ಭಾರತೀಯ ಸಂಸ್ಕೃತಿಯಲ್ಲಿ ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹೆಣ್ಣಿನ ರಕ್ಷಣೆಯ ಪ್ರತೀಕವಾದ ನೂಲ ಹುಣ್ಣಿಮೆಯ ದಿನದಂದು ಆಚರಿಸುವ ಏಕೈಕ ಹಬ್ಬವೇ ರಕ್ಷಾ ಬಂಧನ. ಅಕ್ಕ, ತಂಗಿ ಮತ್ತು ತಾಯಿಯ ರಕ್ಷಣೆಯ ಜೊತೆಗೆ ತಮ್ಮ ಸುತ್ತಮುತ್ತಲಿನ ಪ್ರತಿಯೊಬ್ಬ ಹೆಣ್ಣಿನ ರಕ್ಷಣೆಯ ಹಬ್ಬವಾಗಿದೆ ಎಂದು ರೋಶನಿ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಜಾನೇಟ್ ಹೇಳಿದರು.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೊಂಡೋಜಿ ಗ್ರಾಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳು, ಹೊಲಿಗೆ ತರಬೇತಿ ಕೇಂದ್ರದ ಯುವತಿಯರು ಮತ್ತು ಮಕ್ಕಳ ಪಂಚಾಯಿತಿ ಸಹಯೋಗದೊಂದಿಗೆ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ವಿಶೇಷವಾಗಿ ಹಮ್ಮಿಕೊಂಡಿದ್ದ ವೃಕ್ಷಾ ಬಂಧನ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಹಿಳೆಯರ ರಕ್ಷಣೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ನಮ್ಮ ಸುತ್ತಮುತ್ತಲಿನ ಪರಿಸರ, ಗಿಡ ಮರಗಳ ರಕ್ಷಣೆಯೂ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮರ ಗಿಡಗಳಿಗೆ ರಾಕಿ ಕಟ್ಟುವ ಮೂಲಕ ಪರಿಸರ ಸಂರಕ್ಷಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ” ಎಂದು ಹೇಳಿದರು.
“ಪ್ರಸ್ತುತ ದಿನಗಳಲ್ಲಿ ಹವಮಾನ ವೈಪರೀತ್ಯಗಳು ಸಂಭವಿಸಲು ಪ್ರಮುಖ ಕಾರಣ ಪರಿಸರದಲ್ಲಿನ ವಾತಾವರಣ ಕಲುಷಿತವಾಗಿರುವುದು. ಹಾಗಾಗಿ ವಾತಾವರಣದಲ್ಲಿ ಏರುಪೇರಾಗಿ ಅಕಾಲಿಕ ಮಳೆ, ಸಾಂಕ್ರಾಮಿಕ ರೋಗಗಳು ಸಂಭವಿಸುವುದು ಸರ್ವೇ ಸಾಮಾನ್ಯವಾಗಿದೆ. ಇವುಗಳಿಂದ ನಾವು ಸುರಕ್ಷಿತವಾಗಿ ಇರಬೇಕಾದರೆ ಪರಿಸರದಲ್ಲಿ ಗಿಡ ಮರಗಳನ್ನು ಬೆಳೆಸುವುದರ ಜೊತೆಗೆ ಅವುಗಳ ರಕ್ಷಣೆಯೂ ನಮ್ಮ ಜವಾಬ್ದಾರಿಯಾಗಿದೆ. ಈ ವೃಕ್ಷಾ ಬಂಧನ ಪ್ರತಿ ಮನೆ ಮನಗಳಲ್ಲಿ ಆಚರಿಸುವ ಹಬ್ಬವಾಗಬೇಕಾಗಿದೆ” ಎಂದು ಕೊಂಡೋಜಿ ಗ್ರಾಮದ ಪಂಚಾಯತ ಸದಸ್ಯ ಸತೀಶ ಅಂಕೋಲೆ ತಿಳಿಸಿದರು.
ಆದರ್ಶ ಮಹಿಳಾ ಒಕ್ಕೂಟದ ಸದಸ್ಯೆ ಇಂದ್ರಪ್ಪ ಚಿಕ್ಕಣ್ಣನವರ ಮಾತನಾಡಿ, “ಮಾನವನಿಗೆ ವಾಸಿಸಲು ಇರುವ ಏಕೈಕ ಆಶಯ ತಾಣ ಎಂದರೆ ಭೂಮಿ. ಇದನ್ನು ನಾವು ಹೆಣ್ಣಿನ ಪ್ರತಿರೂಪ ತಾಯಿ ಎಂದು ಕರೆಯುತ್ತೇವೆ ಮತ್ತು ಪೂಜಿಸುತ್ತೇವೆ. ಇದರ ರಕ್ಷಣೆ ಇಲ್ಲಿ ವಾಸಿಸುವ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಕರ್ತವ್ಯವಾಗಿದೆ ಎಂಬುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಾಗಿದೆ. ಮರಗಳ ರಕ್ಷಣೆ ಮಾಡಿದರೆ ಪರಿಸರ ಶುದ್ಧ ಗಾಳಿ, ಬೆಳಕು ನೀಡಿ ನಮ್ಮನ್ನು ರಕ್ಷಿಸುತ್ತದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಮೂಢನಂಬಿಕೆ ನಿರ್ಮೂಲನೆಗೆ ಕಾನೂನು ಅರಿವು ಕಾರ್ಯಕ್ರಮ
ಮರಗಳಿಗೆ ಮಕ್ಕಳು, ಯುವತಿಯರು ಮತ್ತು ಮಹಿಳೆಯರಿಂದ ರಾಖಿ ಕಟ್ಟುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯೆ ಕಳಸಮ್ಮ ಗೌರಾಪುರ, ಎಸ್.ಡಿ.ಎಮ್.ಸಿ ಸದಸ್ಯೆ ಸರಳಾ ಆಡೂರ, ರೇಖಾ ಹೊಂಕಣದವರ, ವಿದ್ಯಾ ಚಿಕ್ಕಣ್ಣನವರ, ಗ್ರಾಮದ ಹಿರಿಯ ಮುಖಂಡ ನಿಂಗಪ್ಪ ಬೊಳಮ್ಮನವರ, ಮಹಿಳಾ ಸಬಲೀಕರಣದ ಸಂಯೋಜಕ ಡಿಗ್ಗಪ್ಪ ಲಮಾಣಿ, ಮಕ್ಕಳ ಪಂಚಾಯತಿ ಮಕ್ಕಳು, ಸಂಘಗಳ ಮಹಿಳೆಯರು ಮತ್ತು ಹೊಲಿಗೆ ತರಬೇತಿ ಕೇಂದ್ರದ ಮಹಿಳೆಯರು ಇದ್ದರು.