“ಭಾರತದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸುತ್ತದೆ. ಹಿಂಸೆಯಿಂದ ಎಂದಿಗೂ ನಮ್ಮ ದೇಶದ ಒಗ್ಗಟ್ಟು, ಶಾಂತಿ, ಸಾಮರಸ್ಯವನ್ನು ಒಡೆದು ಹಾಕಲು ಸಾಧ್ಯವಿಲ್ಲ, ದೇಶದ ಐಕ್ಯತೆ, ಸೌಹಾರ್ದತೆಗೆ ಕಂಟಕವಾಗಿರುವ ಈ ಭಯೋತ್ಪಾದನೆ ಪಿಡುಗಿನ ವಿರುದ್ಧ ದೇಶದ ಜನತೆ ಒಟ್ಟಾಗಿ ನಿಲ್ಲುವುದು ಅಗತ್ಯವಿದೆ. ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದು ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷ ಡಾ. ನಿತೀಶ್ ನಾರಾಯಣ್ ಹೇಳಿದರು.
ಹಾವೇರಿ ಪಟ್ಟಣದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲಿನ ಭಯೋತ್ಪಾದಕರ ಕ್ರೂರ ದಾಳಿಯನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ನೇತೃತ್ವದಲ್ಲಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.
“ದೇಶ ದೇಶಗಳ ಮೇಲಿನ ದ್ವೇಷ ಸಾಧಿಸುವುದನ್ನು ಎಸ್ಎಫ್ಐ ಒಪ್ಪುವುದಿಲ್ಲ. ಇಂದು ಯುಎಸ್‌ಎ ಅಮೆರಿಕದಂತಹ ದೇಶಗಳು ಪಾಕಿಸ್ತಾನಕ್ಕೆ ಯುದ್ದ ಸಾಮಾಗ್ರಿಗಳನ್ನು ಸರಬರಾಜು ಮಾಡುತ್ತಿದೆ. ಭಯೋತ್ಪಾದಕ ಕೃತ್ಯಗಳಿಗೆ ಪ್ರಚೋದನೆ ನೀಡುತ್ತಿದೆ. ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸರಿಪಡಿಸಿ ಮಟ್ಟಹಾಕಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಎಫ್ಐ ರಾಜ್ಯಾಧ್ಯಕ್ಷ ಶಿವಪ್ಪ ಕೋಲಾರ ಮಾತನಾಡಿ, “ದೇಶದ ಭದ್ರತಾ ವೈಫಲ್ಯ ಸಂಭವಿಸಲು ಕಾರಣವೇನು? ಗಡಿಯನ್ನು ಭದ್ರಗೊಳಿಸದೇ ಈ ಚಟುವಟಿಕೆಗಳನ್ನು ನಡೆಯಲು ಅವಕಾಶ ಮಾಡಿಕೊಟ್ಟದ್ದು ಹೇಗೆ? ಎನ್ನುವ ಪ್ರಶ್ನೆಗಳನ್ನು ಜನರು ಕೇಳುತಿದ್ದಾರೆ ಇದಕ್ಕೆ ಸರ್ಕಾರ ಮತ್ತು ಗಡಿ ಭದ್ರತಾ ವ್ಯವಸ್ಥೆ ವೈಪಲ್ಯಕ್ಕೆ ಉತ್ತರಿಸಬೇಕು. ದೇಶ ದೇಶಗಳ, ಧರ್ಮ ಧರ್ಮದ ನಡುವೆ ಬಿರುಕನ್ನು ತರುತ್ತಿದ್ದಾರೆ. ಇದನ್ನು ಯಾರು ಒಪ್ಪಬಾರದು. ಕಾಶ್ಮೀರದಲ್ಲಿ ಹತರಾದ ಕುಟುಂಬದೊಂದಿಗೆ ನಾವಿದ್ದೇವೆ ಅವರಿಗೆ ನೈತಿಕ ಬೆಂಬಲವನ್ನು ನೀಡುತ್ತೇವೆ. ಅವರ ಕುಟುಂಬಕ್ಕೆ ಸರ್ಕಾರ ಎಲ್ಲ ರೀತಿಯ ಪರಿಹಾರ ಘೋಷಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಕಾಶ್ಮೀರದ ಪಹಲ್ಯಾಮ್ ಸಮೀಪದಲ್ಲಿರುವ ಪ್ರಖ್ಯಾತ ಪ್ರವಾಸಿ ತಾಣವಾದ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 28 ಜನರನ್ನು ಬಲಿ ಪಡೆದ ಭಯೋತ್ಪಾದಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
“ನಮ್ಮ ರಾಜ್ಯದ ಮಂಜುನಾಥ್ ಹಾಗೂ ಭರತ್ ಭೂಷಣ್ ಸೇರಿದಂತೆ 28 ಜನ ಪ್ರವಾಸಿಗರನ್ನು ಬಲಿ ಪಡೆದಿರುವ ಭಯೋತ್ಪಾದಕರ ಪೈಶಾಚಿಕ ಕ್ರೌರ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಇದರ ವಿರುದ್ಧ ಜನತೆ ಐಕ್ಯತೆಯಿಂದ ಪ್ರತಿರೋಧಿಸಬೇಕು” ಎಂದರು.
“ರಾಷ್ಟ್ರಕ್ಕೆ ಭದ್ರತೆ ಪ್ರಮುಖವಾಗಿದೆ. ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರದಲ್ಲಿ ಸಹಜ ಸ್ಥಿತಿಯಿದೆ ಎಂದು ಹೇಳುತ್ತಿರುವಾಗಲೇ ವಾಸ್ತವ ಪರಿಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳು, ವಲಸೆ ಕಾರ್ಮಿಕರು ಹಾಗೂ ಪ್ರವಾಸಿಗರ ಮೇಲೆ ದಾಳಿಗಳು ನಡೆಯುತ್ತಲೇ ಇವೆ. ಅಮೂಲ್ಯ ಜೀವಗಳನ್ನು ಕೊಲೆಗೈದ ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಜಮ್ಮು ಕಾಶ್ಮೀರದಲ್ಲಿ ಸಹಜಸ್ಥಿತಿ ನೆಲೆಸಲು ಸೂಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಬಸವರಾಜ ಪೂಜಾರ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು : ರಸ್ತೆ ಅಪಘಾತ; ಇಬ್ಬರಿಗೆ ಗಾಯ
ಈ ಸಂದರ್ಭದಲ್ಲಿ ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ ಎಸ್ , ಜಿಲ್ಲಾಧ್ಯಕ್ಷ ಬಸವರಾಜ ಎಸ್, ರಾಜ್ಯ ಉಪಾಧ್ಯಕ್ಷ ಗಣೇಶ ರಾಠೋಡ್, ಡಾ. ದೊಡ್ಡಬಸವರಾಜ ಗುಳೆದಾಳು, ಗ್ಯಾನೇಶ್ ಕಡಗದ, ಪದಾಧಿಕಾರಿ ಸುಜಾತ ಕಲಬುರಗಿ, ಚಂದ್ರು ರಾಠೋಡ್, ಅನಂತರಾಜ್ ಬಿ ಎಮ್, ರಜಿಯಾ ಯಸ್ಮೀನ್ ಇಂಜಿನಿಯರಿಂಗ್ ಕಾಲೇಜ್ ಘಟಕ ಅಧ್ಯಕ್ಷ ರೇವಣ್ಣಸಿದ್ದು ವಿ, ಮುಖಂಡರಾದ ಬಾಲಾಜಿ ಗಂಗಾವತಿ, ಇಮಾಮ್ ಸಾಬ್ ಯಾದಗಿರಿ, ಶಶಿಕುಮಾರ್, ಪವನ್ ವಿಜಯನಗರ, ಕೃಷ್ಣ ನಾಯಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
