ಔರಾದ ತಾಲೂಕಿನ ಶೆಂಬೆಳ್ಳಿ ಗ್ರಾಮಕ್ಕೆ ಸೂಕ್ತ ಸಮಯಕ್ಕೆ ಬಸ್ ಸೌಲಭ್ಯ ಒದಗಿಸುವಂತೆ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ಔರಾದ(ಬಿ) ತಾಲೂಕು ಘಟಕ ಆಗ್ರಹಿಸಿದೆ.
ಈ ಸಂಬಂಧ ವೇದಿಕೆಯ ಪದಾಧಿಕಾರಿಗಳು ಔರಾದ ತಾಲೂಕು ಬಸ್ ಘಟಕ ವ್ಯವಸ್ಥಾಪಕ ಎಸ್.ಟಿ.ರಾಠೋಡ್ ಅವರಿಗೆ ಹಕ್ಕೊತ್ತಾಯ ಸಲ್ಲಿಸಿದರು.
“ಶೆಂಬೆಳ್ಳಿ ಗ್ರಾಮ ಪಂಚಾಯತ್ ಕೇಂದ್ರವಾಗಿದ್ದು, ಹೆಚ್ಚಿನ ವ್ಯಾಸಂಗಕ್ಕಾಗಿ ಗ್ರಾಮದ ನೂರಾರು ವಿದ್ಯಾರ್ಥಿಗಳು ಜಿಲ್ಲಾ, ತಾಲೂಕು ಕೇಂದ್ರ ಸೇರಿದಂತೆ ಸಂತಪೂರ ಗ್ರಾಮಕ್ಕೆ ತೆರಳುತ್ತಾರೆ. ಆದರೆ ಸಕಾಲಕ್ಕೆ ಬಸ್ ಸೌಕರ್ಯ ಇಲ್ಲದ ಕಾರಣ ವಿದ್ಯಾರ್ಥಿಗಳು ಬೀದರ್- ಔರಾದ ರಾಷ್ಟ್ರೀಯ ಹೆದ್ದಾರಿ ರಸ್ತೆಗೆ 4 ಕಿ.ಮೀ. ನಡೆದುಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತರಗತಿಗೆ ಹಾಜರಾಗಲು ತೊಂದರೆಯಾಗುತ್ತಿದೆ. ಆದ್ದರಿಂದ ಬೆಳ್ಳಿಗೆ 9 ಗಂಟೆ ಹಾಗೂ ಸಂಜೆ 4.45 ಗಂಟೆಗೆ ಬೀದರ್ – ಔರಾದ ಮಾರ್ಗವಾಗಿ ಗ್ರಾಮಕ್ಕೆ ಮೂರ್ನಾಲ್ಕು ದಿನಗಳಲ್ಲಿ ಬಸ್ ಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಕಲ್ಲಡ್ಕ ಪ್ರಭಾಕರ್ ಭಟ್ ಬಂಧನಕ್ಕೆ ದಸಂಸ ಆಗ್ರಹ
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ ಆಧ್ಯಕ್ಷ ಗಣಪತಿ ಎಸ್. ಶೇರಿಕರ್, ಉಪಾಧ್ಯಕ್ಷ ಭೀಮರಾವ ಜೊನ್ನೆಕೆರೆ, ಕಾರ್ಯದರ್ಶಿ ಆನಂದ ಕೆಳಕಡೆ ಸೇರಿದಂತೆ ಪ್ರಕಾಶ ಡೋಣೆ, ಸಂಜಕುಮಾರ್ ದೊಡ್ಡತೆಲೆ ಇದ್ದರು.