ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಸುಳ್ಳಕ್ಕಿ ಗ್ರಾಮದಲ್ಲಿ ಹಂಪ್ಸ್ ತೆರವುಗೊಳಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ದೂರುದಾರ ಸಂತೋಷ್ ವಿರುದ್ಧವೇ ಗ್ರಾಮಸ್ಥರು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಗ್ರಾಮಸ್ಥರ ಪ್ರಕಾರ, ಸಂತೋಷ್ ತನ್ನ ಮನೆಗೆ ಅನುಕೂಲವಾಗುವಂತೆ, ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ತನ್ನ ಮನೆ ಬಳಿ ಹಂಪ್ಸ್ ನಿರ್ಮಿಸಿಕೋಡಿದ್ದ ಎನ್ನಲಾಗಿದೆ. ಆದರೆ, ಈ ಹಂಪ್ಸ್ ಅವೈಜ್ಞಾನಿಕವಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವುದಕ್ಕಿಂತ ಅನಾನುಕೂಲವೇ ಹೆಚ್ಚು ಉಂಟುಮಾಡಿದವು ಎಂದು ಗ್ರಾಮಸ್ಥರು ದೂರಿದ್ದಾರೆ.
ಸಂತೋಷ್ ನಿವಾಸದಿಂದ ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರ ಸುಮಾರು 300 ಮೀಟರ್ ದೂರದಲ್ಲಿದ್ದರೂ ಹಂಪ್ಸ್ ತೆರವುಗೊಳಿಸುವುದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ ಎಂದು ಸಂತೋಷ್ ಆರೋಪಿಸಿದ್ದ. ಆದರೆ ಹಂಪ್ಸ್‌ನಿಂದಾಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದವು. ಅಲ್ಲದೇ ಈ ರಸ್ತೆ ಬ್ಯಾಡರಜಗಲಿ, ದೀಣೆಕೆರೆ, ಹಲ್ಡರಬಾರೆ ಹಾಗೂ ಸುಳ್ಳಕ್ಕಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆಯೇ ಹೊರೆತು ಯಾವುದೇ ಸದಿಗೆ ಸಂಪರ್ಕ ಕಲ್ಪಿಸುವುದಿಲ್ಲ. ಈ ರಸ್ತೆಯಲ್ಲಿ ಯಾವುದೇ ಮರಳು ವಾಹನಗಳು ಸಂಚಾರ ಮಾಡುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟನೆ ನೀಡಿದ್ದಾರೆ.

ಅಪಘಾತಗಳನ್ನು ತಪ್ಪಿಸಲು ಗ್ರಾಮಸ್ಥರು ಹಂಪ್ಸ್ ತೆರವುಗೊಳಿಸಲು ನಿರ್ಧರಿಸಿ, ಏಪ್ರಿಲ್ 18ರಂದು ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಬಳಿಕ ಗ್ರಾಮ ಪಂಚಾಯಿತಿಯ ಪಿಡಿಒ ಆದೇಶದ ಮೇರೆಗೆ, ಸಿಬ್ಬಂದಿ ಜೆಸಿಬಿ ಯಂತ್ರದ ಜೊತೆಗೆ ಸುಳ್ಳಕ್ಕಿ ಗ್ರಾಮಕ್ಕೆ ಬಂದು ಗ್ರಾಮಸ್ಥರ ಸಮ್ಮುಖದಲ್ಲಿ ಹಂಪ್ಸ್ ತೆರವುಗೊಳಿಸಲು ಮುಂದಾಗಿದ್ದರು. ಆದ್ರೆ ಈ ವೇಳೆ ಸಂತೋಷ್ ಜೆಸಿಬಿ ಯಂತ್ರಕ್ಕೆ ಅಡ್ಡ ನಿಂತು ವಿರೋಧ ವ್ಯಕ್ತಪಡಿಸಿದ್ದ. ಅಷ್ಟೇ ಅಲ್ಲದೇ ಜೆಸಿಬಿ ಆಪರೇಟರ್ಗೆ ನಿಂದಿಸಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾನೆ. ಈ ವೇಳೆ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಿಸಿ, ಮರಳು ದಂಧೆಕೋರರಿಗೆ ಅನುಕೂಲ ಕಲ್ಪಿಸಲು ಹಂಪ್ಸ್ ತೆಗೆದುಹಾಕಲಾಗುತ್ತಿದೆ ಎಂದು ಬಿಂಭಿಸಿ ಗ್ರಾಮಸ್ಥರ ವಿರುದ್ಧ ಅಪ ಪ್ರಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಈತನ ಆರೋಪಕ್ಕೆ ತಿರುಗೇಟು ನೀಡಿದ ಗ್ರಾಮಸ್ಥರು, ಸಂತೋಷ್ ಮರಳು ಸಾಗಣೆದಾರರಿಂದಲೇ ಹಣ ವಸೂಲಿ ಮಾಡುತ್ತಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ. ಗ್ರಾಮದ ವೃತ್ತದಲ್ಲಿ ಖಾಸಗಿಯಾಗಿ ಸಿಸಿಟಿವಿ ಅಳವಡಿಸಿ, ಮರಳು ಸಾಗಣೆ ವಾಹನಗಳನ್ನು ತಡೆದು ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿರುವುದಾಗಿ ಗ್ರಾಮಸ್ಥರು ದೂರಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಜನಗಣತಿ ಯಶಸ್ವಿಗೊಳಿಸಲು ಸೂಚನೆ
ಈ ಪ್ರಕರಣ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.





