5 ವರ್ಷದ ಬಾಲಕಿಯನ್ನು ಅಪಹರಿಸಿ ಕೊಲೆ ಮಾಡಿದ್ದ ಅಪರಾಧಿಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ಘಟನೆ ಏ. 13ರಂದು ಹುಬ್ಬಳ್ಳಿಯಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಮೇಲೆ ಗುಂಡು ಹಾರಿಸಿದ ಲೇಡಿ ಪಿಎಸ್ಐ ಅನ್ನಪೂರ್ಣ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆತಂಕದಲ್ಲಿದ್ದ ಜನ ಸದ್ಯ ನಿಟ್ಟುಸಿರು ಬಿಟ್ಟಿದ್ದಂತೂ ಸತ್ಯ. ಅಷ್ಟಕ್ಕೂ ಈ ಪ್ರಕರಣದ ಹಿನ್ನೆಲೆ ಏನು?, ಈ ಬಗ್ಗೆ ಜನರು ಏನಂತಾರೆ?, ಇಂತಹ ಅಹಿತಕರ ಮತ್ತು ಅಮಾನವೀಯ ಹೀನಕೃತ್ಯ ತಡೆಗಟ್ಟಲು ಏನು ಮಾಡಬೇಕು? ಬನ್ನಿ ತಿಳಿಯೋಣ.
ಪ್ರಕರಣದ ಹಿನ್ನೆಲೆ ಏನು?
ಏ. 13ರಂದು ಬೆಳಿಗ್ಗೆ ಅಂಗಳದಲ್ಲಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ 35 ವರ್ಷದ ರಿತೇಶ್ ಕುಮಾರ್ ಎಂಬಾತನು ಚಾಕೊಲೇಟ್ ಆಮೀಷವೊಡ್ಡಿ ಅಪಹರಿಸಿ, ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಪ್ರಯತ್ನಿಸುತ್ತಾನೆ. ಹಾಗ ಗಾಬರಿಗೊಳಗಾದ ಬಾಲಕಿ ಕಿರುಚಿದಾಗ ತಪ್ಪಿಸಿಕೊಳ್ಳಲು ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿ ಆಗುತ್ತಾನೆ. ಅತ್ತ ಪಾಲಕರು ಬಾಲಕಿ ಕಾಣದಿದ್ದಾಗ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಪೊಲೀಸರು ತನಿಖೆ ನಡೆಸಿದ ನಂತರ ಪಾಳುಬಿದ್ದ ಶೌಚಾಲಯವೊಂದರಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗುತ್ತದೆ.
ತದನಂತರ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಮೇಲೆ ಹುಬ್ಬಳ್ಳಿಯ ವಿವಿಧ ಸಂಘಟನೆಗಳು, ವಿವಿಧ ಸಮುದಾಯದವರು ಆರೋಪಿಯ ಹುಡುಕಾಟಕ್ಕೆ ಮತ್ತು ಕಠೀಣ ಶಿಕ್ಷೆಗೆ ಒತ್ತಾಯಿಸಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಆರೋಪಿಯ ವಿರುದ್ಧ ಆಕ್ರೋಶಗೊಂಡು ಮೃತ ಬಾಲಕಿಯ ನ್ಯಾಯಕ್ಕಾಗಿ ಪ್ರತಿಭಟಿಸಲು ರಸ್ತೆಗೆ ಇಳಿಯುತ್ತಾರೆ. ಆರೋಪಿಯ ಸೆರೆಹಿಡಿದು ಕಠೀಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ ಪೊಲೀಸ್ ಮತ್ತು ವ್ಯವಸ್ಥೆಯ ವಿರುದ್ಧ ಇಡೀ ಹುಬ್ಬಳ್ಳಿ ಜನತೆಯೇ ಸಿಡಿದೇಳುತ್ತಾರೆ. ಪೊಲೀಸ್ ತನಿಖೆಯ ನಂತರ ಆರೋಪಿಯ ಪತ್ತೆಯಾಗುತ್ತದೆ.

ಹೆಚ್ಚಿನ ಕಾರ್ಯಾಚರಣೆ ನಡೆಸಲು ಅರೋಪಿ ರಿತೇಶ್ ಕುಮಾರ್ ವಾಸವಿದ್ದ ಶೆಡ್ ಬಳಿ ಪೊಲೀಸರು ಹೋದಾಗ ಆರೋಪಿ ಪೊಲೀಸರ ವಾಹನ ಮತ್ತು ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಗಾಯಗೊಂಡ ಪೊಲೀಸರು ಆಸ್ಪತ್ರೆಗೆ ದಾಖಲಾಗುತ್ತಾರೆ. ಲೇಡಿ ಪಿಎಸ್ಐ ಅನ್ನಪೂರ್ಣ ಗಾಳಿಯಲ್ಲಿ ಗುಂಡು ಹಾರಿಸಿದಾಗ; ಆತ ತಪ್ಪಿಸಿಕೊಳ್ಳುತ್ತಾನೆ. ಮತ್ತೊಮ್ಮೆ ಹಾರಿಸಿದಾಗ ಆತನ ಕಾಲು ಮತ್ತು ಎದೆಗೆ ಗುಂಡು ತಗಲುತ್ತದೆ. ಕೂಡಲೇ ರಕ್ತಸ್ರಾವ ಆಗುತ್ತಿದ್ದ ಆತನನ್ನು ಕಿಮ್ಸ್‌ಗೆ ಸಾಗಿಸುತ್ತಾರೆ. ಆರೋಪಿ ರಿತೇಶ್‌ಕುಮಾರ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪುತ್ತಾನೆ. ಪ್ರಸ್ತುತ ಆರೋಪಿ ರಿತೇಶ್‌ನ ಮೃತದೇಹ ಅನಾಥ ಸ್ಥಿತಿಯಲ್ಲಿ ಕಿಮ್ಸ್‌ನ ಶವಾಗಾರದಲ್ಲಿದೆ. ಆರೋಪಿ ಸಂಬಂಧಿಕರ ಹುಡುಕಾಟಕ್ಕೆ ಹುಬ್ಬಳ್ಳಿಯಿಂದ ಪೊಲೀಸರು ಬಿಹಾರ ಕಡೆಗೆ ತೆರಳಿದ್ದಾರೆ. ಒಂದು ವೇಳೆ ಸಂಬಂಧಪಟ್ಟವರು ಸಿಗದಿದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವಳಿ ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಜನ ಏನಂತಾರೆ?
5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಯತ್ನ ಮತ್ತು ಕೊಲೆ ವಿಷಯ ತಿಳಿದು ನಾವೆಲ್ಲ ಪ್ರತಿಭಟಿಸಿದ್ದೇವೆ. ಹಾಡಹಗಲೇ ಚಿಕ್ಕಮಕ್ಕಳ ಮೇಲೆ ಈ ರೀತಿಯ ಹೇಯ ಕೃತ್ಯಗಳು ನಡೆಯುತ್ತಿರುವ ಕೆಟ್ಟ ವಾತಾವರಣದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಪೊಲೀಸರು ಅಪರಾಧಿಗೆ ಗುಂಡು ಹಾರಿಸಿದ್ದು ಒಳ್ಳೆಯದೇ ಆಗಿದೆ, ಇನ್ನಾದರೂ ಹೀನ ಮನಸ್ಥಿತಿ ಉಳ್ಳ ಪಾಪಿಗಳು ಇಂತಹ ಹೇಯಕೃತ್ಯಗಳನ್ನು ಮಾಡದಂತೆ ಎಚ್ಚರಿಕೆಯ ಪಾಠ ಕಲಿಯಲಿ. ಈ ಘಟನೆಯಿಂದ ಇಡೀ ಹುಬ್ಬಳ್ಳಿ ಜನತೆಯೇ ಪೊಲೀಸರನ್ನು ಮೆಚ್ಚಿ ಬೆನ್ನುಚಪ್ಪರಿಸುತ್ತಿದೆ. ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ನೇತೃತ್ವದ ಆಡಳಿತಕ್ಕೆ ಜೈಕಾರ ಹಾಕುತ್ತಿದೆ. ಈ ಘಟನೆಯಿಂದ ಪೊಲೀಸ್ ಇಲಾಖೆಯ ಮೇಲೆ ಜನರಲ್ಲಿ ವಿಶ್ವಾಸ ಇಮ್ಮಡಿಗೊಂಡಿದೆ. ಲೇಡಿ ಪಿಎಸ್ಐ ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ್ದಾರೆ. ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದು ಕಾನೂನು ಉಲ್ಲಂಘನೆ ಹೇಗಾಗುತ್ತದೆ? ಎಂದೆಲ್ಲ ಪ್ರಶ್ನಿಸುವ ಮೂಲಕ ಲೇಡಿ ಪಿಎಸ್ಐ ಅನ್ನಪೂರ್ಣ ಬಹಳ ಮಂದಿಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ವಿಚಾರದಲ್ಲಿ ಪೊಲೀಸರು ಮಾಡಿದ್ದು ಕಾನೂನು ಉಲ್ಲಂಘನೆಯಾದರೂ ಎಲ್ಲರಿಗೂ ಪಾಠವಾಗಲಿ ಬಿಡಿ. ದುಷ್ಕರ್ಮಿಗಳನ್ನು ಮಹಾ ಎಂದರೆ ಜೈಲಿಗೆ ಹಾಕುತ್ತಾರೆ. ಪೋಷಣೆ ಮಾಡುತ್ತಾರೆ. ಆ ಅತ್ಯಾಚಾರಿ, ಕೊಲೆಗಾರರು ಪುನಃ ಜೈಲಿನಿಂದ ಹೊರಬಂದನಂತರ ಮತ್ತೆ ಅಂತಹದ್ದೇ ಹೀನಕೃತ್ಯಗಳ ಮಾಡಲು ಮುಂದಾಗುತ್ತಾರೆ. ಇನ್ನು ಅಂತವರು ಬಿಡುಗಡೆಯಾಗಿ ಹೊರ ಬಂದದ್ದನ್ನು ಕಂಡು ಮತ್ತೆ ಹೊಸ ಕೊಲೆಗಾರರು ಹುಟ್ಟಿಕೊಳ್ಳುತ್ತಾರೆ. ಅದರ ಬದಲು ಇಂತಹದ್ದೊಂದು ಖಾಯಿದೆ ಭಾರತದಲ್ಲಿ ಜಾರಿಯಾದರೆ ಅಪರಾಧಗಳಾದರೂ ಕಡಿಮೆ ಆಗುತ್ತವೆ. ಪೊಲೀಸರ ಎನ್‌ಕೌಂಟರ್‌ಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಕರ್ನಾಟಕದ ಪೊಲೀಸರು ಅವಕಾಶ ಸಿಕ್ಕರೆ ಇಂತಹ ಪಾಪಿಗಳನ್ನು ಹೇಳ ಹೆಸರಿಲ್ಲದಂತೆ ನಾಮಾವಶೇಷ ಮಾಡಬಲ್ಲರು ಎಂಬುದನ್ನು ಹುಬ್ಬಳ್ಳಿ ಲೇಡಿ ಸಿಂಗಂ ಪೊಲೀಸ್ ಅಧಿಕಾರಿ ತೋರಿಸಿಕೊಟ್ಟಿದ್ದಾರೆ ಎಂದೆಲ್ಲ ಹೊಗಳುತ್ತಿದ್ದಾರೆ.

ಇನ್ನು ಆರೋಪಿ ಮೇಲೆ ಗುಂಡು ಹಾರಿಸಿ ಎನ್‌ಕೌಂಟರ್ ಮಾಡಿದ ಲೇಡಿ ಪಿಎಸ್ಐ ಅನ್ನಪೂರ್ಣ ಅವರನ್ನು ಸರ್ಕಾರವು ಗುರುತಿಸಿ ಗೌರವಿಸಲೇಬೇಕು ಎಂಬ ಒತ್ತಾಯದ ಕೂಗುಗಳು ಅಲ್ಲಲ್ಲಿ ಕೇಳಿ ಬರುತ್ತಿವೆ. ಈ ಕುರಿತು ಮೃತ ಬಾಲಕಿಯ ಪಾಲಕರು ಪೊಲೀಸ್ ಇಲಾಖೆ ಮತ್ತು ಈ ಘಟನೆಗೆ ಬೆಂಬಲವಾಗಿ ನಿಂತು ಪ್ರತಿಭಟಿಸಿದ ಸಾರ್ವಜನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದಾರೆ. ರಾಜ್ಯ ಸರ್ಕಾರ ಮೃತ ಬಾಲಕಿ ಕುಟುಂಬಕ್ಕೆ 10ಲಕ್ಷ ಪರಿಹಾರಧನ ಘೋಷಿಸಿದೆ. ಲೇಡಿ ಪಿಎಸ್ಐ ಕಾರ್ಯಕ್ಕೆ ಜನಸಾಮಾನ್ಯರು ಅಷ್ಟೇ ಅಲ್ಲದೇ ಗಣ್ಯವ್ಯಕ್ತಿಗಳೂ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಘಟನಾ ವೇಳೆ ಗಾಯಗೊಂಡಿದ್ದ ಲೇಡಿ ಪಿಎಸ್ಐ ಅನ್ನಪೂರ್ಣ ಆರ್ ಎಂ, ಪೊಲೀಸ್ ಸಿಬ್ಬಂದಿ ವೀರೇಶ ಮಹಾಜನಶೆಟ್ಟರ್ ಹಾಗೂ ಯಶವಂತ ಮೊರಬ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಇನ್ನು ‘ಎನ್‌ಕೌಂಟರ್’ ಎಂಬ ಪದವು ರೌಡಿ, ಸಮಾಜಘಾತುಕರನ್ನು ಹೊಡೆದುರುಳಿಸುವ ಕಾರ್ಯಾಚರಣೆಯಾಗಿದೆ. ಯಾವುದೇ ರೌಡಿ ಅಥವಾ ಸಮಾಜಘಾತುಕರು ಪೊಲೀಸರ ಮೇಲೆ ಹಲ್ಲೆ ಅಥವಾ ಕೊಲ್ಲಲು ಯತ್ನಿಸಿದಾಗ ಮಾತ್ರವೇ ಎದುರಿನ ವ್ಯಕ್ತಿ ಅಥವಾ ಆರೋಪಿಯ ಮೇಲೆ ಪೊಲೀಸರು ದಾಳಿ ಮಾಡಬಹುದಾಗಿರುತ್ತದೆ. ಸುಮ್ಮನೇ ಆರೋಪಿಯೊಬ್ಬನ ಮೇಲೆ ಗುಂಡು ಹಾರಿಸಿ ಕೊಂದರೆ ಅದು ಹತ್ಯೆಯೆಂದು ಪರಿಗಣಿಸಲ್ಪಡುತ್ತದೆ. ಅದಕ್ಕೆ ತೀವ್ರ ಸ್ವರೂಪದ ಶಿಕ್ಷೆ ಅನುಭವಿಸಬೇಕಾಗುತ್ತದೆ. ತಮ್ಮ ಆತ್ಮರಕ್ಷಣೆಗಾಗಿ ಗುಂಡು ಹಾರಿಸುವುದು ಎನ್‌ಕೌಂಟರ್ ಆಗುತ್ತದೆ ಎನ್ನಲಾಗುತ್ತದೆ. ಇನ್ನು ಆರೋಪಿ ಎಂದು ತಿಳಿದಮೇಲೆ ಆತನಮೇಲೆ ಗುಂಡು ಹಾರಿಸುವುದು ಕಾನೂನು ಉಲ್ಲಂಘನೆ ಆಗುತ್ತದೆ. ಆರೋಪಿ ಅಥವಾ ಅಪರಾಧಿಗೆ ಶಿಕ್ಷೆ ಕೊಡಲು ನ್ಯಾಯಾಲಯ ಇದೆ. ಯಾರೆ ಆಗಿರಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಮತ್ತು ಒಬ್ಬರ ಜೀವ ತೆಗೆಯುವ ಹಕ್ಕು ಯಾರಿಗೂ ಇಲ್ಲ ಎಂದು ಕೆಲವರ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಏನು ಮಾಡಬೇಕು?
ಯಾವುದೇ ಘಟನೆ ನಡೆದಾಗ ಜವಾಬ್ದಾರಿಯುತ ಮತ್ತು ನಾಗರೀಕ ಸಾರ್ವಜನಿಕರು ನಾವೇನು ಮಾಡಬೇಕಿದೆ? ಏನುಮಾಡಲು ಸಾಧ್ಯ? ಎಂಬ ಪ್ರಶ್ನೆಗಳನ್ನು ಹಾಕಿಕೊಳ್ಳಬೇಕಿದೆ. ಸಾಮಾನ್ಯವಾಗಿ ದುಡಿಮೆ ಅರಸಿಕೊಂಡು ಒಂದು ಕಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುವವರೇ ಹೆಚ್ಚು. ಊರಿಗೆ ಹೊಸಬರು ಬಂದಾಗ ಸ್ಥಳೀಯರು ಬೇರೆ ಕಡೆಯಿಂದ ಬರುವವರ ಕಾರ್ಯ ಚಟುವಟಿಕೆಗಳ ಬಗ್ಗೆ ಗಮನವಹಿಸಬೇಕು. ಯಾರಿಗಾದರೂ ಕೆಲಸ ಕೊಡುವ ಮುಂಚೆ ಅವರ ಹಿನ್ನೆಲೆ ಹುಡುಕಬೇಕಾಗುತ್ತದೆ. ಅನುಮಾನಾಸ್ಪದವಾಗಿ ಯಾರೇ ಕಂಡು ಬಂದರೂ ಹತ್ತಿರದ ಪೊಲೀಸ್ ಠಾಣೆಯ ಗಮನಕ್ಕೆ ತರುವ ರೂಢಿಯನ್ನು ಜನತೆ ಬೆಳೆಸಿಕೊಳ್ಳಬೇಕಿದೆ.
ಇನ್ನು ಚಿಕ್ಕಮಕ್ಕಳು ಮನೆಯ ಹೊಸ್ತಿಲ ದಾಟಿ ಹೊರಗಡೆ ಆಟವಾಡಲು ಹೋದಾಗ; ಅವರ ಆಟಪಾಠಗಳ ಕಡೆಗೆ ಗಮನ ಹರಿಸಬೇಕು. ಅದರೊಂದಿಗೆ ಸ್ಥಳೀಯ ನೆರೆಹೊರೆಯವರು ಮಕ್ಕಳ ಕಡೆಗೆ ಕಣ್ಣಿರಿಸಬೇಕು. ಬೇರೆಯವರ ಮಕ್ಕಳು ಏನಾದರೆ ನಮಗೇನು ಅನ್ನುತ್ತ ಕೂಡ್ರುವ ಅಮಾನವೀಯ ಮನಸ್ಥಿತಿ ಬದಲಾಗಬೇಕಿದೆ. ಎಲ್ಲರೂ ಒಂದೇ ಎಂಬ ವಿಶಾಲ ಮನೋಭಾವ ಮತ್ತು ಅಪರಿಚಿತರು ಅಥವಾ ಪರಿಚಿತರು ಮಕ್ಕಳನ್ನು ಅಪಹರಿಸುವ ಸಂದರ್ಭದಲ್ಲಿ ಮಕ್ಕಳು ಯಾವ ರೀತಿ ತಮ್ಮನ್ನು ತಾವು ಕಾಪಾಡಿಕೊಳ್ಳಬೇಕು ಎನ್ನುವ ಮುಂಜಾಗೃತಾ ಮೂಡಿಸುವ ಅರಿವು ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಹಮ್ಮಿಕೊಳ್ಳಬೇಕು. ಇಂತಹ ಪಾಠಗಳು ಮೊದಲು ಮನೆಗಳಿಂದಲೇ ಶುರುವಾಗಬೇಕಿದೆ.

ಕರ್ನಾಟಕದಲ್ಲಿ ಅನ್ಯ ರಾಜ್ಯದಿಂದ ವಲಸೆ ಬಂದು ದುಡಿಯುವ ಕಾರ್ಮಿಕರೇ ಹೆಚ್ಚಿದ್ದಾರೆ. ಯಾವುದೇ ರಾಜ್ಯದ ನಿವಾಸಿಗಳಾಗಿರಲಿ ಅವರಿಗೆ ಅವರದ್ದೇ ರಾಜ್ಯಗಳಲ್ಲಿ ಕೆಲಸ ಕೊಡಬೇಕು. ಅನ್ಯ ರಾಜ್ಯದಿಂದ ಬೇರೆ ಕಡೆಗೆ ದುಡಿಮೆಗಾಗಿ ಬರುವವರು ಹೆಂಡರು ಮಕ್ಕಳನ್ನು ಬಿಟ್ಟು ಬರಬೇಕಾಗುತ್ತದೆ. ಇನ್ನು ನಮ್ಮ ರಾಜ್ಯದಲ್ಲಿ ಅನ್ಯ ರಾಜ್ಯದವರಿಗೇ ಹೆಚ್ಚಿನ ಉದ್ಯೋಗವಕಾಶಗಳು ಸಿಕ್ಕಿರುವುದನ್ನು ಕಾಣಬಹುದು. ಅದನ್ನು ತಪ್ಪಿಸಿ ಸ್ಥಳೀಯರಿಗೆ ಅವಕಾಶ ಮಾಡಿಕೊಟ್ಟರೆ ಇಂತಹ ಅಹಿತಕರ ಘಟನೆಗಳ ಸಂಖ್ಯೆ ಕಡಿಮೆ ಆಗಬಹುದು. ಸರ್ಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು.
ಈ ಒಂದು ಘಟನೆಯಿಂದ ಇಂತಹ ಹೀನ ಕೃತ್ಯಗಳು ಇನ್ನಾದರೂ ನಡೆಸದಂತೆ ದುಷ್ಕರ್ಮಿಗಳು ಪಾಠ ಕಲಿಯಲಿ. ಎಲ್ಲ ಕಡೆಯೂ ಅಪರಾಧಿಗಳಿಗೆ ಇದೇ ರೀತಿಯ ಶಿಕ್ಷೆ ಕೊಡುವಂತಾಗಲಿ ಎಂದು ಮಹಿಳೆಯರು, ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಿದೆ ಎಂದು ಈ ಮೂಲಕ ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸೆಲ್ಯೂಟ್ ಮಾಡುತ್ತಿದ್ದಾರೆ. ಈ ಹಿಂದೆಯೂ ಎನ್‌ಕೌಂಟರ್ ಆಗಿವೆ. ಆದರೆ ಅತ್ಯಾಚಾರ, ದುಷ್ಕರ್ಮ ನಿಂತಿಲ್ಲ. ಹಾಗಿದ್ದಾಗ ಎನ್‌ಕೌಂಟರ್ ಕೂಡಾ ಶಾಶ್ವತ ಪರಿಹಾರ ಎಂಬುದು ಸುಳ್ಳು ಎಂದಾಗುತ್ತದೆ ಎಂಬುದು ಮತ್ತೊಂದು ವಾದ. ಅದೇನೇ ಇದ್ದರೂ ಇಂತಹ ಅಹಿತಕರ ಘಟನೆಗಳಿಗೆ ಸ್ಪೂರ್ತಿಯಾಗುವ ಡ್ರಗ್ಸ್‌ನಂತಹ ಮಾದಕ ವಸ್ತುಗಳಿಂದ ಯುವ ಜನತೆಯನ್ನು ಹೊರತರಬೇಕು. ಈ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ಮುನ್ನೆಚ್ಚರಿಕೆ ವಹಿಸಬೇಕಿದೆ.