ಭಾರತದ ಸ್ವಾತಂತ್ರ್ಯಕ್ಕಾಗಿ ಸಮ್ರಾಜ್ಯಶಾಹಿ ಬ್ರಿಟಿಷರ ವಿರುದ್ದ ವಿರೋಚಿತವಾಗಿ ಹೋರಾಡಿ ಹುತಾತ್ಮರಾದ ಅಮರವೀರ ತ್ರಿವಳಿ ಸಂಗಾತಿಗಳಾದ ಮೈಲಾರ ಮಹದೇವಪ್ಪ, ತಿರಕಪ್ಪ ಮಡಿವಾಳರ ಹಾಗೂ ವೀರಯ್ಯ ಹಿರೇಮಠ ಅವರ ತ್ಯಾಗ ಬಲಿದಾನದ ಆದರ್ಶಗಳನ್ನು ವಿದ್ಯಾರ್ಥಿಗಳು, ಯುವಜನರು ಮೈಗೂಡಿಸಿಕೊಳ್ಳಬೇಕು ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಕರೆ ನೀಡಿದರು.
ಹಾವೇರಿ ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಸೋಮವಾರ ಡಿವೈಎಫ್ಐ, ಎಸ್ಎಫ್ಐ ವತಿಯಿಂದ ನಡೆದ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮೈಲಾರ ಮಹಾದೇವಪ್ಪನವರು ಗ್ರಾಮೀಣ ಮಟ್ಟದಲ್ಲಿ ಯುವಜನರನಲ್ಲಿ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಅಣಿನೆರೆಸಿದರು. ಇವರ ಜತೆಗೆ ಮಡದಿ ಸಿದ್ದಮ್ಮನವರು ಮಹಿಳೆಯರನ್ನು ಪ್ರೇರೆಪಿಸಿ ಚಳವಳಿಗೆ ತರುವಲ್ಲಿ ಯಶಸ್ವಿಯಾದರು” ಎಂದರು.
“ಮಹಾತ್ಮಾ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಪ್ರಾರಂಭಿಸಿ ದಂಡಿ ಯಾತ್ರೆ ಕೈಗೊಂಡಾಗ ಅದರಲ್ಲಿ ಭಾಗವಹಿಸಿದ ಮೈಲಾರ ಮಹಾದೇವಪ್ಪನವರು ಅತಿ ಕಿರಿಯ ಚಳವಳಿಗಾರರಾಗಿದ್ದರು. ಜತೆಗೆ ಕರ್ನಾಟಕದಿಂದ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ಏಕೈಕ ವ್ಯಕ್ತಿ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ” ಎಂದು ತಿಳಿಸಿದರು.
“1942ರಲ್ಲಿ ಚಲೇಜಾವ್ ಚಳವಳಿ ಪ್ರಾರಂಭವಾಗಿ ಮಹಾತ್ಮ ಗಾಂಧೀಜಿ ಯವರು ಸೆರೆಯಾದ ಬಳಿಕ ಚಳವಳಿಯು ತೀವ್ರ ಸ್ವರೂಪ ತಾಳಿ ದೇಶವ್ಯಾಪಿ ಸ್ವಾತಂತ್ರ್ಯ ಹೋರಾಟ ವ್ಯಾಪಿಸಿತು. ಮಹದೇವಪ್ಪ ಮತ್ತವರ ಸಂಗಾತಿಗಳು ಅಖಂಡ ಧಾರವಾಡ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಾತಂತ್ರ್ಯ ಚಳವಳಿಯನ್ನು ಪ್ರಬಲವಾಗಿ ಕಟ್ಟಿದರು. ಮಹದೇವಪ್ಪ ನೇತೃತ್ವದಲ್ಲಿ 1943ರಲ್ಲಿ ಹೊಸರಿತ್ತಿಯ ಕಂದಾಯ ಕಚೇರಿಯ ಮೇಲೆ ದಾಳಿ ಮಾಡಿದಾಗ ಬ್ರಿಟಿಷ್ ಪೊಲೀಸರ ಗುಂಡಿಗೆ ಬಲಿಯಾದರು. ಇವರೊಂದಿಗೆ ಹಿರೇಮಠ ವೀರಯ್ಯ, ಮಡಿವಾಳ ತಿರಕಪ್ಪನವರೂ ಕೂಡಾ ಹುತಾತ್ಮರಾದರು” ಎಂದರು.
“ಅಪಾರ ತ್ಯಾಗ ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವ ಹೊಣೆ ದೇಶದ ಯುವಜನರ ಮೇಲಿದೆ. ದೇಶದಲ್ಲಿ ಹೆಚ್ಚುತ್ತಿರುವ ಅಸಮಾನತೆಯನ್ನು ಹೋಗಲಾಡಿಸಿ ಸರ್ವರಿಗೂ ಸಮಾನ ಅವಕಾಶಗಳಿಗಾಗಿ, ಘನತೆಯ ಬದುಕಿಗಾಗಿ ಯುವಜನರು ಪಣತೊಡಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ರಾಜಪ್ಪ ದಳವಾಯಿಯವರು ಸಾಂಸ್ಕೃತಿಕ ಶ್ರಮಜೀವಿ: ಬರಗೂರು ರಾಮಚಂದ್ರಪ್ಪ
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಹಿರಿಯ ಹೋರಾಟಗಾರ ರುದ್ರಪ್ಪ ಜಾಬೀನ ಅವರು ಸ್ವಾತಂತ್ರ್ಯ ಸೇನಾನಿ ಮಹದೇವಪ್ಪ ಮೈಲಾರ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿದರು. ಮೈಲಾರ ಮಹದೇವ ಅಮರ ರಹೇ! ತಿರಕಪ್ಪ ಮಡಿವಾಳರ ಅಮರ ರಹೇ! ವೀರಯ್ಯ ಹಿರೇಮಠ ಅಮರ ರಹೇ! ಘೋಷಣೆಗಳು ಮೊಳಗಿದವು. ನಂತರ ವೀರಸೌಧಕ್ಕೆ ತೆರಳಿ ತ್ರಿವಳಿ ಸಂಗಾತಿಗಳ ವೀರ ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡಿವೈಎಫ್ಐ ಜಿಲ್ಲಾ ಮುಖಂಡರುಗಳಾದ ರೇಣುಕಾ ಪಿ ಕೆ, ಖಲಂದರ್ ಅಲ್ಲಿಗೌಡ್ರ, ಶಿಕ್ಷಕರುಗಳಾದ ನಿರಂಜನ ಹಿರೇಮಠ, ಸಿ ಎಚ್ ಹೊಟ್ಟೆಗೌಡ್ರ ಹಾಗೂ ವಿದ್ಯಾರ್ಥಿಗಳು ಇದ್ದರು.
