್ಬಂಧಗಳನ್ನು ಹಿಂಪಡೆಯಬೇಕು ಹಾಗೂ ಡಿಜಿಟಲ್ ಕಣ್ಗಾವಲಿನ ದುರ್ಬಳಕೆಯನ್ನು ತಡೆಯಬೇಕು ಎಂದು ಮೋದಿ ಸರ್ಕಾರಕ್ಕೆ ವಿಶ್ವಸಂಸ್ಥೆಯ ಸ್ವತಂತ್ರ ಮಾನವ ಹಕ್ಕುಗಳ ತಜ್ಞರು ಆಗ್ರಹಿಸಿದ್ದಾರೆ.
ಇತ್ತೀಚಿನ ಪ್ರತಿಭಟನೆಗಳ ವೇಳೆ ಪ್ರತಿಭಟನಾಕಾರರ ಮೇಲೆ ದಮನಕಾರಿ ಕ್ರಮಗಳು ನಡೆದಿವೆ. ಇದರಿಂದ ಹೋರಾಟಗಾರರು ಗಾಯಗೊಂಡಿದ್ದಾರೆ ಮತ್ತು ಕೆಲವರು ಪೊಲೀಸರ ದುರ್ವರ್ತನೆಗೆ ಒಳಗಾಗಿರುವುದಾಗಿ ವರದಿಯಾಗಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ಅನುಕೂಲವಾಗುವಂತೆ ಮತದಾರರ ಪಟ್ಟಿಗಳ ಪರಿಷ್ಕರಣೆ ನಡೆಯುತ್ತಿದೆ ಎಂದು ಆರೋಪಿಸಿ, ವಿರೋಧ ಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಳೆದ ಕೆಲವು ವಾರಗಳಿಂದ ಪ್ರತಿಭಟನೆ ನಡೆಸುತ್ತಿವೆ. ಪ್ರತಿಭಟನೆಗಳು ಶಾಂತಿಯುತವಾಗಿದ್ದರೂ, ಶಸ್ತ್ರರಹಿತ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಸೇರಿದಂತೆ ಬಲಪ್ರಯೋಗ ಮಾಡಲಾಗಿದೆ. ಸಾವಿರಾರು ಜನರು ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳುವುದನ್ನು ತಡೆಯಲಾಗಿದೆ ಎಂಬ ವರದಿಗಳಿವೆ ಎಂದು ಸುಮಾರು 24 ಮಂದಿ ಸ್ವತಂತ್ರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
“ಅತಿಯಾದ ಬಲಪ್ರಯೋಗವನ್ನು ತಕ್ಷಣವೇ ನಿಲ್ಲಿಸಬೇಕು, ಎಲ್ಲ ರೀತಿಯ ಸಭೆ-ಸಮಾವೇಶಗಳ ಮೇಲೆ ಹೇರಿರುವ ವ್ಯಾಪಕ ನಿರ್ಬಂಧಗಳನ್ನು ಹಿಂಪಡೆಯಬೇಕು ಮತ್ತು ಬಯೋಮೆಟ್ರಿಕ್ ಮಾಹಿತಿಯ ಬಳಕೆ ಸೇರಿದಂತೆ ಡಿಜಿಟಲ್ ಕಣ್ಗಾವಲಿನ ದುರ್ಬಳಕೆ ಹಾಗೂ ಇಂಟರ್ನೆಟ್ ಸೇವೆಗಳ ವ್ಯತ್ಯಯವನ್ನು ತಡೆಯಬೇಕು” ಎಂದು ಅವರು ಒತ್ತಾಯಿಸಿದ್ದಾರೆ.
ಭಾರತದ ಇತ್ತೀಚಿನ ಪ್ರತಿಭಟನೆಗಳ ವೇಳೆ ನಡೆದ ಸಾಮೂಹಿಕ ಬಂಧನಗಳ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಈ ತಿಂಗಳ ಆರಂಭದಲ್ಲಿ ಕಳವಳ ವ್ಯಕ್ತಪಡಿಸಿತ್ತು. ಆದರೆ, ಇಂತಹ ಟೀಕೆಗಳನ್ನು ಭಾರತ ಸರ್ಕಾರ ಈ ಹಿಂದೆ ಹಲವು ಬಾರಿ ತಿರಸ್ಕರಿಸಿದ್ದು, ಅವು ದೇಶದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಪ್ರಯತ್ನಗಳೆಂದು ಸಮರ್ಥಿಸಿಕೊಂಡಿತ್ತು. ಈ ಕುರಿತು ಪ್ರತಿಕ್ರಿಯೆ ಕೋರಿ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿದರೂ ಉತ್ತರ ಲಭ್ಯವಾಗಿಲ್ಲ. ಈ ತಿಂಗಳು ಪ್ರತಿಕ್ರಿಯಿಸಿದ್ದ ಭಾರತ ಸರ್ಕಾರ, ಕಾನೂನು ಜಾರಿ ಸಂಸ್ಥೆಗಳು “ಕಾನೂನಿಗೆ ಕಟ್ಟುನಿಟ್ಟಾಗಿ ಅನುಗುಣವಾಗಿ” ಕಾರ್ಯನಿರ್ವಹಿಸಿವೆ ಎಂದು ತಿಳಿಸಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ ವಿದೇಶಿ ಪ್ರವಾಸದ ದಾಖಲೆ ಬಹಿರಂಗಕ್ಕೆ ದೆಹಲಿ ಹೈಕೋರ್ಟ್ ನಕಾರ
ಮತದಾರರ ಪಟ್ಟಿಗಳಿಂದ ಸುಮಾರು 13 ಕೋಟಿ ಹೆಸರುಗಳನ್ನು ತೆಗೆದುಹಾಕಿರುವುದರಿಂದ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವಂತಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಈ ಕ್ರಮದಿಂದ ಬಡವರು, ನಿರಾಶ್ರಿತರು ಹಾಗೂ ಮುಸ್ಲಿಮರು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯಗಳ ಜನರು ಹೆಚ್ಚಿನ ಪ್ರಮಾಣದಲ್ಲಿ ಬಾಧಿತರಾಗಿದ್ದಾರೆ. ಆದರೆ, ಬಿಜೆಪಿ ಮತ್ತು ಭಾರತದ ಚುನಾವಣಾ ಆಯೋಗ ಈ ಆರೋಪಗಳನ್ನು ನಿರಾಕರಿಸಿವೆ. ನಕಲಿ ಅಥವಾ ದ್ವಂದ್ವ ಹೆಸರುಗಳು, ಮೃತಪಟ್ಟವರು, ಸ್ಥಳಾಂತರಗೊಂಡವರು ಹಾಗೂ ಇತರ ಕಾರಣಗಳಿಂದ ಮತದಾರರಾಗಲು ಅರ್ಹತೆ ಕಳೆದುಕೊಂಡವರ ಹೆಸರುಗಳನ್ನು ಮಾತ್ರ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ ಎಂದು ಚುನಾವಣಾ ಆಯೋಗ ಹೇಳಿದೆ. ತಪ್ಪಾಗಿ ಹೆಸರು ಕೈಬಿಟ್ಟಿದ್ದರೆ ಸಂಬಂಧಪಟ್ಟವರು ಮೇಲ್ಮನವಿ ಸಲ್ಲಿಸಬಹುದು ಎಂದು ಆಯೋಗ ತಿಳಿಸಿದೆ.
ಪ್ರತಿಭಟನೆಗಳ ಮೇಲಿನ ಪೊಲೀಸ್ ಕ್ರಮವನ್ನು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ ಮಾನವ ಹಕ್ಕುಗಳ ಸಂಘಟನೆಗಳು ಖಂಡಿಸಿವೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ನೇಮಕಗೊಳ್ಳುವ ಸ್ವತಂತ್ರ ತಜ್ಞರು ನಿರ್ದಿಷ್ಟ ಮಾನವ ಹಕ್ಕುಗಳ ಬಿಕ್ಕಟ್ಟುಗಳನ್ನು ಮೇಲ್ವಿಚಾರಣೆ ಮಾಡಿ, ಅವುಗಳ ಕುರಿತು ಮಾಹಿತಿ ಸಂಗ್ರಹಿಸುತ್ತಾರೆ ಮತ್ತು ವರದಿ ಮಾಡುತ್ತಾರೆ. ಅವರು ವಿಶ್ವಸಂಸ್ಥೆಯ ವ್ಯವಸ್ಥೆಯ ಭಾಗವಾಗಿ ನೇಮಕಗೊಂಡಿದ್ದರೂ, ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಾರೆ.





