ಹಾವೇರಿ ಜಿಲ್ಲೆಯ ಹಾನಗಲ್‌ನಲ್ಲಿ ನಡೆದಿದ್ದ ಅನೈತಿಕ ಪೊಲೀಸ್‌ಗಿರಿ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದ್ದು, ವಿವಾಹಿತ ಮಹಿಳೆಯನ್ನು ಅಪಹರಿಸಿ ಏಳು ಮಂದಿಯಿಂದ ಅತ್ಯಾಚಾರ ನಡೆಸಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ಅನ್ಯಕೋಮಿನ ಪುರುಷನೊಂದಿಗೆ ಸಿಕ್ಕಿ ಬಿದ್ದಿದ್ದಕ್ಕೆ ಮುಸ್ಲಿಂ ಮಹಿಳೆಯನ್ನು ಥಳಿಸಿ, ಖಾಸಗಿ ಅಂಗಾಂಗವನ್ನು ಘಾಸಿಗೊಳಿಸಿ ಸಾಮೂಹಿಕ ಅತ್ಯಾಚಾರಗೈಯ್ಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಈ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು ಉಳಿದ ಆರೋಪಿಗಳಿಗೆ ಬಲೆ ಬೀಸಲಾಗಿದೆ. ಮತ್ತೊಂದೆಡೆ ಅನೈತಿಕ ಪೊಲೀಸ್ ಗಿರಿ ಪ್ರಕರಣದ ಆರೋಪಿಗಳ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಜ.8ರ ಸೋಮವಾರ ಅನ್ಯಕೋಮಿನ ಇಬ್ಬರು ವಿವಾಹಿತರು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕ್ಲಕ್ರಾಸ್ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ತಂಗಿದ್ದರು ಎಂದು ಆರೋಪಿಸಿ ಕೆಲ ಮುಸ್ಲಿಂ ಯುವಕರು ಏಕಾಏಕಿ ಹೋಟೆಲ್ ಗೆ ನುಗ್ಗಿ ದಾಂಧಲೆ ಮಾಡಿ ಮಹಿಳೆ ಮತ್ತು ಪುರುಷನ ಮೇಲೆ ಹಲ್ಲೆ ನಡೆಸಿದ್ದರು. ಅಲ್ಲದೇ ಹಲ್ಲೆ ಮಾಡುವಾಗ ವಿಡಿಯೋ ಮಾಡಿಕೊಂಡಿದ್ದರು. ಈಗ ಈ ಘಟನೆಯ ಎರಡು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಘಟನೆಗೆ ಸಂಬಂಧಿಸಿದಂತೆ ಎರಡನೇ ವಿಡಿಯೋ ವೈರಲ್ ಆಗಿದ್ದು, ಆರೋಪಿಗಳು ಮುಸ್ಲಿಂ ಮಹಿಳೆಯನ್ನು ಕಾರಿನಲ್ಲಿ ಎಳೆದೊಯ್ದು ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿದೆ.
ಏಳು ಯುವಕರಿಂದ ಗ್ಯಾಂಗ್ ರೇಪ್
ಹೋಟೆಲ್ನಲ್ಲಿ ಹಲ್ಲೆ ಮಾಡಿದ ಬಳಿಕ ಅರಣ್ಯ ಪ್ರದೇಶಕ್ಕೆ ಕಾರಿನಲ್ಲಿ ಕರೆದೊಯ್ದು 7 ಮುಸ್ಲಿಂ ಯುವಕರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಸಂತ್ರಸ್ತ ಮಹಿಳೆ, “ಒಬ್ಬರಾದ ಮೇಲೆ ಒಬ್ಬರು ನನ್ನನ್ನು ಅತ್ಯಾಚಾರ ಮಾಡಿದ್ದಾರೆ. ಮಾರಣಾಂತಿಕವಾಗಿ ಹಲ್ಲೆ ಕೂಡ ಮಾಡಿದ್ದಾರೆ” ಎಂದು ಮಹಿಳೆ ಆರೋಪಿಸಿದ್ದಾರೆ.
ಮತ್ತೊಂದೆಡೆ “ತನ್ನ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ. ಎಷ್ಟು ಮಂದಿ ಇದ್ದರು ಎಂದು ನನಗೆ ಮಾಹಿತಿ ಇಲ್ಲ. ಕಳೆದ ಸೋಮವಾರ ಈ ಘಟನೆ ನಡೆದಿದೆ. ನನ್ನ ಪತ್ನಿ ಆಕೆಯ ತಂಗಿಯ ಬಳಿ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರಗೈದು, ಹಿಂಸೆ ನೀಡಿದ್ದಾರೆ. ಅವರು ಎಲ್ಲವನ್ನೂ ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಗೊತ್ತಾಗಿದೆ” ಎಂದು ಮಹಿಳೆಯ ಪತಿ ಕೂಡ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಹೊಳಲ್ಕೆರೆ ಪುರಸಭೆ ಸದಸ್ಯರ ಬೆಂಬಲಿಗರ ನಡುವೆ ಮಾರಾಮಾರಿ
ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿದ್ದು, ಆರೋಪಿಗಳನ್ನು ಬಂಧಿಸಲು ಕ್ರಮ ಕೈಗೊಂಡಿದ್ದಾರೆ. ವೈರಲಾಗಿರುವ ವಿಡಿಯೋ ಅನೈತಿಕ ಪೊಲೀಸ್‌ಗಿರಿಗೊಳಗಾದ ಮಹಿಳೆಯದ್ದೊ ಅಥವಾ ಬೇರೆಯವರದ್ದೋ ಎಂದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ.