ಹಾವೇರಿ ತಾಲೂಕಿನ ಗುತ್ತಲ ಪಟ್ಟಣದಲ್ಲಿರುವ ರಮ್ಮಿ ಕ್ಲಬ್ ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಪಿಎಸ್‌ಐ ಸಾಹೇಬರು ಜನಸ್ನೇಹಿ ಪೋಲಿಸ್ ಠಾಣೆ ಗುತ್ತಲ ಅವರಿಗೆ ಮನವಿ ಸಲ್ಲಿಸಿದರು.
ಕರವೇ ಹಾವೇರಿ ತಾಲೂಕು ಅಧ್ಯಕ್ಷ ಹಾಲೇಶ್ ಹಾಲಣ್ಣನವರ ಮಾತನಾಡಿ, “ಗುತ್ತಲ ಪಟ್ಟಣದಲ್ಲಿ ರಮ್ಮಿ ಕ್ಲಬ್‌ಗಳನ್ನು ಪ್ರಾರಂಭ ಮಾಡಿದ್ದು, ಈ ರಮ್ಮಿ ಕ್ಲಬ್ ಶಾಲೆ ಹಾಗೂ ಸರ್ಕಾರಿ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವುದರಿಂದ ಶಾಲೆಯ ಮಕ್ಕಳಿಗೆ, ಆಸ್ಪತ್ರೆಯ ರೋಗಿಗಳಿಗೆ, ಅಲ್ಲಿರುವಂತ ಅಂಗಡಿ ವ್ಯಾಪಾರಸ್ತರಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಈ ರಮ್ಮಿ ಕ್ಲಬ್‌ನಿಂದ ಸಾಕಷ್ಟು ಯುವಕರು ದಾರಿ ತಪ್ಪುತ್ತಿದ್ದಾರೆ. ಇನ್ನೂ ಕೆಲವರು ತಮ್ಮ ಕೆಲಸ ಬಿಟ್ಟು ಈ ರಮ್ಮಿ ಆಟದಲ್ಲಿ ಮಗ್ನರಾಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
“ರಮ್ಮಿ ಕ್ಲಬ್‌ನಿಂದ ಯುವಜನರು ದಾರಿತಪ್ಪಿರುವುದಲ್ಲದೆ, ಅವರ ಕುಟುಂಬದಲ್ಲಿಯೂ ಕೂಡಾ ತುಂಬಾ ತೊಂದರೆಗಳಾಗುತ್ತಿವೆ. ಕೆಲವೊಂದು ಕುಟುಂಬ ಬೀದಿಗೆ ಬರುವಂತಾಗಿದೆ. ಹಾಗಾಗಿ ಶಾಲಾ ಮಕ್ಕಳು ಮತ್ತು ಯುವಕರ ಭವಿಷ್ಯ ಕಾಪಾಡುವ ಸಲುವಾಗಿ ತಾವುಗಳು ಈ ರಮ್ಮಿ ಕ್ಲಬ್ ತೆರವುಗೊಳಿಸಬೇಕು. ಇಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರು ಸೇರಿ ತೀವ್ರ ಹೋರಾಟ ಮಾಡಬೇಕಾಗುತ್ತದೆ” ಎಂದು ಹಾಲೇಶ್ ಎಚ್ಚರಿಕೆ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಭರಮಸಮುದ್ರ ಗ್ರಾಮದ ಶಾಲೆ ಕಟ್ಟಡ ದುರಸ್ತಿ; ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದ ಆರೋಪ
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಈ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಚನ್ನಪ್ಪ ಹೊನ್ನಮ್ಮನವರ, ನಗರ ಘಟಕ ಅಧ್ಯಕ್ಷ ಗೌಸ್ ಪಾಕ ಬಾಲೆಬಾಯಿ, ಯುವ ಘಟಕ ಅಧ್ಯಕ್ಷ ಫಕ್ರುದ್ದೀನ್ ಅಂಗಡಿಕಾರ, ಕಾಳಪ್ಪ ಬಡಿಗೇರ, ಕರಬಸ್ಸು ಕುರಬಗೇರಿ, ಪ್ರವೀಣ ಹೊಳಲ, ಜಿಯಾವುಲ್ಲಾ ಗುಯಿಲಗುಂದಿ ಮತ್ತು ಪಟ್ಟಣದ ಹಿರಿಯರು ಇದ್ದರು.
