ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಭೀಕರ ದುಃಸ್ಥಿತಿಯ ಕುರಿತು ರಾಜ್ಯ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಈ ಬಗ್ಗೆ ಗಂಭೀರ ವಿಚಾರಣೆ ಕೈಗೊಂಡು ಕೂಡಲೇ ತಜ್ಞರ ಸಮಿತಿ ರಚಿಸಿ ಸರ್ಕಾರಿ ಶಾಲೆಗಳನ್ನು ಬಲಪಡಿಸಲು ಕ್ರಮ ವಹಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಚಾಟಿ ಬೀಸಿದೆ. ಅದರಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಎಐಡಿಎಸ್‌ಒ ರಾಜ್ಯ ಸಮಿತಿ ಯಾದಗಿರಿ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ ಕೆ ಒತ್ತಾಯಿಸಿದರು.
ಯಾದಗಿರಿಯಲ್ಲಿ ಇಂದು ಪತ್ರಿಕಾ ಹೇಳಿಕೆ ನೀಡಿದ ಅವರು, “ಶಾಲೆಯಿಂದ ಹೊರಗೆ ಉಳಿದಿರುವ ಮಕ್ಕಳ ಕುರಿತು ರಾಜ್ಯ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ವಿಚಾರಣೆ ನಡೆಸುವ ಸಂದರ್ಭದಲ್ಲಿ ಕಳೆದ ಹತ್ತು ವರ್ಷಗಳಿಂದ ರಾಜ್ಯವನ್ನು ಆಳಿರುವ ಎಲ್ಲ ಸರ್ಕಾರಗಳ ಮೇಲೆ, ಸರ್ಕಾರಿ ಶಾಲೆಗಳ ಶೋಚನೀಯ ಪರಿಸ್ಥಿತಿಯ ಕುರಿತು ಗಂಭೀರ ಟೀಕೆ ಮಾಡಿದೆ” ಎಂದರು.
“ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಆಭಾವ, ಶಿಥಿಲಗೊಂಡಿರುವ ಕಟ್ಟಡಗಳು ಇನ್ನಿತರ ಮೂಲಸೌಕರ್ಯಗಳ ಕೊರತೆಯಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳ ಬದಲು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಹಲವು ಬಜೆಟ್ ಮಂಡನೆಯಾದರೂ, ಹಲವು ಯೋಜನೆಗಳಿಗೆ ಹಣ ಬಿಡುಗಡೆಗೊಂಡರೂ ಸರ್ಕಾರಿ ಶಾಲೆಗಳ ಪರಿಸ್ಥಿತಿ ಹದಗೆಡಸಿ, ಸರ್ಕಾರವೇ ಖಾಸಗಿ ಶಾಲೆಗಳ ದಾಖಲಾತಿ ಹೆಚ್ಚಿಸುತ್ತಿಲ್ಲವೇ ಎಂದೂ ಸಹ ಘನ ನ್ಯಾಯಾಲಯ ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿದೆ” ಎಂದರು.
“ದೇಶದಲ್ಲಿ ಹುಟ್ಟುವ ಪ್ರತಿಯೊಂದು ಮಗುವಿಗೂ ಉತ್ತಮ ಗುಣಮಟ್ಟದ ಶಿಕ್ಷಣ ಲಭಿಸಬೇಕೆಂಬ ಕಾರಣದಿಂದ ಆರಂಭವಾಗಿರುವ ಸರ್ಕಾರಿ ಶಾಲೆಗಳ ಸಂಖ್ಯೆ, ವಿದ್ಯಾರ್ಥಿಗಳ ಕೊರತೆಯಿಂದಾಗಿ ಕುಸಿದರೆ ಅದೊಂದು ಘೋರ ಅನ್ಯಾಯವೆಂದು ಎಐಡಿಎಸ್‌ಒ ಭಾವಿಸುತ್ತದೆ” ಎಂದರು.
“ಹೈಕೋರ್ಟ್ ಎತ್ತಿರುವ ಪ್ರಶ್ನೆಗಳು ಹಾಗೂ ವ್ಯಕ್ತಪಡಿಸಿರುವ ಕಳಕಳಿ ಒಂದು ನೆಲೆ ಕಾಣಬೇಕಾದರೆ ಈ ಕೂಡಲೇ ಪ್ರಸಕ್ತ ರಾಜ್ಯ ಸರ್ಕಾರ ತಜ್ಞರ ಸಮಿತಿಯನ್ನು ರೂಪಿಸಿ ಸರ್ಕಾರಿ ಶಾಲೆಗಳು ಹಾಗೂ ಒಟ್ಟಾರೆ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಲು ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾಗುತ್ತದೆ. ಇದರ ಜೊತೆಗೆ, ಸರ್ಕಾರಿ ಶಾಲಾ ಶಿಕ್ಷಕರು, ಪೋಷಕರು ಹಾಗೂ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಸರ್ಕಾರ ಮುಂದಾಗಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಮೈಸೂರು ದಸರಾ ಗಜಪಡೆಗೆ ಕುಶಾಲತೋಪು ತಾಲೀಮು; ಅಂಜದ ಅಭಿಮನ್ಯು ಪಡೆ
“ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನವೋದಯ ಚಿಂತಕರ ಕನಸಾಗಿದ್ದ ಈ ದೇಶದ ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಉಳಿಸಲು ರಾಜ್ಯದ ಎಲ್ಲ ಜನ ಒಂದಾಗಬೇಕು” ಎಂದು ರಾಜ್ಯದ ಜನರಲ್ಲಿ ಎಐಡಿಎಸ್‌ಒ ಪರವಾಗಿ ಮನವಿ ಮಾಡಿದರು.