ರಾಜ್ಯ ಸರ್ಕಾರ ಹಾವೇರಿ ಜಿಲ್ಲೆ ಬರಗಾಲ ಜಿಲ್ಲೆಯನ್ನಾಗಿ ಘೋಷಿಸಿದರೂ ರೈತರ ಬ್ಯಾಂಕ್ ಖಾತೆಗೆ ಬಿಡಿಗಾಸು ಜಮೆ ಮಾಡದ್ದನ್ನು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ದಂಡಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬರಗಾಲ ಘೋಷಣೆಯಾಗಿರುವ ಸವಣೂರು ತಾಲೂಕಿನ ರೈತರಿಗೆ ಬೆಳೆ ನಷ್ಟ ಪರಿಹಾರ ಪೂರ್ಣ ಪ್ರಮಾಣದಲ್ಲಿ ಸಿಗುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಕುರಿತು ಗಂಭೀರವಾಗಿ ಚಿಂತಿಸಬೇಕೆಂದು ಆಗ್ರಹಿಸಿ ತಹಸಿಲ್ದಾರ್ ಭರತ್ ಕೆ ಎನ್, ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
“2023-24ನೇ ಸಾಲಿನ ಬೆಳೆಹಾನಿ ಸಮೀಕ್ಷೆ ಪ್ರಕಾರ ಸವಣೂರು-ಶಿಗ್ಗಾಂವಿ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡಿರುವ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ. ಬೆಳೆನಷ್ಟ ಪರಿಹಾರ ಅಲ್ಪಪ್ರಮಾಣದಲ್ಲಿ ಹಾಕಲಾಗುತ್ತದೆಂದು ಸರ್ಕಾರ ಹೇಳಿದೆ. ಆದರೆ, ರೈತರು ಮತ ಹಾಕಿ ಬಹುಮತದಿಂದ ಕಾಂಗ್ರೆಸ್ ಸರ್ಕಾರವನ್ನು ಆರಿಸಿ ತಂದಿದ್ದಾರೆ. ಅದರ ಅರಿವಿಲ್ಲದೆ ರೈತರ ಜೀವನ ಹಾನಿ ಮಾಡುತ್ತಿರುವ ಸರ್ಕಾರ ಬರಗಾಲದ ಬೆಳೆನಷ್ಟ ಪರಿಹಾರವಾಗಿ ₹2,000 ಯಾವ ಹಿತಾಸಕ್ತಿಗಾಗಿ ಹಾಕುತ್ತಿದ್ದೀರಿ? ಎಂದು ಪ್ರಶ್ನಿಸಿದ್ದು, ಪ್ರಸ್ತುತ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರಿನ ಬೆಳೆ ಹಾನಿಯಾಗಿದ್ದು, ಸರ್ಕಾರವು ಪ್ರತಿ ಹಂಗಾಮಿಗೆ ಎಕರೆಗೆ ₹25,000 ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಶೈಕ್ಷಣಿಕ ಪ್ರಗತಿಯೊಂದೇ ಸಮುದಾಯದ ಉನ್ನತಿಗೆ ಕಾರಣ: ಶಿವಲೀಲಾ ವಿನಯ ಕುಲಕರ್ಣಿ
“ಬರಗಾಲದಲ್ಲಿ ಬೆಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿರುವ ಬೆಲೆ ಏರಿಕೆಯನ್ನು ಹಿಂಪಡೆಯಬೇಕು. ಸಿದ್ಧರಾಮಯ್ಯನವರ ಸರ್ಕಾರಕ್ಕೆ, ರೈತ ಸಂಘ ಹಾಗೂ ರೈತರಿಂದ ಸರ್ಕಾರ ನಡೆಸಲು ದೇಣಿಗೆ ರೂಪದಲ್ಲಿ ಹಣ ಸಂದಾಯ ಮಾಡುತ್ತೇವೆ” ಎಂದರು.
ಎಂ ಎನ್ ನಾಯಕ್, ಚೆನ್ನಪ್ಪ ಮರಡೂರ್, ಸಂಗಮೇಶ್ ಪಿತಾಮ್ಪುರ್ ಶೆಟ್ಟಿ, ನೂರ್ ಅಹಮದ್ ಮುಲ್ಲಾ, ಜಗದೀಶ್ ಬಳ್ಳಾರಿ, ರಾಜು ತರ್ಲಘಟ್ಟ ಇದ್ದರು.