ದೀಪದಕೆಳಗೆ ಕತ್ತಲು ಎಂಬಂತೆ, ತುಮಕೂರಿನಲ್ಲಿ ಆಯೋಜಿಸಿದ್ದ ಸಾಧನ ಸಮರ್ಪಣೆಯ ಹೆಸರಿನ ಸಮಾವೇಶ ಮುಗಿದ ಬೆನ್ನಲ್ಲೇ ಕಂದಾಯ ಇಲಾಖೆ ಮಹಾ ಎಡವಟ್ಟು ಬೆಳಕಿಗೆ ಬಂದಿದೆ. ಸಾಧನಾ ಸಮಾವೇಶ ನಡೆದ ಜಿಲ್ಲೆಯ ರೈತರಿಗೇ ʼಭೂ ಗ್ಯಾರಂಟಿ ಯೋಜನೆʼ ಫಲ ಇಲ್ಲದಂತಾಗಿದ್ದು, ಈ ಭಾಗ ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದರ ವಿರುದ್ದ ಸಿಡಿದೆದ್ದಿರುವ ರೈತರು ಕಂದಾಯ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಇತ್ತೀಚೆಗೆ ತುಮಕೂರಿನಲ್ಲಿ ಸಾಧನ ಸಮಾವೇಶವನ್ನು ಆಯೋಜಿಸಿತ್ತು. ಇದಕ್ಕೂ ಮುನ್ನ ಮೇ 13 ರಂದು ಮಾಡಿದ ಪ್ರಮುಖ ಘೋಷಣೆಗಳಲ್ಲಿ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಉಸ್ತುವಾರಿ ಡಿ.ಕೆ. ಶಿವಕುಮಾರ್ ಕರ್ನಾಟಕ ಕಾಂಗ್ರೆಸ್ ಸರ್ಕಾರದ “ಆರನೇ ಗ್ಯಾರಂಟಿ” – ಭೂ ಗ್ಯಾರಂಟಿ ಯೋಜನೆ ಯನ್ನು ಅನಾವರಣಗೊಳಿಸಿದ್ದರು.

ತುಮಕೂರು ತಾಲ್ಲೂಕಿನ ಪಂಡಿತನಹಳ್ಳಿ ಗ್ರಾಮದ ರೈತರು ಪೋಡಿ ದುರಸ್ತಿ ಮಾಡಿ ಕೊಡದ ಕಂದಾಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದು ಮನೆ ಬಾಗಿಲಿಗೆ ಭೂ ಗ್ಯಾರಂಟಿ ಕೊಡ್ತಿದ್ದೇವೆ ಎಂದಿದ್ದ ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚೆಗೆ ಡಿಕೆ ಶಿವಕುಮಾರ್ ಅನಾವರಣಗೊಳಿಸಿದ್ದ ಸರ್ಕಾರದ ಆರನೇ ಗ್ಯಾರಂಟಿ ಯೋಜನೆಯಾದ ʼಭೂ ಗ್ಯಾರಂಟಿ ಯೋಜನೆʼಯ ಸೇವೆಯನ್ನು ರೈತರ ಮನೆ ಬಾಗಿಲಿಗೇ ತಲುಪಿಸುತ್ತೇವೆ ಎಂದು ಕಂದಾಯ ಸಚಿವರು ಆಶ್ವಾಸನೆ ನೀಡಿದ್ದರು. ಆದರೆ, ತುಮಕೂರು ನಗರದ ಕೂಗಳತೆ ದೂರದಲ್ಲಿರುವ ರೈತರ ಜಮೀನುಗಳಿಗೆ ಈ ಮಹಾತ್ವಾಕಾಂಕ್ಷೆಯ ಯೋಜನೆಯ ಪ್ರಯೋಜನ ಇಲ್ಲದಂತಾಗಿದೆ ಎಂದು ಅನ್ನದಾತರು ಅಳಲು ತೋಡಿಕೊಂಡಿದ್ದಾರೆ.

1960 ರಲ್ಲಿ ಭೂಮಿ ಮಂಜೂರಾಗಿರುವ ಭೂಮಿಗೆ ಇನ್ನೂ ಸಿಗದ ಪೋಡಿ ದುರಸ್ತಿ ಭಾಗ್ಯ: 23 ಕ್ಕೂ ಹೆಚ್ಚು ಜನ ರೈತರಿಗೆ 1960 ರಲ್ಲಿ ಭೂಮಿ ಮಂಜೂರಾಗಿತ್ತು. ಈವರೆಗೂ ಸರ್ವೆ ಪೋಡಿ ದುರಸ್ತಿ ಮಾಡದೆ ಕಂದಾಯ ಇಲಾಖೆ ನಿರ್ಲಕ್ಷ್ಯ ತೋರುತ್ತಿದೆ. ಪೋಡಿ ದುರಸ್ತಿ ಆಗದ ಹಿನ್ನೆಲೆ ಅರಣ್ಯ ಇಲಾಖೆಯಿಂದ ರೈತರಿಗೆ ನಿತ್ಯ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿರುವ ರೈತರು, ರೈತರ ಜಮೀನಲ್ಲಿ ಅರಣ್ಯ ಇಲಾಖೆ ಜೆಸಿಬಿಯಿಂದ ಟ್ರಂಚ್ ನಿರ್ಮಿಸಿದೆ, ರೈತರ ಜಮೀನುಗಳು ಅರಣ್ಯ ಇಲಾಖೆಗೆ ಸೇರಲಿದೆ ಎಂದು ಟಾರ್ಚರ್ ನೀಡುತ್ತಿದ್ದಾರೆ. ಮಂಜೂರಾಗಿರುವ ಭೂಮಿಯನ್ನ ಪೋಡಿ ದುರಸ್ತಿ ಮಾಡಿ, ಅರಣ್ಯ ಇಲಾಖೆಯಿಂದ ಮುಕ್ತಿ ಕೊಡುವಂತೆ ನೂರಾರು ರೈತರು ಮಹಿಳೆಯರು ಜಮಿನುಗಳ ಪೋಡಿ ದುರಸ್ತಿಗೆ ಆಗ್ರಹಿಸಿದ್ದು, 23 ನೇ ಸರ್ವೆ ನಂಬರ್ ಪೋಡಿ ದುರಸ್ತಿ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.




