ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಯಾಗಿದ್ದ ವ್ಯಕ್ತಿಯೊಬ್ಬರು ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ, ಅವರು ಆತ್ಮಹತ್ಯೆಗೂ ಮುನ್ನ ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದ್ದು, ತಮ್ಮ ಸಾವಿಗೆ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರೇ ಕಾರಣವೆಂದು ಬರೆದಿಟ್ಟಿರುವುದು ಕಂಡುಬಂದಿದೆ.
ಹುಬ್ಬಳ್ಳಿಯ ಆನಂದ ನಗರ ನಿವಾಸಿ ಮಹಾಂತೇಶ್ ಕಲಾಲ್ ಎಂಬವರು ಡೆತ್‌ನೋಟ್‌ನಲ್ಲಿ ಪೊಲೀಸರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವವರು. ಅವರನ್ನು ಬೈಕ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ಕಲಾಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರು, ನವೆಂಬರ್ 19ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿತ್ತು. ಆದರೆ, ನವೆಂಬರ್ 22ರಂದು ಪತ್ತೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗಲು ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದಾಗ್ಯೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದರು.
ಇತ್ತೀಚೆಗೆ, ಅವರ ನಿವಾಸವನ್ನು ಸ್ವಚ್ಛಗೊಳಿಸುವಾಗ ಅವರು ಬರೆದಿಟ್ಟಿದ್ದ ಡೆತ್‌ನೋಟ್ ಪತ್ತೆಯಾಗಿದೆ. “ಪೊಲೀಸರು ತಮ್ಮ ಬಳಿ ಹಣಕ್ಕೆ ಬೇಡಿಕೆ ಇಟ್ಟು, ಕಿರುಕುಳ ನೀಡಿದ್ದಾರೆ. ಬೃಂದಾವನ ಲಾಡ್ಜ್ಗೆ ನನ್ನನ್ನು ಎಳೆದೊಯ್ದು ಪೊಲೀಸರು ಥಳಿಸಿದ್ದಾರೆ. ನನ್ನ ಸಾವಿಗೆ ಹುಬ್ಬಳ್ಳಿ ಉಪನಗರ ಠಾಣೆಯ ಮಲ್ಲಿಕಾರ್ಜುನ, ರೇಣು, ದಾನೇಶ್, ಅರುಣ್, ಮಂಜುನಾಥ, ಕುದರಿ ಹಾಗೂ ಗೋವಿಂದ್ ಕಾರಣ” ಎಂದು ಉಲ್ಲೇಖಿಸಿದ್ದಾರೆ.
ಡೆತ್‌ನೋಟ್ ಪತ್ತೆಯಾದ ಬಳಿಕ ಕಲಾಲ್ ಸಾವಿನ ಬಗ್ಗೆ ಮಾತನಾಡಿರುವ ಕಲಾಲ್ ಪತ್ನಿ ಪೂಜಾ, “ನನ್ನ ಗಂಡನ ಸಾವಿಗೆ ಪೊಲೀಸರೇ ಕಾರಣ. ನಮಗೆ ನ್ಯಾಯ ಸಿಗಬೇಕು. ಕಲಾಲ್ ಸಾವಿಗೆ ಕಾರಣವಾದ ಪೊಲೀಸರನ್ನು ಅಮಾನತ್ತು ಮಾಡಬೇಕು” ಎಂದು ಆಗ್ರಹಿಸಿದ್ದಾರೆ.