ಪರಿಸರವಾದಿ, ಹೋರಾಟಗಾರ ಕಲ್ಕುಳಿ ವಿಠಲ ಹೆಗಡೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಒಟ್ಟು 37 ಮಂದಿಗೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ‘ಹೆಚ್.ಎನ್ ಪ್ರಶಸ್ತಿ’ ನೀಡಿ ಗೌರವಿಸಿದೆ. ಲಿಂಸಗೂರಿನಲ್ಲಿ ನಡೆದ 3ನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಪರಿಷತ್ತು ತಿಳಿಸಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದವರನ್ನು ಗುರುತಿಸಿ ಪ್ರಶಸ್ತಿ ಕೊಡಲಾಗಿದೆ. ಡಾ. ಹುಲಿಕಲ್ ನಟರಾಜ್ ಅವರ ಮಾರ್ಗದರ್ಶನದಲ್ಲಿ ರಾಜ್ಯಮಟ್ಟದ ಆಯ್ಕೆ ಸಮಿತಿಯಲ್ಲಿ ಪುರಸ್ಕೃತರನ್ನು ಆಯ್ಕೆ ಮಾಡಿದೆ ಎಂದು ಪರಿಷತ್ತು ಹೇಳಿದೆ.
ಪ್ರತಿ ವರ್ಷ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಈ ವರ್ಷ ಕಲ್ಕುಳಿ ವಿಠಲ್ ಹೆಗ್ಗಡೆ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲ್ಕುಳಿ ವಿಠಲ್ ಹೆಗಡೆ ಅವರು ಮೂಲತಃ ಮಲೆನಾಡಿನವರು. ಅಲ್ಲಿನ ಭಾಗಗಳಲ್ಲಿ ಯು.ಆರ್. ಅನಂತಮೂರ್ತಿ, ಕುವೆಂಪು, ಪೂರ್ಣಚಂದ್ರ ತೇಜಸ್ವಿ ಅವರ ಜತೆ ಗುರುತಿಸಿಕೊಂಡಿದ್ದವರು. ರೈತಪರ ಹೋರಾಟ, ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಟಗಳಲ್ಲಿ ಸಕ್ರಿಯರಾಗಿದ್ದಾರೆ.
ಬರವಣಿಗೆಯನ್ನೂ ಮೈಗೂಸಿಕೊಂಡಿರುವ ಹೆಗಡೆ ಅವರು ‘ಮಂಗನ ಬ್ಯಾಟೆ’, ‘ಅಡಿಕೆಯ ಮಾನ’ ಮತ್ತು ‘ಕಾಡು-ಕಿರುಕುಳ’ ಕೃತಿಗಳನ್ನು ಪ್ರಕಟಿಸಿದ್ದಾರೆ. ಅವರ ಮಂಗನ ಬ್ಯಾಟೆ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಅಲ್ಲದೆ, ‘ಮಂಗನ ಬ್ಯಾಟೆ’ ಕೃತಿ ಕುವೆಂಪು ವಿವಿಯ ಮೊದಲ ವರ್ಷದ ಪದವಿ ಕನ್ನಡ ವಿಷಯದ ಪಠ್ಯವೂ ಆಗಿದೆ.
ಕಲ್ಕುಳಿ ವಿಠಲ ಹೆಗಡೆ ಅವರು ಮಾತ್ರವಲ್ಲದೆ, ಎಸ್ಪಿ ದಯಾನಂದ, ಡಾ. ಮಂಜುಳ ಕೆ.ಆರ್, ಎಸ್.ವಿ ಪ್ರಮೀತ್, ಡಾ. ಬಿ.ಎಂ ಶಿವರುದ್ರಯ್ಯ, ರಮೇಶ್ ಸಿ, ಡಾ. ಶ್ರೀಶೈಲ, ಡಾ. ಎಸ್ ಶಿವಪಾಲ. ಶ್ರೀಗಣೇಶ, ಕೃಷ್ಣಮೂರ್ತಿ ಬಿಳಿಗೆರೆ, ಡಿ.ಎಸ್ ಮುನೀಂದ್ರಕುಮಾರ್, ಎಸ್ ವೆಂಕಟೇಶ್, ಕೋಟಿಗಾನಹಳ್ಳಿ ರಾಮಯ್ಯ, ಮನೋರಕ್ಕತ ಭಂತೇಜೀ, ಈ ಧನಂಜಯ್, ಡಿ.ಎಸ್ ವೀರಯ್ಯ, ಡಾ. ಚಂದ್ರಶೇಖರ್ ಜಿ, ಶ್ರೀ ಜಯಪ್ಪಲಮಾಣಿ, ದಿನೇಶ್ ಖಾರ್ಮಿಗಂಗೊಳ್ಳಿ, ಬಸಮ್ಮ ಜಿ.ಕೆ, ಎನ್.ಎನ್ ಶಂಭುಲಿಂಗಪ್ಪ, ಮಹದೇವ್ ಬೊಮ್ಮುಗೌಡ, ಡಾ. ಫಕೀರಪ್ಪ, ರಾಘವೇಂದ್ರ ಆರ್. ವಿಸಾಳೆ, ಡಾ. ದೀಪ ವಿ.ಎಚ್, ವಿ.ಎನ್ ಕೊಳ್ಳಿ, ಡಾ. ಬಸವರಾಜ್ ಮ್ಯಾಗೇಡಿ, ಸಂಗಯ್ಯ ಹಿರೇಮಠ್, ಅಮರೇಶ ಪಾಟೀಲ್, ರವಿಪ್ರಸಾದ್, ಕೆ ಲೋಕರಾಜ, ರಮೇಶಬಾಬು ಯಾಳಗಿ, ಆರ್.ಕೆ ಹುಡಗಿ, ಶಿವಕುಮಾರಕಟ್ಟೆ, ಚನ್ನಬಸಮ್ಮ ತಳವಾರ, ಸಂಜೀವ ಕುಮಾರ್ ಭೂಶೆಟ್ಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.