ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಸಿಡಿಪಿಒ ಕಚೇರಿಯ ಎಫ್‌ಡಿಎ ನೌಕರ ರಾಜು ಸುವ್ರ ಅವರ ಮನೆ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ನಸುಕಿನಲ್ಲಿ ದಾಳಿ ಮಾಡಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಈ ದಾಳಿ ಮಾಡಿರುವ ಲೋಕಾಯುಕ್ತ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ. “ಕೆಲ ಮಾಹಿತಿಗಳು ಬಂದಿದ್ದವು. ಅವುಗಳ ಪರಿಶೀಲನೆ ನಡೆಸಿದಾಗ ದಾಖಲೆಗಳು ಲಭ್ಯವಾಗಿದ್ದವು. ಅದನ್ನು ಆಧರಿಸಿ ರಾಜು ಸುವ್ರ ಮನೆ ಮೇಲೆ ದಾಳಿ ಮಾಡಲಾಗಿದೆ. ತಪಾಸಣೆ ನಡೆಯುತ್ತಿದೆ” ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಬೀದರ್ | ಬೆಳ್ಳಂಬೆಳಗ್ಗೆ ದಾಳಿ ಲೋಕಾಯುಕ್ತ ದಾಳಿ
ಬೀದರ್ ಜಿಲ್ಲಾ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ರವೀಂದ್ರಕುಮಾರ್ ರೊಟ್ಟಿ ಅವರ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಡಿವೈಎಸ್‌ಪಿ ಹನುಮಂತ ನೇತೃತ್ವದಲ್ಲಿ ದಾಳಿ ನಡೆದಿದೆ.
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಲೋಕಾಯುಕ್ತ ಪೊಲೀಸರ ದಾಳಿ ನಡೆದಿದ್ದು, ಬೀದರ್, ಬೆಂಗಳೂರು ನಿವಾಸ ಹಾಗೂ ಬೀದರ್‌ನ ನೌಬಾದ್‌ನಲ್ಲಿರುವ ಕಚೇರಿ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ನುಗ್ಗಿದ್ದಾರೆ.
ಬೀದರ್‌ನ ಕಮಲಾಪುರ ರಸ್ತೆಯ ಕಾಲೋನಿಯ ನಿವಾಸದಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲಿಸುತ್ತಿದ್ದಾರೆ. ಬೀದರ್ ಡಿಸಿ ಕಚೇರಿಯಲ್ಲಿ ಶಿರಸ್ತೇದಾರ ಹಾಗೂ ಬಿಬಿಎಂಪಿಯಲ್ಲಿ ಅಧಿಕಾರಿಯಾಗಿ ರವೀಂದ್ರಕುಮಾರ್ ಕಾರ್ಯನಿರ್ವಹಿಸಿದ್ದಾರೆ.

ಮಂಡ್ಯ | ಗ್ರಾಮ ಪಂಚಾಯಿತಿ ಸದಸ್ಯ ಲೋಕಾಯುಕ್ತ ಬಲೆಗೆ
ಶೌಚಾಲಯದ ಬಿಲ್ ಪಾಸ್ ಮಾಡಿಕೊಡಲು ₹50 ಸಾವಿರ ಲಂಚ ಪಡೆಯುತ್ತಿದ್ದ ಮಂಡ್ಯ ತಾಲ್ಲೂಕಿನ ತಗ್ಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಕೆ.ಆರ್. ಅನಿಲ್‌ಕುಮಾರ್ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಮಂಡ್ಯ ತಾಲ್ಲೂಕಿನ ಕೋಲಕಾರನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯವನ್ನು ₹5.50 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ಗುತ್ತಿಗೆದಾರ ಚನ್ನಬಸವೇಗೌಡ ಅವರು ಬಿಲ್ ಪಾಸ್ ಮಾಡಿಕೊಡಲು ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು.
ಬಿಲ್ ಪಾಸ್ ಮಾಡಿಕೊಡಲು ₹50 ಸಾವಿರ ಲಂಚ ಕೇಳುತ್ತಿದ್ದಾರೆ ಎಂದು ಚನ್ನಬಸವೇಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಮಂಡ್ಯ ನಗರದ ಖಾಸಗಿ ಹೋಟೆಲ್‌ನಲ್ಲಿ ಲಂಚ ಪಡೆಯುವಾಗ ಕಮ್ಮನಾಯಕನಹಳ್ಳಿ ಗ್ರಾಮದ ಅನಿಲ್‌ಕುಮಾರ್ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನಿಖಿಲ್ ಕುಮಾರಸ್ವಾಮಿ ಗೆಲುವಿಗೆ ಶ್ರಮಿಸುತ್ತಿರುವ ದೇವೇಗೌಡರು, ಪ್ರಜ್ವಲ್ ಕೃತ್ಯ ಖಂಡಿಸುವುದಿಲ್ಲವೇಕೆ?

ಗಂಗಾವತಿ | ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಲೋಕಾಯುಕ್ತ ಬಲೆಗೆ
ಕೊಪ್ಪಳ ಗಂಗಾವತಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಬಳಿಯ ತೋಟಗಾರಿಕೆ ಇಲಾಖೆಯಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿರುವ ಮಹೇಶ ಎಚ್. ಸೋಮವಾರ ತಮ್ಮ ಕಚೇರಿಯಲ್ಲಿ ₹1 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿಜಯಕುಮಾರ ನೇತೃತ್ವದಲ್ಲಿ ತಂಡ ದಾಳಿ ನಡೆಸಿದ್ದು ಹಣ ವಶಕ್ಕೆ ಪಡೆದುಕೊಂಡಿದೆ. ಕಾರಟಗಿ ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಪಂಚಾಕ್ಷರಿ ವೀರನಗೌಡ ಎನ್ನುವವರು ತೋಟಗಾರಿಕೆ ಇಲಾಖೆ ಯೋಜನೆಯಡಿ ಹನಿ ನೀರಾವರಿ ಸೌಲಭ್ಯ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ ಹಣ ಬಿಡುಗಡೆಗೆ ಕೋರಿದ್ದರು. ಅಧಿಕಾರಿ ₹1 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರಿಂದ ರೋಸಿ ಹೋದ ಪಂಚಾಕ್ಷರಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಲಂಚ ಪಡೆಯುವಾಗ ಅಧಿಕಾರಿಗಳು ದಾಳಿ ಮಾಡಿದ್ದಾರೆ.