ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಲ್ಲಿರುವ ಸಂದರ್ಭದಲ್ಲಿ, ರಾಜಕೀಯ ಮುಖಂಡರ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟು ನೀತಿ ಸಂಹಿತೆ ಉಲ್ಲಂಘಿಸಿರುವ ಆರೋಪದಡಿ, ಹಾವೇರಿ ವಿಶ್ವವಿದ್ಯಾಲಯಕ್ಕೆ ನೋಟಿಸ್ ನೀಡಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆ. 22ರಿಂದಲೇ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ರಾಜಕೀಯ ಪಕ್ಷಗಳ ಮುಖಂಡರ ಭಾವಚಿತ್ರವಿರುವ ಬಂಟಿಂಗ್ಸ್, ಬ್ಯಾನರ್, ಪೋಸ್ಟರ್ ತೆರವುಗೊಳಿಸಿ, ಗೋಡೆ ಬರಹ ಮುಚ್ಚುವಂತೆಯೂ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಕಚೇರಿಗಳಲ್ಲಿ ಹಾಗೂ ಇತರೆ ಕಡೆಗಳಲ್ಲಿ ರಾಜಕೀಯ ಮುಖಂಡರ ಕಾರ್ಯಕ್ರಮಕ್ಕೆ ಜಿಲ್ಲಾಧಿ-ಕಾರಿಯಿಂದ ಅನುಮತಿ ಪಡೆಯುವುದು ಕಡ್ಡಾಯವೆಂದು ಸೂಚಿಸಿದ್ದಾರೆ.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೆರಿಮತ್ತೀಹಳ್ಳಿಯಲ್ಲಿರುವ ಹಾವೇರಿ వివి ಕ್ಯಾಂಪಸ್ನಲ್ಲಿ ರಾಜಕೀಯ ಮುಖಂಡರ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಟ್ಟಿರುವ ಆರೋಪ ವ್ಯಕ್ತವಾಗಿದೆ. ಫೋಟೊ ಹಾಗೂ ಇತರೆ ಪುರಾವೆಗಳನ್ನು ಆಧರಿಸಿ ವಿವಿಯ ಕುಲಸಚಿವರಿಗೆ ಚುನಾವಣಾಧಿಕಾರಿ ತಂಡದವರು ಇತ್ತೀಚೆಗೆ ನೋಟಿಸ್ ನೀಡಿದ್ದಾರೆ. ಅದೇ ನೋಟಿಸ್ಗೆ, ಕುಲಸಚಿವರು ಉತ್ತರ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿ-ರ್ವಾಹಕ ಅಧಿಕಾರಿಯೂ ಆಗಿರುವ ಎಂಸಿಸಿ (ಮಾದರಿ ನೀತಿ ಸಂಹಿತೆ) ನೋಡಲ್ ಅಧಿಕಾರಿ ಡಾ. ಪರಮೇಶ ಹುಬ್ಬಳ್ಳಿ, ‘ನೀತಿ ಸಂಹಿತೆ ಉಲ್ಲಂಘನೆ ಮಾಹಿತಿ ಬರುತ್ತಿದ್ದಂತೆ, ಪರಿಶೀಲನೆ ನಡೆಸಲಾಗಿದೆ. ಕುಲಸಚಿವರಿಗೆ ಇ ಮೇಲ್ ಹಾಗೂ ನೋಂದಣಿ ಅಂಚೆ ಮೂಲಕ ನೋಟಿಸ್ ನೀಡಲಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ ಉತ್ತರ ನೀಡಿದ್ದಾರೆ. ಅದನ್ನು ಪರಿಶೀಲಿಸಲಾಗುತ್ತಿದೆ’ ಎಂದರು.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರ ಕಾರ್ಯಕ್ರಮ: ‘ರಾಜ್ಯಸಭಾ ಸದಸ್ಯರೂ ಆಗಿರುವ ಬಿಜೆಪಿ ರಾಷ್ಟ್ರೀಯರು ಉಪಾಧ್ಯಕ್ಷ ಹಾಗೂ ಕೇರಳ ರಾಜ್ಯದ ಬಿಜೆಪಿ ಪ್ರಭಾರಿ ಎಂ. ನಾಗರಾಜ ಅವರು ಅ. 7ರಂದು ಮಧ್ಯಾಹ್ನ ಹಾವೇರಿ ವಿವಿಗೆ ಭೇಟಿ ನೀಡಿದ್ದರು. ‘ವಿಕಸಿತ ಭಾರತ 2047′ ವಿಷಯದ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಇದೇ ಕಾರ್ಯಕ್ರಮದ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು’ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಸಹ ಅ. 8ರಂದು ಸಂಜೆ ವಿವಿಗೆ ಭೇಟಿ ನೀಡಿ, ಮತಯಾಚಿಸಿದ್ದರು. ಇದರ ಫೋಟೊವನ್ನು ವಿವಿಯ ಕೆಲವರು ಕ್ಲಿಕ್ಕಿಸಿಕೊಂಡಿದ್ದರು. ಈ ಇಬ್ಬರು ರಾಜಕಾರಣಿಗಳ ಭೇಟಿ ಬಗ್ಗೆ ಕೆಲವರು, ಚುನಾವಣಾಧಿಕಾರಿಗೂ ಮಾಹಿತಿ ನೀಡಿದ್ದರು. ಅದೇ ಮಾಹಿತಿ ಆಧರಿಸಿ, ಚುನಾವಣಾಧಿಕಾರಿಯವರ ತಂಡ ವಿವಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತ್ತು. ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲವೆಂಬುದನ್ನು ಗೊತ್ತಾಗಿದೆ.





