“ರಾಣೇಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ಶುಷ್ರೂಕಿಯಾಗಿ ಕೆಲಸ ಮಾಡುತ್ತಿದ್ದ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ (22) ಹತ್ಯೆಗೈದ ಘಟನೆಯನ್ನು ಸಮಗ್ರ ತನಿಖೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಬೇಕು” ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆಗ್ರಹಿಸಿದರು.
ಹಾವೇರಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ಸ್ವಾತಂತ್ರ್ಯ ಹೋರಾಟಗಾರ ಸಂಗೂರು ಕರಿಯಪ್ಪ ಪ್ರತಿಮೆ ಹತ್ತಿರ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ವತಿಯಿಂದ ಸ್ವಾತಿ ಹತ್ಯೆ ಖಂಡಿಸಿ ಮೇಣದ ಬತ್ತಿ ಬೆಳಗಿ ಪ್ರತಿಭಟಿಸಿ, ಮಾತನಾಡಿದರು.
“ಈ ಘಟನೆ ಕುರಿತಂತೆ ಪೋಲಿಸರು ಒಬ್ಬ ಆರೋಪಿಯನ್ನು ಬಂಧಿಸಿರುವ ವರದಿಯಿದೆ. ಇನ್ನುಳಿದ ಇಬ್ಬರು ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಮೃತ ಯುವತಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು” ಎಂದು ಒತ್ತಾಯಿಸಿದರು.
“ಕೊಲೆಗಡುಕರಿಗೆ, ಅತ್ಯಚಾರಗಳಿಗೆ ಹಾಗೂ ಸಮಾಜ ಘಾತುಕರಿಗೆ ಜಾತಿ ಧರ್ಮ ಇರುವುದಿಲ್ಲ. ಇಂತಹ ದುಷ್ಟರನ್ನು ಮಟ್ಟ ಹಾಕಲು ಸರಕಾರ ಕಠಿಣ ಕಾನೂನು ಜಾರಿಗೆ ತರಬೇಕು. ಮಹಿಳೆಯರನ್ನು ಕೇವಲ ಬೋಗದ ವಸ್ತುವನ್ನಾಗಿ ಹಾಗೂ ಎರಡನೇ ದರ್ಜೆ ಪ್ರಜೆಯಾಗಿ ನೋಡುವ ಪುರುಷ ಪ್ರಧಾನ್ಯ ವ್ಯವಸ್ಥೆಯನ್ನು ತೊಡೆದು ಹಾಕಿ, ಲಿಂಗ ಸಮಾನತೆಗೆ ಮುಂದಾಗಬೇಕಿದೆ. ಇದನ್ನು ಸಾಧಿಸಲು ಸರಕಾರ ಮತ್ತು ಸಮಾಜ ಗಂಭೀರ ಪ್ರಯತ್ನ ಮಾಡಬೇಕು” ಎಂದರು.
ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಮಾತನಾಡಿ, “ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಹಾಗೂ ಭದ್ರತೆ ಒದಗಿಸಬೇಕು. ದುರುಳರಿಂದ ಕೊಲೆಯಾಗಿರುವ ಸ್ವಾತಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಹಾಗೂ ಅವರ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸಬೇಕು” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪಿಎಸ್ಐ ಮೇಲೆ ಬಿಜೆಪಿ ಮುಖಂಡನಿಂದ ಹಲ್ಲೆ
ಪ್ರತಿಭಟನೆಯಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಜಿಲ್ಲಾಧ್ಯಕ್ಷ ಉಡಚಪ್ಪ ಮಾಳಗಿ, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ್, ಧನುಷ್ ದೊಡ್ಡಮನಿ, ಗಾಯತ್ರಿ ದಂಡಿ, ದಿವ್ಯ ಹುಡೇದಕರ, ರೇಷ್ಮಾ ಎನ್, ಭೂಮಿಕಾ ನರೆಗಲ್, ಅನ್ವಿಕಾ ಆರ್.ಬಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
