ಚಡ್ಡಿ ಗ್ಯಾಂಗ್ ಮಾದರಿಯಲ್ಲೇ ಮಾರಕಾಸ್ತ್ರ ಹಿಡಿದು ದರೋಡೆಗೆ ಯತ್ನ ನಡೆಸಿರುವ ಘಟನೆ ಕೆಆರ್‌ಪೇಟೆ ಪಟ್ಟಣದ ಹಳೆ ಮೈಸೂರು ರಸ್ತೆಯಲ್ಲಿ ಕಳೆದ ಬುಧವಾರ ರಾತ್ರಿ ನಡೆದಿದೆ.
ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ಪಟ್ಟಣದ ನಿವಾಸಿ ಇಂದ್ರಮ್ಮ ರಂಗನಾಥ ನಿವಾಸದ ಮೇಲೆ ದಾಳಿ ನಡೆಸಲು ಯತ್ನಿಸಿರುವುದು ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ರೀತಿಯ ಘಟನೆ ಕೆಆರ್‌ಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಹಾಗೂ ಐ.ಬಿ ವೃತ್ತದ ಬಳಿ ನಡೆದಿದೆ ಎನ್ನಲಾಗಿದೆ. ಚಡ್ಡಿ ಗ್ಯಾಂಗ್ ಮಾದರಿಯಲ್ಲಿಯೇ ಕಳ್ಳರು ಇಂದಿರಾ ರಂಗನಾಥ್ ಮನೆಯ ಬಾಗಿಲನ್ನು ಮುರಿದು ಕಳ್ಳತನ ಮಾಡಲು ಯತ್ನಿಸಿರುವ ಬಗ್ಗೆ ಕೆಆರ್‌ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಎಲ್ಲಾ ಘಟನೆಗಳಿಂದಾಗಿ ಕೆಆರ್‌ಪೇಟೆ ಪಟ್ಟಣದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ನಾಗರಿಕರು ಆತಂಕಗೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಚಡ್ಡಿ ಗ್ಯಾಂಗ್ ಕೃತ್ಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳು ಹರಿದಾಡುತ್ತಿದ್ದು, ಅವು ಕೆಆರ್‌ಪೇಟೆಯಲ್ಲೇ ನಡೆದಿವೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ತಿಳಿದು ಬಂದಿದೆ.
ಇದನ್ನು ಓದಿದ್ದೀರಾ? ಮಂಡ್ಯ ಸಮ್ಮೇಳನ | ಜೋಶಿಯವರು ಗೊ ರು ಚನ್ನಬಸಪ್ಪ, ಜಿ ಮಾದೇಗೌಡರ ಮಾದರಿ ಅರಿಯಲಿ
ಚಡ್ಡಿ ಗ್ಯಾಂಗ್ ಮಾದರಿಯಲ್ಲಿ ಕೆಆರ್‌ಪೇಟೆ ಪಟ್ಟಣದ ಮೂರು ಕಡೆಗಳಲ್ಲಿ ದರೋಡೆಗೆ ಯತ್ನ ನಡೆದಿರುವ ಹಿನ್ನೆಲೆಯಲ್ಲಿ ಪೊಲೀಸರು ಹೊರ ರಾಜ್ಯಗಳಿಂದ ಬಂದು ಕೆಆರ್‌ಪೇಟೆ ಪಟ್ಟಣದಲ್ಲಿ ನಾನಾ ಕೆಲಸಗಳನ್ನು ಮಾಡುತ್ತಿರುವ ಕಾರ್ಮಿಕರ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಇಂದು ನೂರಕ್ಕೂ ಹೆಚ್ಚು ಕಾರ್ಮಿಕರನ್ನು ವಿಚಾರಣೆ ನಡೆಸಿ, ತಮ್ಮ ತಮ್ಮ ರಾಜ್ಯಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.
“ಚಡ್ಡಿ ಗ್ಯಾಂಗ್ ಕೆಅರ್‌ಪೇಟೆ ಟೌನ್‌ನಲ್ಲಿ HBT Attempt(House break-in thefts) ಮಾಡಿದ್ದಾರೆ. ಎಲ್ಲರೂ ಸೂಕ್ತ ಮುನ್ನೆಚ್ಚರಿಕೆವಹಿಸಿ” ಎಂದು ಕೆಲ ವಿಡಿಯೋಗಳು ವೈರಲ್ ಆಗಿದ್ದು, ಆ ವಿಡಿಯೋಗಳು ಕೆಆರ್‌ಪೇಟೆಗೆ ಸಂಬಂಧಿಸಿದ ವಿಡಿಯೋಗಳು ಅಲ್ಲ. ಅದೊಂದು ಸುಳ್ಳು ಸುದ್ದಿ. ಸಾರ್ವಜನಿಕರು ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ವಹಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.