ಹೈದರಾಬಾದ್‌ನಿಂದ ಹುಬ್ಬಳ್ಳಿಗೆ ಹಾರುತ್ತಿದ್ದ ಫ್ಲೈ91 ವಿಮಾನ ಬರೋಬ್ಬರಿ ಮೂರುವರೆ ಗಂಟೆಗಳ ಕಾಲ ಆಕಾಶದಲ್ಲೇ ಸುತ್ತಿದ ಘಟನೆ ವರದಿಯಾಗಿದೆ. ಆರಂಭದಲ್ಲಿ ತಾಂತ್ರಿಕ ದೋಷದಿಂದಾಗಿ ಹೀಗಾಗಿದೆ ಎಂದು ವರದಿಗಳಾಗಿದ್ದರೂ, ಬಳಿಕ ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನ ಮೂರುವರೆ ಗಂಟೆ ಆಕಾಶದಲ್ಲೇ ಸುತ್ತಬೇಕಾಯಿತು. ಬಳಿಕ ಲ್ಯಾಂಡ್ ಆಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಅಹಮದಾಬಾದ್ ವಿಮಾನ ದುರಂತ ಬೆನ್ನಲ್ಲೇ ಹೆಚ್ಚುತ್ತಿವೆ ‘ಏರ್ ಇಂಡಿಯಾ’ ವಿರುದ್ದದ ದೂರುಗಳು
Fly91 ವಿಮಾನ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‌ನಿಂದ ಹೊರಟಿದ್ದು, ಸಂಜೆ 4.30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಮಾಡಬೇಕಾಗಿತ್ತು. ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಹವಾಮಾನ ಸಮಸ್ಯೆಯಿಂದ ಲ್ಯಾಂಡ್ ಆಗಲು ಸಾಧ್ಯವಾಗದೆ ಆಕಾಶದಲ್ಲೇ ಸುತ್ತಿದೆ. ಇದರಿಂದಾಗಿ ಹಲವು ಪ್ರಯಾಣಿಕರು ಗಾಬರಿಗೊಂಡಿದ್ದರು ಎಂದು ವರದಿಯಾಗಿದೆ.
ಈ ಬಗ್ಗೆ ಪಿಟಿಐಗೆ ಮಾಹಿತಿ ನೀಡಿರುವ ಅಧಿಕಾರಿಗಳು, “ಒಂದು ಗಂಟೆ ಹುಬ್ಬಳ್ಳಿಯಲ್ಲೇ ಸುತ್ತಾಡಿ ಹವಾಮಾನ ಪರಿಸ್ಥಿತಿ ಸುಧಾರಿಸಿದ ಕಾರಣ ವಿಮಾನ ಬೆಂಗಳೂರಿಗೆ ಹಾರಿ ಲ್ಯಾಂಡ್ ಆಗಿದೆ. ಇದು ಸಾಮಾನ್ಯವಾಗಿ ನಡೆಯುವಂತಹ ಘಟನೆ. ಕೆಲವೊಮ್ಮೆ ಹವಾಮಾನ ಸುಧಾರಿಸುವವರೆಗೆ ವಿಮಾನ ಲ್ಯಾಂಡ್ ಮಾಡಲು ಸಾಧ್ಯವಾಗಲ್ಲ. ಆಗ ಹವಾಮಾನ ಸುಧಾರಣೆಯಾಗುವವರೆಗೂ ಕಾಯಬೇಕಾಗುತ್ತದೆ. ಇದು ಪೈಲಟ್‌ನ ನಿರ್ಧಾರ” ಎಂದು ಹೇಳಿದರು.
ವಿಮಾನವು ಸಂಜೆ 6:30ರ ಸುಮಾರಿಗೆ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದ್ದು, ಹವಾಮಾನ ಪರಿಸ್ಥಿತಿ ಸುಧಾರಿಸಿದ ನಂತರ ರಾತ್ರಿ 11 ಗಂಟೆಗೆ ಹುಬ್ಬಳ್ಳಿಗೆ ಹಾರಿದೆ. ವಿಮಾನದಲ್ಲಿ 22 ಪ್ರಯಾಣಿಕರಿದ್ದರು ಎಂದು ವರದಿಯಾಗಿದೆ.
ವಿಮಾನದಲ್ಲಿದ್ದ ಕೆಲವು ಪ್ರಯಾಣಿಕರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. @mgvimal_12 ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಪ್ರಯಾಣಿಕರು ಭಯದಿಂದ ಚೀರಾಡುತ್ತಿರುವುದು ಕಾಣಬಹುದು.





