ಭೂಮಿ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿರುವ ಜಿಲ್ಲೆಯ ಕೃಷಿ , ರೈತ ಕಾರ್ಮಿಕರ ಮೇಲೆ ನಿರಂತರವಾಗಿ ನಡೆಯುತ್ತಿರುವ ಅರಣ್ಯ ಅಧಿಕಾರಿಗಳ ದೌರ್ಜನ್ಯ ತಡೆದು ಕೃಷಿ ಕಾರ್ಮಿಕರ ಸೇರಬೇಕಾದ ಸರ್ಕಾರಿ ಭೂಮಿಯ ಹಕ್ಕು ಪತ್ರ ವಿತರಿಸಬೇಕೆಂದು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ (ಎಐಎಡ್ಲೂಯು ಸಂಯೋಜಿತ) ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಈ ಕುರಿತು ಬೀದರ್ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಉಸ್ತುವಾರಿ ಸಚಿವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಕಾರ್ಯಲಯ ಅಧಿಕಾರಿಗೆ ಸಲ್ಲಿಸಿದರು.
“1978ರ ಪೂರ್ವದಿಂದ ಭೂಮಿ ಉಳುಮೆ ಮಾಡುವ ರೈತರಿಗೆ ಪಹಾಣಿ ಪತ್ರ ನೀಡಬೇಕು. 1991 ಹಾಗೂ 1999 ರ ತರುವಾಯ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಗೆ ಪಟ್ಟಾ ಮಾಡಿಸಿಕೊಡಬೇಕು. ಆದರೆ ಸರ್ಕಾರದ ಆದೇಶವಿಲ್ಲದೇ ರೈತರ ಬಳಿಯ ಎಲ್ಲಾ ದಾಖಲೆಗಳನ್ನು ವಿಚಾರಣೆಗೆ ಮಾಡುವ ನೆಪದಿಂದ ಅರಣ್ಯ ಅಧಿಕಾರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದ ರೈತರು ತಮ್ಮ ಭೂಮಿಯ ಹಕ್ಕು ಪತ್ರಕ್ಕಾಗಿ ದಿನನಿತ್ಯ ವಿವಿಧ ಕಚೇರಿಗಳಿಗೆ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಪ್ರತಿಭಟನಾಕಾರರು ದೂರಿದರು.
“ಜಿಲ್ಲೆಗೆ ಸರಕಾರದಿಂದ ಬರ ಪರಿಹಾರ ಕೂಡಲೇ ಒದಗಿಸಬೇಕು. ರೈತರು ಕೃಷಿ, ಕೂಲಿಕಾರರು ಖಾಸಗಿ ಸಾಲ ಹಾಗೂ ಬಾಂಕ್ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಬೇಕು. ರೈತರ ಜಮೀನುಗಳಿಗೆ ನುಗ್ಗಿ ಬೆಳೆ ನಾಶಮಾಡುತ್ತಿರುವ ಕಾಡಹಂದಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಮನೆ, ನಿವೇಶನ ಹಕ್ಕು ಪತ್ರ ಇಲ್ಲದವರಿಗೆ ಅಕ್ರಮ-ಸಕ್ರಮಗೊಳಿಸಿ ನಿವೇಶನ ಹಕ್ಕು ಪತ್ರ ನೀಡಬೇಕು. ಬಂಜಾರಾ ಕಂದಾಯ ಗ್ರಾಮವೆಂದು ಘೋಷಿಸಿದ ಗ್ರಾಮಸ್ಥರಿಗೆ ಮುಟೇಶನ ಫಾರಂ ಸರಕಾರವೇ ಮಾಡಿಕೊಡಬೇಕು. ಉದ್ಯೋಗ ಖಾತ್ರಿ ಕೆಲಸ 100 ರಿಂದ 200 ರವರೆಗೆ ವಿಸ್ತರಿಸಬೇಕು. ಬರಗಾಲದ ಕಾಮಗಾರಿಗೆ ದಿನಕ್ಕೆ 600 ವೇತನ ಕೊಡಬೇಕು. ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರು ಹಣ ಬಿಡುಗಡೆ ಮಾಡಬೇಕು” ಎಂದು ಆಗ್ರಹಿಸಿದರು.
ಜಿಂಕೆ ಮತ್ತು ದ್ವಿಚಕ್ರ ವಾಹನದ ಅಪಘಾತದಲ್ಲಿ ಮೃತಪಟ್ಟ ಭಾಲ್ಕಿ ತಾಲೂಕಿನ ಮೋರಂಬಿ ಗ್ರಾಮದ ರೈತ ಚಾಂದ ಪಟೇಲ್ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ಒದಗಿಸಬೇಕು. ಕೆಲಸದ ವೇಳೆ ಕಾಡು ಹಂದಿದಾಳಿಯಿಂದ ಗಂಭೀರವಾಗಿ ಗಾಯಾಗೊಂಡಿರುವ ಹುಮನಾಬಾದ ತಾಲೂಕಿನ ಘಾಟಬೋರಳ ಗ್ರಾಮದ ಬುದ್ಧ ಪ್ರಕಾಶ ಪರಿಹಾರ ನೀಡಬೇಕು. ಆತ್ಮಹತ್ಯೆ ಮಾಡಿಕೊಂಡ ಹುಮನಾಬಾದ ತಾಲೂಕಿನ ಹಂದಿಕೇರಾ ಗ್ರಾಮದ ಮಾಧಪ್ಪಾ ಮೇಲಕಡೆ ಕುಟುಂಬಸ್ಥರಿಗೆ ಪರಿಹಾರ ನೀಡಬೇಕು. ವಿದ್ಯುತ್ ಅವಘಡದಿಂದ ಸಾವನಪ್ಪಿದ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದ ಅಂಕುಶ ಕುಟುಂಬಕ್ಕೆ ಪರಿಹಾರ ಧನ ನೀಡುವುದು ಸೇರಿ ಒಟ್ಟು 12 ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿದರು.
ನಮ್ಮ ಜಿಲ್ಲೆಯ ಅರಣ್ಯ ಸಚಿವರು ಹಾಗೂ ಉಸ್ತುವಾರಿ ಸಚಿವರಾಗಿರುವ ತಾವು ಜಿಲ್ಲೆಯ ಕೃಷಿ ಕಾರ್ಮಿಕರ ಭೂಮಿ ಸಮಸ್ಯೆಯನ್ನು ತ್ವರಿತಗತಿಯಲ್ಲಿ ಬಗೆಹರಿಸಿ ಎಲ್ಲ ರೈತರಿಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಂಬೇಡ್ಕರ್ ಪ್ರತಿಮೆಗೆ ಅಪಮಾನ ಪ್ರಕರಣ; ನಾಲ್ವರು ಆರೋಪಿಗಳ ಬಂಧನ
ಪ್ರತಿಭಟನೆಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾಧ್ಯಕ್ಷ ಸೈಯದ್ ಇಸಾಮೋದ್ದಿನ್, ಪ್ರಧಾನ ಕಾರ್ಯದರ್ಶಿ ಅಂಬುಬಾಯಿ ಮಾಳಗೆ, ಜಿಲ್ಲಾ ಉಪಾಧ್ಯಕ್ಷ ಮಹೇಶ ಕಾಟೆ, ಸಹ ಕಾರ್ಯದರ್ಶಿ ದೇವಾನಂದ ಗಾಯಕವಾಡ ಸೇರಿದಂತೆ ಪ್ರಮುಖರಾದ ಸಚಿನ ಗುಂಡೆ, ಲಖನ್ ಮಹಾಜನ್, ಖಾಜಾಮಿಯ್ಯಾ ಶೇರಿಕರ್, ಸಂಗ್ರಾಮ, ಶಿವಾಜಿ ಗಾಯಕವಾಡ, ರಾಜಕುಮಾರ ಸ್ವಾಮಿ, ಸೂರ್ಯಕಾಂತ, ರಾಮಚಂದ ಹಾಗೂ ರೈತ ಸಂಘದ ವಿ.ಬಿ.ಪಾಟೀಲ್, ಖಾಸೀಂ ಖಾನ್ ಸೇರಿದಂತೆ ಕೂಲಿಕಾರ್ಮಿಕ ಮಹಿಳೆಯರು, ಸ್ವಚ್ಛತಾ ಕಾರ್ಮಿಕರು ಇದ್ದರು.