“ಒಳಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗಿದೆ. ರಾಜ್ಯ ಸರಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.1ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು” ಎಂದು ಅಲೆಮಾರಿ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಹಾವೇರಿ ಪಟ್ಟಣದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಒಳಮೀಸಲು ಜಾರಿಯ ವೇಳೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ೪೯ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಜಾತಿಗಳ ಅಲೆಮಾರಿಗಳನ್ನು ಕೈಬಿಟ್ಟಿರುವುದನ್ನು ವಿರೋಧಿಸಿ, ಅಲೆಮಾರಿಗಳಿಗೆ ಶೇ.೧ ಒಳಮೀಸಲು ಕಲ್ಪಿಸುವಂತೆ ಭಿಕ್ಷೆ ಬೇಡುವ ಮೂಲಕ ಪ್ರತಿಭಟಿಸಿ ತಹಸೀಲ್ದಾರ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ಎಎಸ್‌ಸಿ-ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾದಿಂದ ನಡೆದ ಪ್ರತಿಭಟನೆಯಲ್ಲಿ ನೂರಾರು ಅಲೆಮಾರಿಗಳು ತಮ್ಮ ಸಂಪ್ರದಾಯಕ ವೇಷಭೂಷಣಗಳನ್ನು ತೊಟ್ಟು, ಶಂಕ-ಜಾಗಟೆಗಳೊಂದಿಗೆ, ಮಹಿಳೆಯರು ತಮ್ಮ ಪುಟ್ಟ ಮಕ್ಕಳೊಂದಿಗೆ ತಟ್ಟೆ, ಚಂಬು, ಅಡುಗೆಪಾತ್ರೆಗಳನ್ನು ಹಿಡಿದು ಅರ್ಧಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಭಾವ ಚಿತ್ರ ಹಿಡಿದು ತಮಗೆ ಶೇ.೧ಮೀಸಲು ಭಿಕ್ಷೆ ನೀಡುವಂತೆ ನಡೆಸಿದ ಪ್ರತಿಭಟನೆ ಮನಕಲಕುವಂತಿತ್ತು.
ಈ ವೇಳೆ ಒಕ್ಕೂಟದ ಶೆಟ್ಟಿ ವಿಭೂತಿ ಮಾತನಾಡಿ, “ಅತ್ಯಂತ ಶೋಷಣೆಗೆ ಒಳಗಾಗಿರುವ ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ೪೯ ಜಾತಿಗಳ ಅಲೆಮಾರಿಗಳ ಸ್ಥಿತಿಗತಿಯ ದತ್ತಾಂಶ ಸಂಗ್ರಹಿಸಿದ ನ್ಯಾ.ನಾಗಮೋಹನ್ ದಾಸ್ ಏಕ ಸದಸ್ಯ ಆಯೋಗವು ಈ ಜಾತಿಗಳ ಜನರಿಗೆ ಪ್ರತ್ಯೇಕ ಗುಂಪು ಸೃಷ್ಟಿಸಿ, ಶೇ.೧ರಷ್ಟು ಒಳಮೀಸಲಾತಿ ನೀಡುವಂತೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯ ಸರಕಾರವು ಈ ಶಿಫಾರಸು ಕಡೆಗಣಿಸಿ ಅಲೆಮಾರಿಗಳಿಗೆ ಅನ್ಯಾಯ ಮಾಡಿದೆ” ಎಂದು ಆರೋಪಿಸಿದರು.
“ಒಳಮೀಸಲಾತಿ ಹಂಚುವಾಗ ಅಲೆಮಾರಿ ಜಾತಿಗಳನ್ನು ಬಲಾಢ್ಯ ಸಮುದಾಯದ ಗುಂಪಿನಲ್ಲಿ ಸೇರಿಸಲಾಗಿದೆ. ಆ ಗುಂಪಿನಲ್ಲಿರುವ ಭೋವಿ, ಲಂಬಾಣಿ ಸೇರಿ ಇತರೆ ಸಮುದಾಯಗಳ ಜನರು ಅಕ್ಷರಸ್ಥರಾಗಿದ್ದಾರೆ. ಆದರೆ, ೪೯ ಜಾತಿಗಳ ಅಲೆಮಾರಿಗಳಿಗೆ ಇನ್ನು ಅಕ್ಷರ ಜ್ಞಾನವೇ ಇಲ್ಲವಾಗಿದೆ. ಈಗಲೂ ಸಹ ಅಲೆಮಾರಿಗಳು ಮನೆ-ಮಠಗಳಿಲ್ಲದೇ ಗುಡುಸಲಿನಲ್ಲಿ ವಾಸಮಾಡುತ್ತಾ ಭೀಕ್ಷೆ ಬೇಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ವಾಸ್ತವ ಸ್ಥಿತಿ ಹೀಗಿರುವಾಗ ಅಲೆಮಾರಿಗಳು ಆ ಸಮುದಾಯಗಳ ಜನರೊಂದಿಗೆ ಪೈಪೋಟಿ ನಡೆಸಿ ಮೀಸಲು ಪಡೆಯುವುದು ಕಷ್ಟ ಸಾಧ್ಯ. ಹಾಗಾಗಿ ರಾಜಕೀಯ, ಶಿಕ್ಷಣ ಮತ್ತು ಉದ್ಯೋಗ ಮರೀಚಿಕೆಯಾಗಲಿದೆ” ಎಂದು ಹೇಳಿದರು.
“ರಾಜ್ಯ ಸರಕಾರ ಈಗ ಹಂಚಿಕೆ ಮಾಡಿರುವ ಒಳ ಮೀಸಲಾತಿಯನ್ನು ಮರು ಪರಾಮರ್ಶೆಗೆ ಒಳಪಡಿಸಿ ಅಲೆಮಾರಿಗಳಿಗೆ ಪ್ರತ್ಯೇಕವಾಗಿ ಶೇ.೧ರಷ್ಟು ಒಳ ಮೀಸಲಾತಿ ಕಲ್ಪಿಸಬೇಕು. ಇಲ್ಲದೇ ಹೋದರೆ ಉಗ್ರಪ್ರತಿಭಟನೆ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಬೆಂಬಲ ನೀಡಿದ ಆದಿ ಜಾಂಬವ, ಮಾದಿಗ ಸಮಾಜದ ಮುಖಂಡರು ಡಿ.ಎಸ್.ಮಾಳಗಿ, ಉಡಚಪ್ಪ ಮಾಳಗಿ ಮಾತನಾಡಿ, “ಅಲೆಮಾರಿಗಳು ನಿಕೃಷ್ಷ ಜೀವನ ನಡೆಸುತ್ತಿದ್ದರು, ಶೇ.೧ ಒಳಮೀಸಲಾತಿಗೆ ಅರ್ಹರಿರುತ್ತಾರೆ. ರಾಜ್ಯ ಸರ್ಕಾರ ಅಲೇಮಾರಿಗಳಿಗೆ ಶೇ.೧ ಒಳಮೀಸಲು ಕಲ್ಪಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಾಲತೇಶ ಯಲ್ಲಾಪುರ, ಜಂಬಣ್ಣ ಮಿರಿಯಾಲಿ, ಭಿಕ್ಷಾಪತಿ ಮೋತಿ, ಈರಣ್ಣ ಮೋತಿ, ದುರಗವ್ವ ಬಾದಗಿ, ಶಂಕ್ರಪ್ಪ ಮಹಾಂತ, ಮಂಜಪ್ಪ ಬಾದಗಿ,ಮಾರೇಪ್ಪ ಮೋತಿ, ಲಕ್ಷ್ಮಣ ಶಿರಶಾಲ್, ಲಿಂಗರಾಜ ಮಿರಿಯಾಲಿ, ಸುರೇಶ ಚಲವಾದಿ, ದುರಗಪ್ಪ ಮೋತಿ, ಮಂಜೇಶ ಮಿರಿಯಾಲಿ, ಮಾರೇಶ ಕೊಂಡ್ರ, ಪ್ರಜ್ವಲ್ ಶೆಟ್ಟಿ ವಿಭೂತಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.