ವೈದಿಕರು ಸಿದ್ದಾರೂಢರ ಜಯಂತಿಯನ್ನು ರಾಮ ನವಮಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ರಾಮನಿಗೂ ಸಿದ್ಧಾರೂಢರಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಮತ್ತು ಸಿದ್ಧಾರೂಢರು ರಾಮಾಯಣ ಮಹಾಭಾರತದ ಪ್ರವಚನ ಮಾಡುತ್ತಿದ್ದಿಲ್ಲ. ನಿಜಗುಣಶಾಸ್ತ್ರದ ಪಾರಾಯಣ ಮಾಡಿಸುತ್ತಿದ್ದರು ಎಂದು ಹುಬ್ಬಳ್ಳಿಯಲ್ಲಿ ನಡೆದ ಸಿದ್ಧಾರೂಢರ 189ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಕುಮಾರಣ್ಣ ವಿ ಪಾಟೀಲ್ ಹೇಳಿದರು.
ಸದ್ಗುರು ಸಿದ್ಧಾರೂಢ ಸ್ವಾಮಿ ಸದ್ಭಕ್ತ ಮಂಡಳಿ ವತಿಯಿಂದ 1836 ಮಾರ್ಚ್ 26ರಂದು ಜನಿಸಿದ ಸಿದ್ಧಾರೂಢರ 189ನೇ ಜಯಂತೋತ್ಸವದ ಅಂಗವಾಗಿ ನಗರದ ಬಿಡ್ನಾಳ್ ಕ್ರಾಸ್ ಹತ್ತಿರವಿರುವ ಶಕ್ತಿನಗರದ ಮೈತ್ರಿ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರದಲ್ಲಿ ಏಪ್ರಿಲ್ 18ರಂದು ಸಿದ್ಧಾರೂಢ ಸ್ವಾಮಿಗಳ ಚರಿತ್ರೆ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದರು. ಇದರ ಜೊತೆಗೆ ಮಧ್ಯಪಾನ ವ್ಯಸನ ಮುಕ್ತ ಕೇಂದ್ರದ ಶಿಬಿರಾರ್ಥಿಗಳಿಗೆ ಮಧ್ಯಪಾನ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತಾಗಿ ಉಪನ್ಯಾಸ ನಡೆಯಿತು.
ಕುಮಾರಣ್ಣ ವಿ ಪಾಟೀಲ್ ಮಾತನಾಡುತ್ತಾ, ವೈದಿಕರು ಸಿದ್ದಾರೂಢರ ಜಯಂತಿಯನ್ನು ರಾಮ ನವಮಿಯಲ್ಲಿ ಸೇರ್ಪಡೆ ಮಾಡಿದ್ದಾರೆ. ರಾಮನಿಗೂ ಸಿದ್ಧಾರೂಢರಿಗೂ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟ. ಮತ್ತು ಸಿದ್ಧಾರೂಢರು ರಾಮಾಯಣ ಮಹಾಭಾರತದ ಪ್ರವಚನ ಮಾಡುತ್ತಿದ್ದಿಲ್ಲ. ನಿಜಗುಣಶಾಸ್ತ್ರದ ಪಾರಾಯಣ ಮಾಡಿಸುತ್ತಿದ್ದರು. ರಾಮಾಯಣ ದ್ವೈತ ಸಿದ್ಧಾಂತ ಪ್ರತಿಪಾದಿಸಿದರೆ; ಸಿದ್ಧಾರೂಢರು ಅದ್ವೈತ ಸಿದ್ಧಾಂತ ಪ್ರತಿಪಾದಿಸದರು. ರಾಮಾಯಣ ಮತ್ತು ಮಹಾಭಾರತದಲ್ಲಿ ಜಾತಿ ಭೇದದ ಕುರಿತು ಅನೇಕ ಉಲ್ಲೇಖಗಳು ಕಾಣಸಿಗುತ್ತವೆ. ಆದರೆ ಸಿದ್ದಾರೋಡರು ಬಸವಣ್ಣನವರಂತೆ ಜಾತಿ ಭೇದವನ್ನು ಮೆಟ್ಟಿ ನಿಂತವರು. ವೈದಿಕರು ಯಾರ ಕೈಗೂ ಎಟುಕಿಸದೇ ಗುಪ್ತವಾಗಿ ಹೇಳುತ್ತಿದ್ದ ಓಂ ನಮಃ ಶಿವಾಯ ಮಂತ್ರವನ್ನು ಸಿದ್ಧಾರೂಢರು ಬಹಿರಂಗವಾಗಿ ಹೇಳುವುದಕ್ಕೆ ಶುರು ಮಾಡುತ್ತಾರೆ. ಇದರಿಂದ ತಳ ಸಮುದಾಯಗಳು ಆ ಮಂತ್ರವನ್ನು ಪಠಿಸುವಂತೆ ಚಾಲ್ತಿಗೆ ಬಂದಿತು.

ವಿಶೇಷವಾಗಿ ಸಿದ್ಧಾರೂಢರು ಸಮಾನತೆ ಧರ್ಮವನ್ನು ಒಪ್ಪಿ ಪ್ರತಿಪಾದಿಸಿದವರು. ಶೂದ್ರರಿಗೆ ಶೈಕ್ಷಣಿಕ, ಸಾಮಾಜಿಕ ಹಕ್ಕನ್ನು ದೊರಕಿಸುವಲ್ಲಿ ಮುಂದಿದ್ದವರು. ಸರ್ ಸಿದ್ದಪ್ಪ ಕಂಬಳಿ, ಛತ್ರಪತಿ ಶಾಹು ಮಹಾರಾಜರ ಒಳಗೊಂಡು ಬ್ರಾಹ್ಮಣೇತರ ಚಳುವಳಿಗೆ ನಾಂದಿ ಹಾಡಿದವರು. ಇದರಿಂದ ಡಾ. ಬಿ ಆರ್ ಅಂಬೇಡ್ಕರ್ ಅವರಿಗೆ ಪ್ರೇರಣೆ ಆಗುತ್ತದೆ. ಸಿದ್ಧಾರೂಢರನ್ನು ಭಕ್ತಿ ಪಂಥಕ್ಕೆ ಮಾತ್ರ ನಾವು ಸೀಮಿತಗೊಳಿಸಿದ್ದೇವೆ. ಆದರೆ ಸಮಾಜದಲ್ಲಿ ಸಮಾನತೆ, ಶಿಕ್ಷಣ, ಉದ್ಯೋಗಕ್ಕಾಗಿ ಚಿಂತಿಸಿದವರು. ಸಿದ್ಧಾರೂಢರ ಮಠ ಮೂಲತಃ ಅನುಭವ ಮಂಟಪದಂತಿತ್ತು. ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಏಕೆಂದರೆ; ಸಮಾನತೆಯ ಸಂದೇಶವನ್ನು ಈ ಮಠದಿಂದ ಸಾರುತ್ತಿದ್ದರು. ಈ ಮಠಕ್ಕೆ ಮುಸ್ಲಿಂ, ಕ್ರಿಶ್ಚಿಯನ್, ದಲಿತರು ಹೀಗೆ ಎಲ್ಲ ಸಮುದಾಯದ, ಎಲ್ಲ ಧರ್ಮದವರು ಬರುತ್ತಿದ್ದರು. ಅಕ್ಕಲಕೋಟೆ ಮಹಾರಾಜರು ಸಿದ್ದಾರೂಢರ ಕುರಿತು ಹುಬ್ಬಳ್ಳಿಯ ಬಸವಣ್ಣ ಎಂದು ಉದ್ಘಾರ ತೆಗೆದಿದ್ದಾರೆ. ಇವತ್ತು ಸಿದ್ಧಾರೂಢರ ಮಠ ಒಂದು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿರುವುದು ವಿಪರ್ಯಾಸದ ಸಂಗತಿ. ಕಾರಣ; ಮೊದಲಿನಂತೆ ಮಠದಲ್ಲಿ ವಿಚಾರಗೋಷ್ಠಿಗಳು ನಡೆಯುತ್ತಿಲ್ಲ. ಅವರ ವೈಚಾರಿಕ ವಿಚಾರಗಳ ಬಗ್ಗೆ ಚಿಂತನೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ವೈದ್ಯಾಧಿಕಾರಿ ಡಾ. ವಿ ಬಿ ನಿಟಾಲಿ ಮಾತನಾಡಿ, ಮಧ್ಯಪಾನದಿಂದ ಜೀವನವೇ ಅದೋಗತಿಗೆ ಹೋಗುತ್ತದೆ. ಮಧ್ಯಪಾನದಂತಹ ದುಶ್ಚಟಗಳನ್ನು ಕಲಿಯುವ ಮೊದಲು ನಿಮ್ಮ ಕುಟುಂಬದವರನ್ನು ನೆನಪಿಸಿಕೊಳ್ಳಿ. ಮಧ್ಯಪಾನ, ಡ್ರಗ್ಸ್ ಇತ್ಯಾದಿ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಅರ್ಧದಲ್ಲೇ ಸಾವನ್ನಪ್ಪುವ ಸಂಭವಗಳು ಹೆಚ್ಚಾಗಿರುತ್ತವೆ. ಇದರಿಂದ ಹೆಂಡತಿ, ಮಕ್ಕಳು ಅನಾಥರಾಗುತ್ತಾರೆ. ಈಗಲೇ ಮದ್ಯಪಾನವನ್ನು ಬಿಡುತ್ತೇವೆ ಎಂದು ನಿರ್ಧಾರಕ್ಕೆ ಬಂದರೆ ನಿಮ್ಮಂತ ಮನುಷ್ಯರು ಯಾರೂ ಇರುವುದಿಲ್ಲ. ಇತ್ತೀಚೆಗೆ ಹುಬ್ಬಳ್ಳಿ ನಗರದಲ್ಲಿ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳಂತಹ ದುಷ್ಕರ್ಮಗಳು ಹೆಚ್ಚಾಗುತ್ತಿವೆ. ಅವುಗಳಿಂದ ಹೊರ ಬರಬೇಕಾದರೆ ಈ ಕುರಿತು ಗಂಭೀರವಾಗಿ ಚಿಂತಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಪ್ರೊಫೆಸರ್ ಕೆ ಎಸ್ ಕೌಜಲಗಿ ಮಾತನಾಡಿ, ಎಲ್ಲರಿಗೂ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಸಿದ್ಧಾರೂಢರು ಓಂ ನಮಃ ಶಿವಾಯ ಮಂತ್ರ ಪಠಣವನ್ನು ಬಹಿರಂಗವಾಗಿ ರೂಢಿಗೆ ತರುತ್ತಾರೆ. ಇನ್ನು ಕುಡಿತದಿಂದ ಸಮಸ್ಯೆ ಏನಾಗುತ್ತದೆ ಎಂಬುದರ ಕುರಿತು ಅರಿವು ನಮ್ಮಲ್ಲಿರಬೇಕಾಗುತ್ತದೆ. ಚಟವೇ ಚಟಕ್ಕೆ ಮೂಲ ಈ ಮಾತನ್ನು ನಾವೆಂದೂ ಮರೆಯಬಾರದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ವಿಠ್ಠಲ ಲದವಾ ಮಾತನಾಡಿ, ಸಮಾಜದಲ್ಲಿ ಗಾಂಜಾ ನಶೆಯು ಹೆಚ್ಚಾಗುತ್ತಿದೆ. ಅದರಿಂದ ನಾವೆಲ್ಲ ಹೊರ ಬರಬೇಕಿದೆ ಎಂದರು. ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್ ಸಾಹುಕಾರ್ ಮಾತನಾಡಿ, ಸಿದ್ಧಾರೂಢರ ಅಂಗಾರ ದೇಶಕ್ಕೆಲ್ಲ ಬಂಗಾರ ಹೀಗಾಗಿ ಸಿದ್ಧಾರೂಢರ ತತ್ವಗಳನ್ನು ನಾವು ಅರಿತುಕೊಳ್ಳಬೇಕಿದೆ ಎಂದರು. ಪತ್ರಕರ್ತ ಹಾಗೂ ಸಂಗೀತಗಾರ ದಾನೇಶ್ ಎಂ ಬುರುಡಿ ಮಾತನಾಡಿ, ಸಂಗೀತವು ಸಮುದ್ರವಿದ್ದಂತೆ ಮತ್ತು ಮನುಷ್ಯನ ಶುದ್ಧೀಕರಣ ಗೊಳಿಸುತ್ತದೆ. ಮನುಷ್ಯನ ಜೀವನವನ್ನು ಹಸನ ಮಾಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಡಾ. ರಮೇಶ್ ಮಾದೇವಪ್ಪನವರ್ ಮಾತನಾಡಿ, ನಾವೆಲ್ಲರೂ ಸಮಾಜಿಮುಖಿ ಆಗಬೇಕಿದೆ. ಇದೊಂದು ಒಳ್ಳೆಯ ಕಾರ್ಯಕ್ರಮ ಎಂದು ಸಂತೋಷಪಟ್ಟರು. ದೂರದರ್ಶನ ಜಾನಪದ ಕಲಾವಿದ ಪ್ರಕಾಶ್ ಕಂಬಳಿ ಹಾಗೂ ನಾಗನಗೌಡರ್ ಹಾಗೂ ವಕೀಲ ಮತ್ತು ಗಾಯಕ ಶಿವರಾಮ ನಾಗಲಿಂಗಸ್ವಾಮಿಮಠ ಜಾನಪದ ಹಾಡುಗಳ ಮೂಲಕ ಮದ್ಯವ್ಯಸನ ಮುಕ್ತಿ ಕೇಂದ್ರದ ಶಿಬಿರಾರ್ಥಗಳ ಮನತಣಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಚೆನ್ನಬಸಪ್ಪ ಕೊನ್ನೂರ್, ಕಾರ್ಯದರ್ಶಿ ಶಂಕರ್ ಮಿಸ್ಕಿನ್, ಉತ್ಸವ ಕಮಿಟಿ ಸದಸ್ಯ ರಾಚಣ್ಣ, ರವಿ ಉಮದಿ ಇನ್ನಿತರರಿದ್ದರು. ಕಾರ್ಯಕ್ರಮವನ್ನು ಶಾರದಾ ಕುಮಾರಣ್ಣ ಪಾಟೀಲ್ ನಿರೂಪಿಸಿದರು.