ಏಕಪಕ್ಷೀಯ ನಿರ್ಧಾರ ಕೈಗೊಂಡ ಮುಖ್ಯ ಚುನಾವಣೆ ಆಯುಕ್ತರ (ಸಿಇಸಿ) ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಚಳವಳಿಗಾರರ ಮೇಲೆ ದೆಹಲಿ ಪೊಲೀಸರು ಮತ್ತು ಗೂಂಡಾಗಳು ಹಲ್ಲೆ ನಡೆಸಿದ, ಕಿರುಕುಳ ನೀಡಿದ ಆರೋಪದ ಮೇಲೆ ಕೊನೆಗೂ ದೆಹಲಿ ಪೊಲೀಸರು ಕನಿಷ್ಠ 10 ಎಫ್ಐಆರ್ಗಳನ್ನು ದಾಖಲಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚುನಾವಣಾ ವ್ಯವಸ್ಥೆ ಮತ್ತು ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಪಕ್ಷಗಳು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳು ಜಂತರ್ ಮಂತರ್, ರಾಜೀವ್ ಚೌಕ್ ಪರಿಸರದಲ್ಲಿ ಸತತವಾಗಿ ಧರಣಿ ನಡೆಸುತ್ತಿವೆ. ಈ ವೇಳೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಹಲ್ಲೆ ಘಟನೆಗಳು ಸಂಭವಿಸಿದ್ದು, ತೀವ್ರ ಒತ್ತಡದ ಬಳಿಕ ಪ್ರಸ್ತುತ ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಾರೆ.
ಇದನ್ನೂ ಓದಿ: ಈ ದಿನ ಸಂಪಾದಕೀಯ | ಗ್ಯಾನೇಶ್ ರಕ್ಷಣೆಗಾಗಿ ಯುವತಿಯರನ್ನು ಪೀಡಿಸುವ ಕೀಚಕರಾಗುತ್ತಿದ್ದಾರೆಯೇ ದೆಹಲಿ ಪೊಲೀಸರು?
ಕಳೆದ ಕೆಲವು ದಿನಗಳಿಂದ ದೆಹಲಿಯ ಪ್ರಮುಖ ಸ್ಥಳಗಳಲ್ಲಿ ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ. ಈ ನಡುವೆ ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾರ್ವಜನಿಕರ ಮೇಲೆ ಕೆಲವು ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದೆ. ಆದರೆ ದೆಹಲಿ ಪೊಲೀಸರು ಮಾತ್ರ ನಿಂತು ನೋಡಿದ್ದಾರೆ. ದುಷ್ಕರ್ಮಿಗಳನ್ನು ತಡೆದಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕುಗಳಲ್ಲಿ, ಪ್ರತಿಭಟನಾ ನಿರತ ಯುವತಿಯರು ಮತ್ತು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸುತ್ತಿರುವುದು, ತಳ್ಳಾಟ-ನೂಕಾಟ ನಡೆದಿರುವುದು ಕಂಡುಬಂದಿದೆ. ಘಟನೆಯಲ್ಲಿ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಮಾಧ್ಯಮ ಪ್ರತಿನಿಧಿಗಳ ಮೇಲೆಯೂ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರತಿಭಟನಾಕಾರರ ದೂರುಗಳು ಮತ್ತು ವೈರಲ್ ಆದ ಸಿಸಿಟಿವಿ, ವಿಡಿಯೋ ಪುರಾವೆಗಳನ್ನು ಪರಿಶೀಲಿಸಿದ ದೆಹಲಿ ಪೊಲೀಸರು, ದೆಹಲಿಯ ವಿವಿಧ ಠಾಣೆಗಳಲ್ಲಿ ಕೊನೆಗೂ ಒಟ್ಟು 10 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಘಟನೆಯಲ್ಲಿ ನೇರವಾಗಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಗುರುತಿಸಿ ಈಗಾಗಲೇ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಬೀದರ್ | ಮತಗಳ್ಳತನ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ, ಸಿಇಸಿ ಜ್ಞಾನೇಶಕುಮಾರ ರಾಜೀನಾಮೆಗೆ ಆಗ್ರಹ
ಹಲ್ಲೆ, ಸಾರ್ವಜನಿಕ ಶಾಂತಿಗೆ ಭಂಗ ಮತ್ತು ಮಹಿಳೆಯರ ಮೇಲಿನ ಅತಿಯಾದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ವಿವಿಧ ಕಠಿಣ ಐಪಿಎಸ್/ಬಿಎನ್ಎಸ್ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಗಿದೆ. ದೆಹಲಿಯ ಜಂತರ್ ಮಂತರ್, ಇಂಡಿಯಾ ಗೇಟ್ ಮತ್ತು ಸಂಸತ್ ಭವನದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ತುಕಡಿಗಳು, ಸಿಆರ್ಪಿಎಫ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಘಟನೆಯು ದೇಶದ ರಾಜಕೀಯ ವಲಯದಲ್ಲೂ ದೊಡ್ಡ ಸಂಚಲನ ಮೂಡಿಸಿದೆ. ಪ್ರತಿಭಟನಾಕಾರರ ಮೇಲೆ ನಡೆದಿರುವ ಹಲ್ಲೆಯನ್ನು ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ‘ಇಂಡಿಯಾ’ ಒಕ್ಕೂಟದ ಪ್ರಮುಖ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವದ ಮಾರ್ಗದಲ್ಲಿ ಧ್ವನಿ ಎತ್ತುತ್ತಿರುವ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಆಡಳಿತಾರೂಢ ನಾಯಕರು ಸ್ಪಷ್ಟಪಡಿಸಿದ್ದು, ಪೊಲೀಸರು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.





