ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಅಪಘಾತಕ್ಕೆಗೊಳಗಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವೈದ್ಯಕೀಯ ಚಿಕಿತ್ಸೆ ಜೊತೆಗೆ 1 ಲಕ್ಷ ರೂ. ಪರಿಹಾರ ನೀಡಬೇಕು. ಅಪಘಾತಕ್ಕೆ ಕಾರಣರಾದ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಎಸ್‌ಎಫ್‌ಐ ಆಗ್ರಹಿಸಿದೆ.
ಹಾವೇರಿಯಲ್ಲಿ ಪ್ರತಿಭಟನೆ ನಡೆಸಿದ ಎಸ್‌ಎಫ್‌ಐ ಕಾರ್ಯಕರ್ತರು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಅಕ್ಷಯ ಶ್ರೀಧರ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
“ಸೋಮವಾರ, ಹಾವೇರಿ ಜಿಲ್ಲೆಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ನಾಲ್ವರು ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಸ್ ಹತ್ತುವಾಗ, ಹತ್ತುವ ಮುನ್ನವೇ ಬಸ್ ಮುಂದೆ ಚಲಿಸಿದ್ದು, ವಿದ್ಯಾರ್ಥಿಗಳು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ, ಮುಂದೆ ನಿಂತಿದ್ದ ಆಟೋಗೆ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳಾದ ರೇವಣಸಿದ್ದೇಶ್ ವಿ, ಆರ್ ಕಿರಣ, ಮೋಹನ್ ಎಚ್, ಪ್ರವೀಣ್ ರಾಠೋಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಎಸ್ಆರ್‌ಟಿಸಿ ಡ್ರೈವರ್ ಹಾಗೂ ಕಂಡಕ್ಟರ್ ನಿರ್ಲಕ್ಷ್ಯತನದಿಂದಾಗಿ ಘಟನೆ ಸಂಭವಿಸಿದೆ” ಎಂದು ಆರೋಪಿಸಿದ್ದಾರೆ.
“ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಗಳು ಉಚಿತ ಚಿಕಿತ್ಸೆ ನೀಡಬೇಕು. ಅವರಿಗೆ 1 ಲಕ್ಷ ರೂ. ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ವಿದ್ಯಾರ್ಥಿಗಳಿಗೆ ಹಿಂದಿನಿಂದಲೂ ಬಸ್ ವ್ಯವಸ್ಥೆಯ ಸಮಸ್ಯೆ ಇದೆ. ಈ ಹಿಂದೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರ್ಧ ಗಂಟೆಗೊಮ್ಮೆ ಬಸ್ ಸಂಚಾರ ಒದಗಿಸಲಾಗಿತ್ತು. ಆದರೆ, ಕಳೆದ ಮೂರು ತಿಂಗಳಿಂದ ಬಸ್ ಸಂಚಾರ ನಿಲ್ಲಿಸಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಸಮರ್ಪಕವಾಗಿ ಬಸ್ ವ್ಯವಸ್ಥೆ ಕಲ್ಪಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಎಸ್ಎಫ್ಐ ಮುಖಂಡ ಅಮರೇಶ್ ಕಡಗದ ಮಾತನಾಡಿ, “ಸರ್ಕಾರ ಹಾಗೂ ಜಿಲ್ಲಾಡಳಿತ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ಸೇವೆಗೆ ಸಮರ್ಪಕವಾಗಿ ಬಸ್ಸುಗಳನ್ನು ಬಿಡಬೇಕು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸಿನ ಸೌಲಭ್ಯ ಒದಗಿಸಬೇಕು. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ರಾಜ್ಯ ಈ ವಿಚಾರದಲ್ಲಿ ಗಂಭೀರವಾಗಿ ಚಿಂತನೆ ನಡೆಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ಸರ್ಕಾರಿ ಇಂಜಿನಿಯರಿಂಗ್ ಮಹಾವಿದ್ಯಾಲಯಕ್ಕೆ ಪ್ರತಿ ನಿತ್ಯವು ಕನಿಷ್ಠ 20 ಬಸ್ಸುಗಳನ್ನು ಬಿಡಬೇಕು. ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಶಿಸ್ತು ಕ್ರಮ ಜರುಗಿಸಬೇಕು. ಗಾಯಗಳು ವಿದ್ಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಜೊತೆಗೆ 1 ಲಕ್ಷ ಪರಿಹಾರ ಕೊಡಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಭೆ ಕರೆದು ಇಡೀ ಜಿಲ್ಲೆಯ ಬಸ್ಸಿನ ಸಮಸ್ಯೆಗಳನ್ನು ಪರಿಹಾರಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಸ್ಎಫ್ಐ ಮುಖಂಡರಾದ ಮಹೇಶ್ ಮರೋಳ, ಕಿರಣ ಬಿ, ಅಭಿಷೇಕ ಹಲಗೇರಿ, ನವೀನ್ , ಪ್ರಥಮೇಶ್, ಕುಮುದಾ ಯಶೋದಾ, ಅಕ್ಷತಾ ಕೆ ಆರ್, ಕೀರ್ತನಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.