ಇಬ್ಬರು ವ್ಯಕ್ತಿಗಳ ನಡುವೆ ನಡೆದ ಮದ್ಯ ಸೇವಿಸುವ ಪಂದ್ಯ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ತಿಮ್ಮೇಗೌಡ (60) ಎಂದು ಗುರುತಿಸಲಾಗಿದೆ. ಸಿಗರನಹಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜು ಹಾಗೂ ತಿಮ್ಮೇಗೌಡ ಎಂಬುವವರ ನಡುವೆ ಪಂದ್ಯ ನಡೆದಿದ್ದು, ಮೂವತ್ತು ನಿಮಿಷದಲ್ಲಿ 90 ಎಂಲ್‌ನ ಹತ್ತು ಪ್ಯಾಕೆಟ್ ಮದ್ಯ ಕುಡಿಯುವಂತೆ ಪಂದ್ಯದಲ್ಲಿ ಸೂಚಿಸಲಾಗಿತ್ತು.
ಕೃಷ್ಣೇಗೌಡ ಎಂಬವರು ಇಬ್ಬರಿಗೂ ಮದ್ಯದ ಪ್ಯಾಕೆಟ್‌ಗಳನ್ನು ನೀಡಿದ್ದರು. ಚಾಲೆಂಜ್‌ಗಾಗಿ ಮದ್ಯ ಕುಡಿದು ರಕ್ತ ವಾಂತಿ ಮಾಡಿಕೊಂಡು ಬಸ್ ನಿಲ್ದಾಣದಲ್ಲೇ ತಿಮ್ಮೇಗೌಡ ಬಿದ್ದಿದ್ದಾರೆ. ತಿಮ್ಮೇಗೌಡ ವಾಂತಿ ಮಾಡುತ್ತಿದ್ದಂತೆಯೇ ದೇವರಾಜು ಮತ್ತು ಕೃಷ್ಣೇಗೌಡ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗ್ರಾಮಸ್ಥರು ತಿಮ್ಮೇಗೌಡನನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಮಲಗಿಸಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣ ನಿತ್ರಾಣವಾಗಿದ್ದ ತಿಮ್ಮೇಗೌಡ ಮಲಗಿದ್ದಲ್ಲೇ ಮೃತಪಟ್ಟಿದ್ದಾರೆ. ತಿಮ್ಮೇಗೌಡನ ಪುತ್ರಿ ಹಬ್ಬಕ್ಕಾಗಿ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಗೆ ಬಂದು ತನ್ನ ತಂದೆ ರಕ್ತಕಾರಿ ಮಲಗಿದ್ದನ್ನ ಕಂಡು ಎಬ್ಬಿಸಲು ಯತ್ನಿಸಿದಾಗ ಮೃತಪಟ್ಟಿರುವುದು ತಿಳಿದಿದೆ.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ; ತಂಬಾಕು ಉತ್ಪನ್ನ ಖರೀದಿ ವಯೋಮಿತಿ 21 ವರ್ಷಕ್ಕೆ ಏರಿಕೆ: ದಿನೇಶ್ ಗುಂಡೂರಾವ್
ಘಟನೆ ಸಂಬಂಧ ತಿಮ್ಮೇಗೌಡನ ಪುತ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹೊಳೆನರಸೀಪುರ ನಗರ ಠಾಣೆ ಪೊಲೀಸರು ದೇವರಾಜು ಹಾಗೂ ಕೃಷ್ಣೇಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.