“ಹೆಣ್ಣು ಕುಟುಂಬದ ಕಣ್ಣು, ಮಹಿಳೆಯರು ಆರ್ಥಿಕವಾಗಿ ಮಾತ್ರವಲ್ಲದೇ ಸಾಮಾಜಿಕ ಮತ್ತು ರಾಜಕೀಯವಾಗಿಯೂ ಸಬಲರಾಗಬೇಕಿದೆ. ಅಂದಾಗ ಮಾತ್ರ ಇಡೀ ಸಮುದಾಯದ ಶ್ರೇಯೋಭಿವೃದ್ಧಿ ಸಾಧ್ಯವಿದೆ” ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಕಂಚಿನೆಗಳೂರು ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಆಶ್ರಯದಲ್ಲಿ ನಡೆದ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ ಮತ್ತು ಸಮುದಾಯ ಬಂಡವಾಳ ನಿಧಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ಮಹಿಳೆಯರ ಆರ್ಥಿಕ ಪ್ರಗತಿಗಾಗಿ ಹಲವಾರು ವೃತ್ತಿಪರ ತರಬೇತಿ ನೀಡಿ, ಕೌಶಲ್ಯ ಅಭಿವೃದ್ಧಿ ಪಡಿಸಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಶ್ರಮ ವಹಿಸಿದ ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಸರಕಾರ ಗೃಹಲಕ್ಷ್ಮೀ, ಶಕ್ತಿ ಯೋಜನೆಗಳನ್ನು ಜಾರಿಗೊಳಿಸಿದೆ. ಕುಟುಂಬದ ಯಜಮಾನಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನೂ ಹಲವು ಕಾರ್ಯಕ್ರಮ ನೀಡುತ್ತಿದ್ದು, ಹೆಣ್ಣುಮಕ್ಕಳು ಪ್ರಗತಿಯಾದರೆ ಒಂದು ಕುಟುಂಬ, ಗ್ರಾಮ, ರಾಜ್ಯವೇ ಪ್ರಗತಿಯಾದಂತೆ ಹಾಗಾಗಿ ಸರಕಾರ ಹೆಣ್ಣುಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ” ಎಂದರು.
ತಾಪಂ ಇಒ ಪರಶುರಾಮ ಪೂಜಾರ ಮಾತನಾಡಿ, “ಸಾಮಾಜಿಕ ಆಂದೋಲನ ಅಭಿಯಾನದ ಮೂಲಕ ಸ್ವಸಹಾಯ ಸಂಘಗಳಿಂದ ಹೊರಗುಳಿದವರನ್ನು ಸೇರ್ಪಡೆಗೊಳಿಸಲು ಗಮನ ನೀಡಬೇಕಿದೆ. ಮಹಿಳಾ ಒಕ್ಕೂಟ ಸ್ವಸಹಾಯ ಸಂಘಗಳ ಮೂಲಕ ಸಾಕಷ್ಟು ಸಂಖ್ಯೆಯ ಮಹಿಳೆಯರು ಆದಾಯ ಉತ್ಪನ್ನ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಗ್ರಾಮ ಮಟ್ಟದಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ, ಗೃಹಲಕ್ಷ್ಮೀ, ನರೇಗಾ ಫಲಾನುಭವಿಗಳನ್ನು ಸೇರ್ಪಡೆ ಮಾಡಬೇಕಿದೆ”ಎಂದು ಹೇಳಿದರು.
“ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ಬಹಳ ಪರಿಣಾಮಕಾರಿಯಾಗಿ ಪ್ರತಿಯೊಂದು ಕುಟುಂಬಗಳನ್ನು ಆರ್ಥಿಕವಾಗಿ ಸಬಲಗೊಳಿಸುತ್ತಿವೆ ಒಂದು ಕುಟುಂಬಕ್ಕೆ ವಾರ್ಷಿಕ ಕನಿಷ್ಟ 55-60 ಸಾವಿರ ರೂ. ನೆರವು ಸಿಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ನೆರವಿಗೆ ನಿಂತ ಎಕೈಕ ಸರಕಾರ ನಮ್ಮದಾಗಿದೆ” ಎಂದು ಹೇಳಿದರು.
ಗ್ರಾ.ಪಂ ಅಧ್ಯಕ್ಷೆ ರಾಧಾ ಇಂಗಳಗೆ, ಉಪಾಧ್ಯಕ್ಷೆ ಲಲಿತಾ ಪತ್ತಾರ, ಸನಾವುಲ್ಲಾ ಮುಲ್ಲಾ, ನಾರಾಯಣ ಕವಾರಿ, ಮಾರುತಿ ಇಂಗಳಕಿ, ವಿರುಪಾಕ್ಷಪ್ಪ ತಳವಾರ, ಖಾದರಸಾಬ ಮೂಲಿಮನಿ ಹಜ್ಜೆಖಾನ್ ಹೊಂಡದ ಹಸನಖಾನ್ ಹೊಂಡದ, ದೇವೇಂದ್ರಪ್ಪ ಭೈರಕ್ಕನವರ, ಮಹೇಶ ಗಿರಿಯಣ್ಣನವರ ಗುಡ್ಡಪ್ಪ ಜೋಲಿ, ಹುಲಪ್ಪ, ವಾರ್ಕಿ, ಶಶಿಕುಮಾರ ಭೈರಕ್ಕನವರ ಸೇರಿದಂತೆ ಗ್ರಾಪಂ ಸದಸ್ಯರು, ಮಹಿಳಾ ಒಕ್ಕೂಟಗಳ ಪದಾಧಿಕಾರಿಗಳು ಇದ್ದರು.
