ನಗರದ ಹೃದಯಭಾಗದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿನ ಮಹಾತ್ಮ ಗಾಂಧೀಜಿಯವರ ಪುತ್ಥಳಿಯನ್ನು ಕಿಡಿಗೇಡಿಗಳು ಒಡೆದು ಬಿಸಾಕಿರುವ ಘಟನೆ ಹಾವೇರಿ ಪಟ್ಟಣದಲ್ಲಿ ಸೋಮವಾರ ಬೆಳಕಿಗೆ ಬಂದಿದ್ದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಅಹಿಂಸಾ ಮಾರ್ಗದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ನಗರದ ಪ್ರಮುಖ ರಸ್ತೆಗೆ “ಮಹಾತ್ಮ ಗಾಂಧಿ ರಸ್ತೆ” ಎಂದು ನಾಮಕರಣ ಮಾಡಲಾಗಿದ್ದು, ಅದರ ಹೃದಯಭಾಗದಲ್ಲಿರುವ ವೃತ್ತದಲ್ಲಿ ಗಾಂಧೀಜಿಯವರ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಈ ಐತಿಹಾಸಿಕ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವುದು ನಾಗರಿಕರಲ್ಲಿ ಬೇಸರ ಮೂಡಿಸಿದೆ.
ಕಿಡಿಗೇಡಿಗಳು ಪುತ್ಥಳಿಯನ್ನು ಕಿತ್ತು ಬಿಸಾಕಿ ವಿಕೃತಿ ಮೆರೆದಿರುವುದು ಕೇವಲ ಪ್ರತಿಮೆಯ ಅವಮಾನವಲ್ಲ, ದೇಶದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳಿಗೆ ಮಾಡಿದ ಅವಮಾನ. ಅವರನ್ನು ಬಂದಿಸಿ ಕಠಿನ ಶಿಕ್ಷೆಗೊಳಪಡಿಸಬೇಕು” ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದ ಬಳಿಕ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಬಿಸಾಕಲಾಗಿದ್ದ ಗಾಂಧೀಜಿಯವರ ಪ್ರತಿಮೆಯನ್ನು ನಗರಸಭೆಗೆ ಸಾಗಿಸಿದ್ದಾಗಿ ತಿಳಿದು ಬಂದಿದೆ.





