ವಧು-ವರರಿಬ್ಬರೂ ಭಾರತ ಸಂವಿಧಾನ ಪೀಠಿಕೆ ಪಠಣ ಪ್ರತಿಜ್ಞೆಯ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟ ವಿಶಿಷ್ಟ ಮದುವೆ ಹಾವೇರಿ ಜಿಲ್ಲೆಯ ಕಾಗಿನೆಲೆಯ ಕನಕಸಭಾ ಭವನದಲ್ಲಿ ಫೆ.18ರಂದು ಜರುಗಿತು.
ಕಾರ್ಮಿಕ ಮುಖಂಡ ಮೆಳ್ಳೆಗಟ್ಟಿಯ ಹೊನ್ನಪ್ಪ ಮರಿಯ್ಮನವರ ಮತ್ತು ಪಾರ್ವತಿ ಎಂಬುವವರ ಪುತ್ರ, ಪತ್ರಕರ್ತ ಪ್ರಶಾಂತ ಹಾಗೂ ಆನವಟ್ಟಿಯ ಜಮಾದಾರ ಕುಟುಂಬದ ರೇಖಾ ಹೀಗೆ ವಿಶೇಷವಾಗಿ ಮದುವೆಯಾದವರು.
ಈ ವಿವಾಹವನ್ನು ಗದಗನ ಭಾವ ಸಂಗಮ ವಿವಾಹ ವೇದಿಕೆಯ ಮುಖ್ಯಸ್ಥ, ಚಿಂತಕ ಬಸವರಾಜ ಸೂಳೆಬಾವಿ ಅವರು, ಬುದ್ದ, ಬಸವ, ಅಂಬೇಡ್ಕರ್, ಕುವೆಂಪು ಅವರ ಚಿಂತನೆಗಳನ್ನು ತಿಳಿಸುವ ಮೂಲಕ ವಿವಾಹದ ಪರಿಲ್ಪನೆಗಳನ್ನು ತಿಳಿಸಿದರು. ನವ ದಂಪತಿಗೆ ಭಾರತ ಸಂವಿಧಾನ ಪೀಠಿಕೆ ಪಠಣ ಮಾಡಿಸಿ. ದೀಪಗಳನ್ನು ಬೆಳಗಿಸುವ ಮೂಲಕ ಡಾ. ಬಿ.ಆರ್. ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಕಲ್ಯಾಣ ಮಹೋತ್ಸವಕ್ಕೆ ನಡೆಸಲಾಯಿತು.
ದಾವಣಗೆರೆಯ ಸಾಹಿತಿ ಬಿ.ಶ್ರೀನಿವಾಸ, ಅವರು ಸಂವಿಧಾನ ಪೀಠಿಕೆಯ ಪ್ರಮಾಣ ವಚನ ಬೋಧಿಸಿದರು. ಡಾ. ಅನಸೂಯ ಕಾಂಬಳೆ ದಿಕ್ಸೂಚಿ ಭಾಷಣ ಮಾಡಿದರು. ಮದುವೆಯ ಮಂಟಪದಲ್ಲಿ ಸಂವಿಧಾನ ಪೀಠಿಕೆಯ ಬ್ರಹತ್ ಭಾವಚಿತ್ರಗಳನ್ನು ಆದರ್ಶದ ಶುಭಾಶಯ ನುಡಿಗಟ್ಟುಗಳ ಕಟೌಟ್ ಮಾಡಿ ಹಾಕಲಾಗಿತ್ತು.
ನವ ದಂಪತಿಗಳು ʼಭಾರತದ ಪ್ರಜೆಗಳಾದ ನಾವಿಬ್ಬರು ಸಂಗಾತಿಗಳಾಗಲು ಮನುಸಾ ಒಪ್ಪಿ ಬಾಳನ್ನು ಮತ್ತಷ್ಟು ಸದೃಢ, ಸ್ವಾವಲಂಬಿ, ಸಾರ್ಥಕ ಮತ್ತು ಸಂಘ ಜೀವನದಲ್ಲಿ ನಡೆಸಲು, ಸುಖ-ದುಃಖ, ನೋವು-ನಲಿವು, ಬಡತನ-ಸಿರಿತನದಂಥ ಎಲ್ಲ ಕಾಲದಲ್ಲಿಯೂ ಬುದ್ಧ ಬಸವ ಅಂಬೇಡ್ಕರ್ ಅವರ ತಾತ್ವಿಕತೆ ಮತ್ತು ಜೀವನ ಶೈಲಿಯನ್ನು ಅನುಸರಣೆ ಮಾಡುತ್ತ, ಇಬ್ಬರ ಕುಟುಂಬವರ್ಗ, ಸ್ನೇಹಬಳಗ, ಸಮುದಾಯ ಮತ್ತು ಸಮಸ್ತ ದುಡಿಯುವ ವರ್ಗದ ಹಿತೈಷಿಗಳಿಗೆ ಅವರ ಕರುಣೆ, ಪ್ರೀತಿಯನ್ನು ಸಮನಾಗಿ ಹಂಚುತ್ತ, ಅವರಿಗಾಗಿ ನಾವು, ನಮಗಾಗಿ ಅವರು ಎನ್ನುವ ಹಾಗೆ ಜೀವಿಸಲು ಮುಂದಾಗಿ, ಯಾವುದೇ ಗಳಿಗೆಯಲ್ಲಿ ಅಪನಂಬಿಕೆ, ಅನುಮಾನಕ್ಕೆ ಆಸ್ಪದ ಕೊಡದೆ ಮೈತ್ರಿ ಭಾವದಿಂದ ಎಲ್ಲವನ್ನು ಸರಿದೂಗಿಸಿಕೊಳ್ಳುತ್ತ, ಪರಸ್ಪರರ ಅಭಿಪ್ರಾಯವನ್ನು ಪ್ರೀತಿಪೂರ್ವಕವಾಗಿ ಗೌರವಿಸಿ ಸಮಾನತೆ ಕುಟುಂಬವನ್ನು ಕಟ್ಟಿಕೊಳ್ಳಲು ಸಂಕಲ್ಪ ಮಾಡಿ,
2024ರ ಫೆಬ್ರವರಿ ತಿಂಗಳ 18ರಂದು ಈ ʼಈ ಬಾಳ ಸಂವಿಧಾನʼವನ್ನು ನಮಗೆ ನಾವೇ ಅರ್ಪಿಸಿಕೊಂಡು ಅಂಗೀಕರಿಸಿ ನಿಮ್ಮೆಲ್ಲರ ಸಮ್ಮುಖದಲ್ಲಿ ಕುಟುಂಬ ಶಾಸನವಾಗಿ ಜಾರಿಗೊಳಿಸಿಕೊಳ್ಳುತ್ತ, ಜೀವನದುದ್ದಕ್ಕೂ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ರಚಿತವಾದ ಭಾರತ ಸಂವಿಧಾನದ ಆಶಯದಂತೆ ಬಾಳ್ವೆ ನಡೆಸಲು ಪಣ ತೊಟ್ಟಿದ್ದೇವೆ,ʼ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಈ ವಿಶಿಷ್ಠ ವಿವಾಹ ಮಹೋತ್ಸವಕ್ಕೆ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಚಿವ, ನಟ ಬಿ.ಸಿ. ಪಾಟೀಲ, ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ.ಚಂದ್ರಶೇಖರಪ್ಪ, ಹಿರಿಯ ಪತ್ರಕರ್ತ, ಚಿಂತಕ ಮುತ್ತು ನಾಯ್ಕರ, ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ, ಹಿರಿಯ ದಲಿತ ಚಿಂತಕರಾದ ಬಿ.ಎಮ್. ಹನುಮಂತಪ್ಪ, ಕ.ವಿ.ವಿ. ಪ್ರಾಧ್ಯಾಪಕಿ ಡಾ. ಅನಸೂಯ ಕಾಂಬಳೆ, ಸಾಹಿತಿ, ಪತ್ರಕರ್ತ ಮಾಲತೇಶ ಅಂಗೂರ, ಶರೀಫ್ ಬಿಳಿಯೆಲಿ, ಮುತ್ತು ಬಿಳಿಯೆಲಿ, ವಿನಾಯಕ ಕುರುಬರ, ಸಿಂಗಾಡಿ, ಮಹಾಂತೇಶ ದೊಡ್ಡಮನಿ, ಕೊಟ್ರೇಶ್ಪ ಬಸೇಗೆಣ್ಣಿ, ಸಂಜೀವಕುಮಾರ ನೀರಲಗಿ, ಸಂತೋಷಕುಮಾರ ಪಾಟೀಲ ಮುಂತಾದವರು ಸಾಕ್ಷಿಯಾಗಿದ್ದರು. ಸಂವಿಧಾನ ಸಾಕ್ಷಿ ಮದುವೆಯನ್ನು ಗದಗನ ಭಾವ ಸಂಗಮ ವಿವಾಹ ವೇದಿಕೆ, ಮಾನವ ಬಂಧುತ್ವ ವೇದಿಕೆ, ಕಾರ್ಮಿಕ ಸಂಘಟನೆಗಳು ಈ ವಿವಾಹದಲ್ಲಿ ಭಾಗಿಯಾಗಿದ್ದವು.