ಹುಬ್ಬಳ್ಳಿಯಲ್ಲಿ ಜೂನ್ 11ರಂದು ಸುರಿದ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಜಮೀನಿನಲ್ಲಿ ಕೃಷಿ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಹುಸೇನ್ ಕಳಸ ಎಂಬುವವರು ನೇಕಾರ ನಗರದ ಸೇತುವೆ ಬಳಿ ಹರಿಯುತ್ತಿದ್ದ ನೀರನ್ನು ದಾಟುವಾಗ ಆಯತಪ್ಪಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದರು.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಪೊಲೀಸರು, ಮಹಾನಗರ ಪಾಲಿಕೆ ಸಿಬ್ಬಂದಿ ನಿರಂತರ ಕಾರ್ಯಾಚರಣೆ ನಡೆಸಿದರು. ಘಟನೆ ನಡೆದ ಸ್ಥಳದಿಂದ ಒಂದೂವರೆ ಕಿ.ಮೀ. ದೂರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
