ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಮುಖ ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರ ಬಿಡುಗಡೆ ಪ್ರಕ್ರಿಯೆಯನ್ನು ದೆಹಲಿ ಪೊಲೀಸರು, ಆಡಳಿತ ಯಂತ್ರವು ಉದ್ದೇಶಪೂರ್ವಕವಾಗಿ ವಿಳಂಬಗೊಳಿಸುತ್ತಿದೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದೆ.
ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ನಾಯಕರ ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಾಲ್ಕು ಶ್ಯೂರಿಟಿ ಬಾಂಡ್ಗಳನ್ನು ಅಧಿಕಾರಿಗಳು ತಿರಸ್ಕರಿಸಿದ್ದು, ಪ್ರಕ್ರಿಯೆಯನ್ನು ಮತ್ತಷ್ಟು ಜಟಿಲಗೊಳಿಸಲಾಗಿದೆ ಎಂದು ಸಿಜೆಪಿ ದೂರಿದೆ.
ಇದನ್ನೂ ಓದಿ: ಜಂತರ್ ಮಂತರ್ ಪ್ರವೇಶಿಸಲು ಯತ್ನ: ಸಿಜೆಪಿ ಮುಖಂಡರಾದ ಸೌರವ್ ದಾಸ್, ಅಶುತೋಷ್ ರಾಂಕಾ ವಶಕ್ಕೆ
ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ನಡೆಸಲಾದ ಪ್ರತಿಭಟನೆ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಭಾಗವಾಗಿ ಸೌರವ್ ದಾಸ್ ಹಾಗೂ ಅಶುತೋಷ್ ರಾಂಕಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆ ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿದ್ದ ಪ್ರಕರಣದಲ್ಲಿ ಕಾನೂನಾತ್ಮಕವಾಗಿ ಜಾಮೀನು ಪಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಆದರೆ, ದೆಹಲಿಯ ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ (SEM) ನ್ಯಾಯಾಲಯದಲ್ಲಿ ಭಾನುವಾರ ನಡೆಯಬೇಕಿದ್ದ ಜಾಮೀನು ಮತ್ತು ಬಿಡುಗಡೆ ಪ್ರಕ್ರಿಯೆಯ ವಿಚಾರಣೆಯು ವಿಳಂಬಗೊಂಡಿತು.
ನಾಯಕರ ಬಿಡುಗಡೆಗಾಗಿ ಸಿಜೆಪಿ ಪರ ವಕೀಲರು ಸಲ್ಲಿಸಿದ್ದ ನಾಲ್ಕು ಶ್ಯೂರಿಟಿ ಬಾಂಡ್ಗಳನ್ನು ತಾಂತ್ರಿಕ ಕಾರಣಗಳನ್ನು ನೀಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಿರಸ್ಕರಿಸಿದೆ. ಸಿಜೆಪಿ ಸಂಘಟನೆಯ ಪ್ರತಿನಿಧಿ ರತ್ನಾ ಸಿಂಗ್ ಮಾತನಾಡಿ, “ನಮ್ಮ ನಾಯಕರನ್ನು ಜಾಮೀನಿನ ಮೇಲೆ ಹೊರತರಲು ಸೂಕ್ತ ದಾಖಲೆಗಳೊಂದಿಗೆ ಶ್ಯೂರಿಟಿಗಳನ್ನು ನೀಡಿದ್ದರೂ, ಅವುಗಳನ್ನು ಅಂಗೀಕರಿಸದೆ ಪ್ರಕ್ರಿಯೆಯನ್ನು ಹಳಿ ತಪ್ಪಿಸಲಾಗುತ್ತಿದೆ. ಇದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನಡೆಯುತ್ತಿರುವ ದಾಳಿ,” ಎಂದು ಆರೋಪಿಸಿದ್ದಾರೆ.
ಪೊಲೀಸ್ ಇಲಾಖೆ ಮತ್ತು ಮ್ಯಾಜಿಸ್ಟ್ರೇಟ್ ಕಚೇರಿಯು ಪ್ರಕ್ರಿಯಾತ್ಮಕ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದು, ವಕೀಲರಿಗೆ ಸೂಕ್ತ ಸಮಯಕ್ಕೆ ಮಾಹಿತಿ ನೀಡುತ್ತಿಲ್ಲ ಎಂದು ಸಿಜೆಪಿ ಕಿಡಿಕಾರಿದೆ. ನಿಯಮಾವಳಿಗಳ ಪ್ರಕಾರ ನಿಗದಿತ ಸಮಯದೊಳಗೆ ಜಾಮೀನು ಪ್ರಕ್ರಿಯೆ ಮುಗಿದು ನಾಯಕರು ಜೈಲಿನಿಂದ ಹೊರಬರಬೇಕಿತ್ತು. ಆದರೆ ಸಾಲು ಸಾಲು ಅಡೆತಡೆಗಳನ್ನು ಒಡ್ಡುವ ಮೂಲಕ ಬಿಡುಗಡೆಯನ್ನು ತಡೆಯಲಾಗುತ್ತಿದೆ ಎಂದು ಸಿಜೆಪಿ ದೂರಿದೆ.
ಶ್ಯೂರಿಟಿ ಬಾಂಡ್ಗಳ ತಿರಸ್ಕರಣೆಯ ನಂತರ, ಸಿಜೆಪಿಯ ಕಾನೂನು ತಂಡವು ಹೆಚ್ಚುವರಿ ದಾಖಲೆಗಳೊಂದಿಗೆ SEM ನ್ಯಾಯಾಲಯವನ್ನು ಮತ್ತೆ ಸಂಪರ್ಕಿಸಲು ಸಿದ್ಧತೆ ನಡೆಸಿದೆ. ಅಗತ್ಯ ಬಿದ್ದರೆ ಹೈಕೋರ್ಟ್ ಅಥವಾ ಉನ್ನತ ನ್ಯಾಯಾಲಯದ ಮೊರೆ ಹೋಗುವುದಾಗಿಯೂ ಸಂಘಟನೆ ತಿಳಿಸಿದೆ. ಮತ್ತೊಂದೆಡೆ, ಕಾನೂನು ನಿಯಮಾವಳಿಗಳು ಮತ್ತು ತನಿಖಾ ಪ್ರಕ್ರಿಯೆಗೆ ಅನುಗುಣವಾಗಿಯೇ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಪೊಲೀಸ್ ಮೂಲಗಳು ಸಮರ್ಥಿಸಿಕೊಂಡಿವೆ.





