ಭಟ್ಕಳ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ರಾಜಕೀಯ ಚಟುವಟಿಕೆಗಳು ವೇಗ ಪಡೆದಿರುವ ನಡುವೆಯೇ, ಕಾಂಗ್ರೆಸ್ ಹೈಕಮಾಂಡ್ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಪಕ್ಷದ ಎಲ್ಲಾ 136 ಶಾಸಕರೂ ಬದ್ಧರಾಗಿರುತ್ತಾರೆ ಎಂದು ಮೀನುಗಾರಿಕೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಕುರಿತು ಪಕ್ಷದೊಳಗೆ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿರುವ ನಾಯಕರನ್ನೇ ಪಕ್ಷದ ವರಿಷ್ಠರು ಆಯ್ಕೆ ಮಾಡಲಿದ್ದಾರೆ ಎಂಬ ನಂಬಿಕೆ ನಮಗಿದೆ.
ಈಗಾಗಲೇ ಹಿರಿಯ ನಾಯಕರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಕೈಗೊಳ್ಳುವ ಅಂತಿಮ ನಿರ್ಧಾರವನ್ನು ಎಲ್ಲ ಶಾಸಕರೂ ಒಮ್ಮತದಿಂದ ಸ್ವೀಕರಿಸಲಿದ್ದೇವೆ ಎಂದು ಅವರು ಹೇಳಿದರು.
ರಾಜ್ಯದ ಮುಂದಿನ ಮುಖ್ಯಮಂತ್ರಿ ಆಯ್ಕೆ ಸಂಬಂಧ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ ಸಚಿವರು, ಸಭೆಯಲ್ಲಿ ಭಾಗವಹಿಸುವ ಶಾಸಕರು ಪಕ್ಷದ ನಿರ್ಧಾರಕ್ಕೆ ಸಂಪೂರ್ಣ ಬೆಂಬಲ ಸೂಚಿಸಲಿದ್ದಾರೆ ಎಂದರು.
ಈ ಸುದ್ದಿ ಓದಿದ್ದೀರಾ? ಭಟ್ಕಳ | ಈದ್ಗಾ ಮೈದಾನದ ಬದಲು ಮಸೀದಿಗಳಲ್ಲೇ ಬಕ್ರೀದ್ ನಮಾಜ್ಗೆ ಮುಸ್ಲಿಂ ಸಮುದಾಯ ನಿರ್ಧಾರ
ದೆಹಲಿಯಲ್ಲಿ ನಡೆಯುತ್ತಿರುವ ರಾಜಕೀಯ ಚರ್ಚೆಗಳು ಹಾಗೂ ಸಚಿವ ಸಂಪುಟದ ಲಾಬಿ ಕುರಿತ ಪ್ರಶ್ನೆಗೆ ಉತ್ತರಿಸಿದ ಮಂಕಾಳ ವೈದ್ಯ, ತಮಗೆ ಕ್ಷೇತ್ರದ ಜನರ ಸೇವೆಯೇ ಮುಖ್ಯ ಎಂದು ತಿಳಿಸಿದರು. ನನ್ನ ರಾಜಕೀಯ ಜೀವನಕ್ಕೆ ಭಟ್ಕಳ-ಹೊನ್ನಾವರ ಕ್ಷೇತ್ರದ ಜನರ ಆಶೀರ್ವಾದವೇ ಕಾರಣ. ಜನರ ಬೆಂಬಲದಿಂದಲೇ ನನಗೆ ಸಚಿವ ಸ್ಥಾನ ಸಿಕ್ಕಿದೆ. ಹೀಗಾಗಿ, ದೆಹಲಿ ರಾಜಕಾರಣಕ್ಕಿಂತ ಕ್ಷೇತ್ರದ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡುತ್ತೇನೆ ಎಂದು ಹೇಳಿದರು.




