ಸ್ವಾತಂತ್ರ್ಯ ಹೋರಾಟದ ಕ್ರಾಂತಿಯ ಕಿಡಿಯಾಗಿದ್ದ ಶಹೀದ್ ಭಗತ್ ಸಿಂಗ್ ಅವರ ವಿಚಾರಗಳನ್ನು ವಿದ್ಯಾರ್ಥಿ-ಯುವಜನರು ಅರಿತುಕೊಂಡು, ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಎಸ್ಎಫ್ಐ ಹಾವೇರಿ ಜಿಲ್ಲಾಧ್ಯಕ್ಷ ಬಸವರಾಜ ಎಸ್ ಹೇಳಿದರು.
ಹಾವೇರಿ ನಗರದ ಎಸ್ಎಫ್ಐ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಆಯೋಜಿಸಿದ ಶಹೀದ್ ಭಗತ್ ಸಿಂಗ್ ಅವರ 118ನೇ ಜನ್ಮ ದಿನಚಾರಣೆಯನ್ನು ಭಗತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಗೌರವ ಸಲ್ಲಿಸಿ ಮಾತನಾಡಿದರು.
ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಭಗತ್‌ಸಿಂಗ್ ಕಂಡ ಕನಸಿನ ಭಾರತ ಇನ್ನೂ ನಿರ್ಮಾಣವಾಗಿಲ್ಲ. ಶೋಷಿತರ ಪರವಾದ ಭಗತ್‌ಸಿಂಗ್ ನಿಲುವು ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲೆ ಮೂಡಿತ್ತೆಂದರೆ ಅವರ ವಯಸ್ಸಿಗೆ ಅವರ ಅಧ್ಯಯನವನ್ನು ಇಂದಿನ ಯುವಪೀಳಿಗೆ ಅನುಸರಿಸಬೇಕಿದೆ ಎಂದರು.
1919 ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಗತ್‌ಸಿಂಗ್‌ರನ್ನು ಕ್ರಾಂತಿಯತ್ತ ತಿರುಗಿಸಿತು. ಭಗತ್‌ಸಿಂಗ್ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವಾಗಿತ್ತು. ಸ್ವಾತಂತ್ರ್ಯ ಹೋರಾಟದ ಕಿಚ್ಚು ಮನೆಯಿಂದಲೆ ಶುರುವಾಗಿದ್ದರೂ ಕೂಡಾ ಅವರ ಸೈದ್ದಾಂತಿಕ ತಿಳುವಳಿಕೆ ಮಟ್ಟ ಚಳುವಳಿಯ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚಿತು. ಭಗತ್‌ಸಿಂಗ್ ಗಲ್ಲು ಶಿಕ್ಷೆಗೆ ಒಳಗಾಗಿ ಬಂಧನದಲ್ಲಿದ್ದರೂ ಕೂಡ ತಮ್ಮ ಓದುವ ಹವ್ಯಾಸವನ್ನು ಬಿಟ್ಟಿರಲಿಲ್ಲ. ಅವರು ಓದುವ ಪರಿ ಹೇಗಿತ್ತೆಂದರೆ ಗಲ್ಲುಶಿಕ್ಷೆಯ ಸಮಯ ಹತ್ತಿರವಾಗಿದೆ, ಜೈಲಿನಿಂದ ಹೊರಗೆ ಬಾ ಅಂತ ಜೈಲರ್ ಷರಣ್‌ಸಿಂಗ್ ಕರೆದಾಗ, ‘ಒಬ್ಬ ಕ್ರಾಂತಿಕಾರಿ ಮತ್ತೊಬ್ಬ ಕ್ರಾಂತಿಕಾರಿಯೊಡನೆ ಸಂಭಾಷಣೆ ನಡೆಸುತ್ತಿದ್ದಾನೆ. ಸ್ವಲ್ಪ ಕಾಯಿರಿ’ ಎಂದು ಹೇಳಿದ್ದರು ಎಂದು ಬಸವರಾಜ ವಿವರಿಸಿದರು.
ಭಗತ್‌ಸಿಂಗ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಅಷ್ಟೇ ಅಲ್ಲದೆ, ಭವಿಷ್ಯದಲ್ಲಿ ಭಾರತ ಹೇಗಿರಬೇಕೆಂದು ಕನಸು ಕಂಡವರು, ಜಾತಿ ತಾರತಮ್ಯ ನೀತಿಗಳು ಹೋಗಬೇಕು, ಧರ್ಮದ ಒಡೆದಾಳುವವರು, ಸಾಮ್ರಾಜ್ಯಶಾಹಿಗಳನ್ನು ದೇಶವನ್ನು ಬಿಟ್ಟು ಓಡಿಸಬೇಕು ಎಂದು ಹೇಳುತ್ತಿದ್ದ ಅವರು, ಅಸ್ಪೃಶ್ಯತೆಯ ಬಗ್ಗೆ ಭಗತ್‌ಸಿಂಗ್ ತನ್ನ 16ನೇ ವಯಸ್ಸಿನಲ್ಲಿಯೇ ಲೇಖನವನ್ನು ಬರೆದಿದ್ದರು. ಭಗತ್‌ಸಿಂಗ್ ಬಯಸಿದ್ದ ಭಾರತ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶಿರೂರು ದುರಂತ | ಶೋಧ ಕಾರ್ಯಾಚರಣೆಯ ವೇಳೆ ಎರಡು ಮಾನವ ಮೂಳೆ ಪತ್ತೆ
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಶೃತಿ ಆರ್ ಎಮ್, ಮುತ್ತರಾಜ್ ದೊಡ್ಡಮನಿ, ದೇವರಾಜ ಅಕ್ಕಸಾಲಿ, ಜಿಲ್ಲಾ ಸಹ ಕಾರ್ಯದರ್ಶಿ ಅಣ್ಣಪ್ಪ ಕೊರವರ್, ಪೂರ್ಣಿಮಾ ಡವಗಿ, ಲಲಿತಾ ಹಾವೇರಿ, ತಾಲೂಕು ಅಧ್ಯಕ್ಷ ಸುಲೇಮಾನ್ ಮತ್ತಿಹಳ್ಳಿ, ಮುಖಂಡರಾದ ರಕ್ಷಿತ ಡವಗಿ, ಫತೀಮಾ ಶೇಖ್, ಕೀರ್ತನಾ ಹಿರಿಯಕ್ಕನವರ, ತಾಲೂಕು ಅಧ್ಯಕ್ಷ, ಕೃಷ್ಣ ನಾಯಕ, ದಾನೇಶ್ವರಿ ಗಡ್ಡದ, ನಿಕೀತಾ, ಧನುಷ್ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
